ನವದೆಹಲಿ: “ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ರಾಹುಲ್ ಗಾಂಧಿ (Rahul Gandhi) ಅವಮಾನಿಸಿದ್ದಾರೆ. ಹಾಗಾಗಿ, ಅವರು ಕ್ಷಮೆಯಾಚಿಸಬೇಕು” ಎಂದು ಸಂಸತ್‌ನಲ್ಲಿ ಬಿಜೆಪಿ ಸದಸ್ಯರು ಆಗ್ರಹಿಸುತ್ತಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಅವರು, “ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿಲ್ಲ” ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂಬುದಾಗಿ ಮನವಿ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, “ನಾನು ಸಂಸತ್ ಪ್ರವೇಶಿಸಿದ ಒಂದೇ ನಿಮಿಷಕ್ಕೆ ಅಧಿವೇಶನ ಮುಂದೂಡಲಾಗಿದೆ. ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶವೇ ಸಿಕ್ಕಿಲ್ಲ. ಅವಕಾಶ ನೀಡಿದರೆ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಸುದ್ದಿಗೋಷ್ಠಿ
“ನಾನು ಲಂಡನ್‌ನಲ್ಲಿ ಭಾರತದ ವಿರುದ್ಧವಾಗಿ ಏನನ್ನೂ ಮಾತನಾಡಿಲ್ಲ. ಅದಾನಿ ಅವರ ಬಗ್ಗೆ ಮಾತನಾಡುವುದು ದೇಶ ವಿರೋಧವಲ್ಲ. ಅಷ್ಟಕ್ಕೂ, ನರೇಂದ್ರ ಮೋದಿ ಹಾಗೂ ಅದಾನಿ ಅವರಿಗೆ ಇರುವ ಸಂಬಂಧವೇನು? ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ನಾನು ಉತ್ತರ ನೀಡುತ್ತೇನೆ. ಆದರೆ, ನನಗೆ ಸಂಸತ್ತಿನಲ್ಲಿ ಮಾತನಾಡಲು ಬಿಡುತ್ತಿಲ್ಲ. ಹಾಗಾಗಿ, ನಾನು ಹೊರಗೆ ಬಂದು ಮಾತನಾಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
“ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅಮೆರಿಕ, ಬ್ರಿಟನ್ ಭಾರತದ ಕುರಿತು ಮಾತನಾಡಬೇಕು” ಎಂಬುದು ಸೇರಿ ಹಲವು ವಿಷಯಗಳ ಕುರಿತು ರಾಹುಲ್ ಗಾಂಧಿ ಮಾತನಾಡಿದ್ದರು. ಆದರೆ, ವಿದೇಶದಲ್ಲಿ ನಿಂತು ರಾಹುಲ್ ಗಾಂಧಿ ಅವರು ಭಾರತವನ್ನು ಅವಮಾನಿಸಿದ್ದಾರೆ. ಹಾಗಾಗಿ, ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಚಿವರು, ಸಂಸದರು ಸಂಸತ್ತಿನಲ್ಲಿ ಆಗ್ರಹಿಸುತ್ತಿದ್ದಾರೆ.
ಕಿರಣ್ ರಿಜಿಜು ತಿರುಗೇಟು
ರಾಹುಲ್ ಗಾಂಧಿ ಅವರ ಆರೋಪಗಳಿಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ. “ರಾಹುಲ್ ಗಾಂಧಿ ಒಬ್ಬ ಸಂಸದ. ಅವರು ಬೇರೆ ಸದಸ್ಯರಿಗಿಂತ ದೊಡ್ಡವರಲ್ಲ. ಅಷ್ಟಕ್ಕೂ, ಸಂಸತ್ತನ್ನು ಅವರು ತಮ್ಮ ಆಸ್ತಿ ಎಂಬಂತೆ ವರ್ತಿಸಬಾರದು. ಅವರು ಸಂಸತ್ತಿನ ಒಳಗೆ ಹಾಗೂ ಹೊರಗೆ ಸುಳ್ಳು ಹೇಳಿದ್ದಾರೆ. ಅವರು ನಮ್ಮ ಸಂಸತ್ತಿಗಿಂತ ದೊಡ್ಡವರಲ್ಲ” ಎಂದಿದ್ದಾರೆ.
ಇದನ್ನೂ ಓದಿ: Budget Session: ರಾಹುಲ್ ಗಾಂಧಿ ಲಂಡನ್ ಹೇಳಿಕೆ ಗಲಾಟೆ; ರಾಜ್ಯಸಭೆ, ಲೋಕಸಭೆ ಕಲಾಪ ಮುಂದೂಡಿಕೆ