ನವದೆಹಲಿ: ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಕೇಂದ್ರ ಸರ್ಕಾರವನ್ನು ತೀಕ್ಷ್ಣ ಹಾಗೂ ಹರಿತ ಪದಗಳಿಂದ ಟೀಕಿಸುತ್ತಿದ್ದ ರಾಹುಲ್ ಗಾಂಧಿ (Rahul Gandhi) ಅವರೀಗ ತಂತ್ರ ಬದಲಾಯಿಸಿದ್ದಾರೆ. ಅದರಲ್ಲೂ, “ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಅನ್ನು ನನ್ನ ಗುರುವಾಗಿ ಪರಿಗಣಿಸುತ್ತೇನೆ” ಎಂದು ಹೇಳುವ ಮೂಲಕ ವಿಭಿನ್ನ ಹಾಗೂ ವಿಡಂಬನಾತ್ಮಕವಾಗಿ ತಿರುಗೇಟು ನೀಡಿದ್ದಾರೆ.
“ಭಾರತ್ ಜೋಡೋ ಯಾತ್ರೆಯು ಸಾಮಾನ್ಯವಾಗಿತ್ತು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುವ ಸಣ್ಣ ಪಾದಯಾತ್ರೆಯಾಗಿತ್ತು. ಆದರೆ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಯಾವಾಗ ಯಾತ್ರೆಯನ್ನು ಗುರಿಯಾಗಿಸಿ ದಾಳಿ, ಟೀಕೆ ಮಾಡಲು ಆರಂಭಿಸಿದರೋ, ಅಲ್ಲಿಂದ ಇದು ಜನರ ಯಾತ್ರೆಯಾಯಿತು. ಹಾಗಾಗಿ, ನಾನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಧನ್ಯವಾದ ತಿಳಿಸುತ್ತೇನೆ” ಎಂದಿದ್ದಾರೆ.
“ನಾನು ಕೇಂದ್ರ ಸರ್ಕಾರವನ್ನು ಟೀಕಿಸಿದರೆ, ಅವರು ಸೇನೆಯ ಬಗ್ಗೆ ಮಾತನಾಡಿದೆ ಎನ್ನುತ್ತಾರೆ. ಭಾರತ್ ಜೋಡೋ ಯಾತ್ರೆಯನ್ನು ಟೀಕಿಸುತ್ತಾರೆ. ತಪ್ಪುಗಳನ್ನು ಮುಚ್ಚಿಕೊಳ್ಳಲು ಸೇನೆಯ ಹೆಸರು ಬಳಸುತ್ತಾರೆ. ಇದನ್ನೆಲ್ಲ ನೋಡಿದರೆ, ನನಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಗುರು ಇದ್ದಂತೆ. ಏಕೆಂದರೆ, ಮುಂದಿನ ದಿನಗಳಲ್ಲಿ ನಾನು ಯಾವ ತಪ್ಪು ಮಾಡಬಾರದು, ಬಿಜೆಪಿ, ಆರ್‌ಎಸ್‌ಎಸ್‌ನಂತೆ ಇರಬಾರದು ಎಂಬುದನ್ನು ತಿಳಿದುಕೊಂಡಿದ್ದೇನೆ” ಎಂದಿದ್ದಾರೆ.
ಇದನ್ನೂ ಓದಿ | ಭದ್ರತಾ ವೈಫಲ್ಯ ಆಗಿದ್ದಲ್ಲ, ರಾಹುಲ್ ಗಾಂಧಿಯೇ ನಿಯಮ ಉಲ್ಲಂಘಿಸಿದ್ದಾರೆ; ಪ್ರತಿಕ್ರಿಯಾ ಪತ್ರ ಬರೆದ ಸಿಆರ್ಪಿಎಫ್