Site icon Vistara News

ನಾನೇನು ಮಾಡಿದ್ದೆನೋ ಅದು ಆಗ ಸರಿಯಾಗಿಯೇ ಇತ್ತು; ಸುಪ್ರೀಂಕೋರ್ಟ್ ತೀರ್ಪಿಗೆ ಮಾಜಿ ರಾಜ್ಯಪಾಲ ಕೋಶ್ಯಾರಿ ಪ್ರತಿಕ್ರಿಯೆ

Bhagat Singh Koshyari

#image_title

ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ (Eknath Shinde) ಅವರು ಶಿವಸೇನೆ ಪಕ್ಷವನ್ನು (Shivsena) ಸೀಳಿಕೊಂಡು ಎದ್ದುಬಂದು, ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿಯಾದ ಮೇಲೆ ಎಷ್ಟೆಷ್ಟೆಲ್ಲ ಬೆಳವಣಿಗೆಗಳು ನಡೆದು ಹೋದವು. ಅದೆಲ್ಲದರ ಮಧ್ಯೆ ಸುಪ್ರೀಂಕೋರ್ಟ್​​ನಲ್ಲಿ ಕಾನೂನು ಹೋರಾಟವೂ ನಡೆಯುತ್ತಿತ್ತು. ಇಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್, ‘ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬಣದ ಅಧಿಕಾರ ಮರುಸ್ಥಾಪನೆ ಅಸಾಧ್ಯ’ ಎಂದು ಹೇಳಿದೆ. ಆದರೆ ಸುಪ್ರೀಂಕೋರ್ಟ್​ ಅಂದಿನ ರಾಜ್ಯಪಾಲ ಭಗತ್​ ಸಿಂಗ್ ಕೋಶ್ಯಾರಿ ಕ್ರಮವನ್ನು ಅನುಮೋದಿಸಿರಲಿಲ್ಲ. ಉದ್ಧವ್ ಠಾಕ್ರೆ ಬಹುಮತ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಕೋಶ್ಯಾರಿ ಅವರ ಎದುರು ವಸ್ತುನಿಷ್ಠ ದಾಖಲೆಗಳು ಇರಲಿಲ್ಲ. ಹಾಗಿದ್ದಾಗ್ಯೂ ಬರೀ ಏಕನಾಥ ಶಿಂಧೆ ಬಣದ 34 ಶಾಸಕರ ಮನವಿ ಆಧರಿಸಿ ಅವರು ಬಹುಮತ ಸಾಬೀತು ಪಡಿಸಲು ಕರೆದಿದ್ದು ತಪ್ಪು’ ಎಂದು ಸುಪ್ರೀಂಕೋರ್ಟ್​ ಹೇಳಿತ್ತು.

ಸುಪ್ರೀಂಕೋರ್ಟ್​ನ ಈ ಹೇಳಿಕೆಗೆ ಮಹಾರಾಷ್ಟ್ರ ಮಾಜಿ ರಾಜ್ಯಪಾಲ, ಅಂದು ಶಿಂಧೆ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ಆ ಬಣಕ್ಕೆ ಬಹುಮತ ಸಾಬೀತಿಗೆ ಅವಕಾಶ ಮಾಡಿಕೊಟ್ಟ ಭಗತ್ ಸಿಂಗ್ ಕೋಶ್ಯಾರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಅಂದು ನಾನೇನು ಮಾಡಿದ್ದೇನೋ ಆ ಸಂದರ್ಭದಲ್ಲಿ ಅದು ಸರಿಯಾಗಿಯೇ ಇದೆ. ಅದಾದ ಮೇಲೆ ಯಾರಾದರೂ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಅದು ನನ್ನ ತಪ್ಪಲ್ಲ. ನಾನು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದೆನೋ ಅದು ಸರಿಯಾಗಿದೆ. ಈಗ ನಾನು ರಾಜಕೀಯ ವಿಚಾರಗಳಿಂದ ಸಂಪೂರ್ಣವಾಗಿ ದೂರ ಸರಿದಿದ್ದೇನೆ ಎಂದು ಹೇಳಿದ್ದಾರೆ.

’ನಾನು ಕಾನೂನು ವಿದ್ಯಾರ್ಥಿಯಲ್ಲ. ಸುಪ್ರೀಂಕೋರ್ಟ್ ಇವತ್ತು ಈ ಬಗ್ಗೆ ಮಾತಾಡಿದೆ ಎಂದರೆ ಅದು ನನ್ನ ತಪ್ಪಲ್ಲ. ಸುಪ್ರೀಂಕೋರ್ಟ್ ಅದರ ಕೆಲಸ ಮಾಡಿದೆ. ವಿಧಾನಸಭೆ ವ್ಯವಹಾರಗಳ ಬಗ್ಗೆ ನನಗೆ ಇದ್ದ ತಿಳಿವಳಿಕೆ ಆಧಾರದ ಮೇಲೆ, ಆ ಕ್ಷಣಕ್ಕೆ ಏನು ನಿರ್ಧಾರ ತೆಗೆದುಕೊಳ್ಳಬಹುದಿತ್ತೋ, ತೆಗೆದುಕೊಂಡಿದ್ದೇನೆ’ ಎಂದಿದ್ದಾರೆ. ‘ಉದ್ಧವ್ ಠಾಕ್ರೆ ರಾಜೀನಾಮೆ ಬಗ್ಗೆ ಮಾತನಾಡಿದ ಅವರು ‘ಯಾರಾದರೂ ಬಂದು ನನಗೆ ರಾಜೀನಾಮೆ ಕೊಟ್ಟರೆ, ನಾನು ಅವರಿಗೆ ಏನಾದರೂ ಸಲಹೆ ಕೊಡಲು ಸಾಧ್ಯವೇ?’ ಎಂದೂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Maharashtra Political Crisis: ಶಿವಸೇನೆ ಬಿಕ್ಕಟ್ಟಿನ ವೇಳೆ ರಾಜ್ಯಪಾಲರ ನಡೆ ಏಕಪಕ್ಷೀಯ ಎಂದ ಸುಪ್ರೀಂ ಕೋರ್ಟ್

Exit mobile version