Site icon Vistara News

ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿ ದುಡ್ಡಿಲ್ಲ; ನಿರ್ಮಲಾ ಸೀತಾರಾಮನ್ ಬಿಚ್ಚಿಟ್ಟ ರಹಸ್ಯ ಇದು!

Nirmala Sitharaman

I Don't Have Money To Contest Lok Sabha Elections: Nirmala Sitharaman

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ಬಿಜೆಪಿಯು ಇದುವರೆಗೆ 400 ಅಭ್ಯರ್ಥಿಗಳಿಗೆ ಟಿಕೆಟ್‌ (BJP Candidates List) ಘೋಷಣೆ ಮಾಡಿದೆ. ಬಿಜೆಪಿ ಅಭ್ಯರ್ಥಿಗಳೂ ಅಷ್ಟೇ, ಟಿಕೆಟ್‌ ಸಿಕ್ಕ ಕೂಡಲೇ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ತಾವೇಕೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಅವರ ಬಳಿ ಚುನಾವಣೆಯಲ್ಲಿ ಸ್ಪರ್ಧಿಸುವಷ್ಟು ಹಣವಿಲ್ಲದ ಕಾರಣ ಸ್ಪರ್ಧಿಸುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ.

ಟೈಮ್ಸ್‌ ನೌ ಸಮಿಟ್‌ 2024ರಲ್ಲಿ ಪಾಲ್ಗೊಂಡ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಬಳಿ ದುಡ್ಡಿಲ್ಲ ಎಂಬುದನ್ನು ತಿಳಿಸಿದ್ದಾರೆ. “ಆಂಧ್ರಪ್ರದೇಶ ಅಥವಾ ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ ಕಣಕ್ಕಿಳಿಯುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆಯ್ಕೆಗಳನ್ನು ನೀಡಿದ್ದರು. ಆದರೆ, ನನ್ನ ಬಳಿ ಲೋಕಸಭೆ ಚುನಾವಣೆಯಲ್ಲಿ ಖರ್ಚು ಮಾಡುವಷ್ಟು ಹಣವಿಲ್ಲದ ಕಾರಣ ನಾನು ಲೋಕಸಭೆ ಚುನಾವಣೆ ಕಣದಿಂದ ಹಿಂದೆ ಸರಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನನಗೆ ಆಯ್ಕೆಗಳನ್ನು ನೀಡಿದಾಗ ತುಂಬ ಯೋಚನೆ ಮಾಡಿದೆ. ಒಂದು ವಾರ ಅಥವಾ 10 ದಿನ ಈ ಕುರಿತು ಯೋಚನೆ ಮಾಡಿದ ಬಳಿಕ ಅವರ ಬಳಿ ತೆರಳಿದೆ. ನನ್ನ ಹತ್ತಿರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಷ್ಟು ಹಣವಿಲ್ಲದ ಕಾರಣ ಸ್ಪರ್ಧಿಸಲು ಆಗುವುದಿಲ್ಲ ಎಂದು ತಿಳಿಸಿದೆ. ತಮಿಳುನಾಡು ಆದರೂ ಅಷ್ಟೇ, ಆಂಧ್ರಪ್ರದೇಶವಾದರೂ ಅಷ್ಟೇ. ಸ್ಪರ್ಧಿಸಲು ಆಗುವುದಿಲ್ಲ ಎಂಬುದಾಗಿ ತಿಳಿಸಿದೆ” ಎಂದು ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election: ಕಾಂಗ್ರೆಸ್‌ ಬಳಿ ದುಡ್ಡಿಲ್ಲ ಎಂದ ಖರ್ಗೆ; ಚುನಾವಣೆಯಲ್ಲಿ ಪಕ್ಷದ ಗತಿ ಏನು?

“ಚುನಾವಣೆಯಲ್ಲಿ ಸ್ಪರ್ಧಿಸಲು ಜಾತಿ, ಧರ್ಮ ಸೇರಿ ಹಲವು ಕಾರಣಗಳು ಮುಖ್ಯವಾಗುತ್ತವೆ. ಅವುಗಳಲ್ಲಿ ಹಣವೂ ಬೇಕಾಗುತ್ತದೆ. ನನ್ನ ಸಂಬಳ, ನನ್ನ ದುಡಿಮೆ ಹಾಗೂ ನಾನು ಮಾಡಿರುವ ಉಳಿತಾಯವನ್ನು ಲೆಕ್ಕ ಹಾಕಿದರೆ, ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತುಕೊಂಡೆ. ಇದೇ ವಾದವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮುಂದಿಟ್ಟೆ” ಎಂಬುದಾಗಿ ಹೇಳಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version