ಪಟನಾ: ಎನ್ಡಿಎ ಒಕ್ಕೂಟ ತೊರೆದು, ಆರ್ಜೆಡಿ-ಕಾಂಗ್ರೆಸ್ನೊಟ್ಟಿಗೆ ಸೇರಿ ಮಹಾ ಘಟ್ ಬಂಧನ್ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ಸಿಕ್ಕಾಪಟೆ ದೂರವಾಣಿ ಕರೆಗಳು ಬರುತ್ತಿವೆಯಂತೆ. ‘ಮುಂದೇನು ಮಾಡುತ್ತೀರಿ? ನೀವ್ಯಾಕೆ ಬಿಜೆಪಿ ಮೈತ್ರಿ ಬಿಟ್ಟಿರಿ?, ನೀವು ಒಳ್ಳೆ ಕೆಲಸ ಮಾಡಿದ್ದೀರಿ’, 2024ರ ಲೋಕಸಭಾ ಚುನಾವಣೆಯಲ್ಲಿ ನೀವು ಪ್ರಧಾನಿ ಅಭ್ಯರ್ಥಿಯಂತೆ..ಹೌದಾ?’ ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ ಎಂದು ಸ್ವತಃ ನಿತೀಶ್ ಕುಮಾರ್ ಅವರೇ ಹೇಳಿಕೊಂಡಿದ್ದಾರೆ. ರಾಷ್ಟ್ರಪತಿ-ಉಪರಾಷ್ಟ್ರಪತಿ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಎನ್ಡಿಎ ಒಕ್ಕೂಟ ತೊರೆದಿರುವ ನಿತೀಶ್ ಕುಮಾರ್ ನಡೆಯನ್ನು ವಿವಿಧ ಮಾದರಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ, ‘ನಿತೀಶ್ ಕುಮಾರ್ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ಬಯಸಿದ್ದರು. ಎನ್ಡಿಎದಲ್ಲೇ ಇದ್ದರೆ, ಇದು ಸಾಧ್ಯವಿಲ್ಲ ಎಂದೇ ಅಲ್ಲಿಂದ ಹೊರಗೆ ಬಂದಿದ್ದಾರೆ’ ಎಂಬುದೇ ಅನೇಕರ ಅಭಿಪ್ರಾಯ. ಆದರೆ ನಿತೀಶ್ ಕುಮಾರ್ ಇದನ್ನು ಅಲ್ಲಗಳೆದಿದ್ದಾರೆ.
ಮಹಾ ಘಟ್ ಬಂಧನ್ ಸರ್ಕಾರ ರಚನೆಯಾಗುತ್ತಿದ್ದಂತೆ, ‘ನಾವು ನರೇಂದ್ರ ಮೋದಿಯನ್ನು 2024ರ ಚುನಾವಣೆಯಲ್ಲಿ ನೋಡಿಕೊಳ್ತೇವೆ’ ಎಂದು ಸವಾಲು ಹಾಕಿದ್ದ ನಿತೀಶ್ ಕುಮಾರ್, ‘ನಾನು ಪ್ರಧಾನಿ ಅಭ್ಯರ್ಥಿಯಲ್ಲ’ ಎಂದಿದ್ದರು. ಆದರೆ ಮಾಧ್ಯಮದವರು ನಿತೀಶ್ ಸಿಕ್ಕಾಗಲೆಲ್ಲ ಇದೇ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ಇಂದು ಕೂಡ ನಿತೀಶ್ ಕುಮಾರ್ ಅವರಿಗೆ ಮಾಧ್ಯಮದವರು ಮತ್ತದೇ ಪ್ರಶ್ನೆ ಹಾಕಿದ್ದಾರೆ. ಆಗ ಕೈಮುಗಿಯುತ್ತ ನಿಂತು, ಮುಗುಳ್ನಗುತ್ತ ಉತ್ತರಿಸಿದ ನಿತೀಶ್ ಕುಮಾರ್ ‘ನನ್ನ ಹೃದಯದ ಮೂಲೆಯಲ್ಲಿ ಎಲ್ಲಿಯೂ ಅಂಥ ಬಯಕೆಗಳು ಇಲ್ಲ. ಎಲ್ಲ ಪ್ರತಿಪಕ್ಷಗಳನ್ನೂ ಒಗ್ಗೂಡಿಸುವ ಆಸೆ ನನ್ನದು. ಸ್ಥಳೀಯವಾಗಿ ಇರುವ ಒಂದಷ್ಟು ಸಮಸ್ಯೆಗಳನ್ನು ಮೊದಲು ಪರಿಹಾರ ಮಾಡಬೇಕು, ನಂತರ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು. ನನಗೆ ಅನೇಕರು ಕರೆ ಮಾಡಿ, ಎಲ್ಲ ರೀತಿಯ ಪ್ರಸ್ತಾಪ ಇಡುತ್ತಿದ್ದಾರೆ’ ಎಂದು ತಿಳಿಸಿದರು.
ನೀವು ಎನ್ಡಿಎ ಮೈತ್ರಿ ಕೂಟ ಬಿಟ್ಟಿದ್ದು, ನಮಗೆ ಮಾಡಿದ ನಂಬಿಕೆ ದ್ರೋಹ ಎಂದು ಬಿಜೆಪಿ ಹೇಳುತ್ತಿದೆಯಲ್ಲ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಇದೀಗ ಬಿಜೆಪಿಯಲ್ಲಿ ಯಾರು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೋ, ಅವರೆಲ್ಲ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಅವರು ಹೀಗೆ ನನಗೆ ಬೈಯ್ಯುವುದರಿಂದ ವರಿಷ್ಠರು ಮೆಚ್ಚಿ, ಅವರಿಗೆ ಒಳ್ಳೆಯ ಹುದ್ದೆ, ಸ್ಥಾನ ಕೊಡಬಹುದು. ಅವರಿಗೆ ಒಳ್ಳೆಯದಾಗುತ್ತದೆ ಎಂದಾದರೆ, ಏನು ಬೇಕಾದರೂ ಹೇಳಿಕೊಳ್ಳಲಿ ಬಿಡಿ’ ಎಂದರು.
ಆಗಸ್ಟ್ 8ರವರೆಗೂ ಶಾಂತವಾಗಿಯೇ ಇದ್ದ ಬಿಹಾರ ರಾಜಕೀಯ ಏಕಾಏಕಿ ವಿಪರೀತ ಬೆಳವಣಿಗೆಗಳನ್ನು ಕಂಡಿತು. ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರ ಪತನಗೊಂಡು, ಈಗ ಆರ್ಜೆಡಿ-ಜೆಡಿಯು-ಕಾಂಗ್ರೆಸ್ ಮಹಾ ಘಟ್ ಬಂಧನ್ ಸರ್ಕಾರ ಆಡಳಿತಕ್ಕೆ ಬಂದಿದೆ. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ 2017ರಲ್ಲಿ, ಆರ್ಜೆಡಿ ಮೈತ್ರಿ ಸಾಧ್ಯವೇ ಇಲ್ಲವೆಂದು ಕಳಚಿಕೊಂಡು ಬಂದು ಮತ್ತೆ ಎನ್ಡಿಎಗೆ ಸೇರಿದ್ದ ನಿತೀಶ್ ಕುಮಾರ್, ಈಗ ಮತ್ತದೇ ಕೂಟ ಸೇರಿಕೊಂಡಿದ್ದೇಕೆ ಎಂಬ ಕುತೂಹಲಕ್ಕೆ ಮಾತ್ರ ಸರಿಯಾದ ಉತ್ತರ ಸಿಕ್ಕಿಲ್ಲ.
ಇದನ್ನೂ ಓದಿ: ಲೋಕಸಭೆ ಚುನಾವಣೆ ಸಮೀಕ್ಷೆ | ನಿತೀಶ್ ದೂರ: ಈಗಲೇ ಎಲೆಕ್ಷನ್ ನಡೆದರೆ ಎನ್ಡಿಎಗೆ ಸಿಗುವ ಸ್ಥಾನ ಎಷ್ಟು?