ನವದೆಹಲಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೂ ಹಿಂದುತ್ವವನ್ನು ಪ್ರತಿಪಾದಿಸುವ, ಅಸ್ಸಾಂನ ಫೈರ್‌ಬ್ರ್ಯಾಂಡ್ ಮುಖ್ಯಮಂತ್ರಿ ಎಂದೇ ಖ್ಯಾತಿಯಾದ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಾಗುತ್ತಾರೆ. ಈಗ ಅವರು “ನನಗೆ ಮುಸ್ಲಿಮರ ಮತಗಳು ಬೇಕಾಗಿಲ್ಲ. ನಾನು ಅವರನ್ನು ಓಲೈಸುವುದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಅವರು ಮತ ಬ್ಯಾಂಕ್ ವಿರೋಧಿಸುತ್ತ ಈ ರೀತಿ ಹೇಳಿದ್ದಾರೆ.
ಹೌದು, ಎನ್‌ಡಿಟಿವಿಗೆ ಸಂದರ್ಶನ ನೀಡುವ ವೇಳೆ ಮುಸ್ಲಿಮರ ಮತಗಳ ಕುರಿತು ಹಿಮಂತ ಬಿಸ್ವಾ ಶರ್ಮಾ ಪ್ರಸ್ತಾಪಿಸಿದರು. “ನನಗೆ ಈಗ ಮುಸ್ಲಿಮರ ಮತಗಳು ಬೇಕಾಗಿಲ್ಲ. ಈಗಿನ ರಾಜಕಾರಣದ ಪ್ರಮುಖ ಸಮಸ್ಯೆ ಎಂದರೆ ವೋಟ್ ಬ್ಯಾಂಕ್. ನಾನು ಪ್ರತಿ ತಿಂಗಳು ಮುಸ್ಲಿಮರ ಗಲ್ಲಿಗಳಿಗೆ ಭೇಟಿ ನೀಡುತ್ತೇನೆ. ಅವರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. ಆದರೆ, ನನಗೆ ಮತ ಬ್ಯಾಂಕ್ ಇಷ್ಟವಾಗುವುದಿಲ್ಲ. ಹಾಗಾಗಿ, ನನಗೀಗ ಮುಸ್ಲಿಮರ ಮತಗಳು ಬೇಕಿಲ್ಲ. ಅವರನ್ನು ಅಭಿವೃದ್ಧಿಗೊಳಿಸಿ ಮತ ಕೇಳುತ್ತೇನೆ” ಎಂದು ತಿಳಿಸಿದರು.
“ಮುಸ್ಲಿಮರ ಮತ ಬ್ಯಾಂಕ್‌ಗಿಂತ ಅವರನ್ನು ಏಳಿಗೆಯತ್ತ ಕೊಂಡೊಯ್ಯುವುದು ಮುಖ್ಯ. ಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್ ಅವರ ಶ್ರೇಯೋಭಿವೃದ್ಧಿಗೆ ಗಮನ ಹರಿಸಿಲ್ಲ. ಮುಸ್ಲಿಮರು ಜಾಸ್ತಿ ಇರುವ ಪ್ರದೇಶಗಳಲ್ಲಿ ಕಾಂಗ್ರೆಸ್ ಶಾಲೆಗಳನ್ನು ನಿರ್ಮಿಸಿಲ್ಲ. ನಾನು 10-15 ವರ್ಷ ಮುಸ್ಲಿಮರ ಏಳಿಗೆಗೆ ಶ್ರಮಿಸುತ್ತೇನೆ. ಇದಾದ ಬಳಿಕ ನಾನು ಅವರ ಬಳಿ ವೋಟು ಕೇಳಲು ಹೋಗುತ್ತೇನೆ. ಅಷ್ಟರಮಟ್ಟಿಗೆ ನಾನು ಮತ ಬ್ಯಾಂಕ್ ವಿರೋಧಿ” ಎಂದು ಹೇಳಿದರು.
“ಮುಸ್ಲಿಮರಿಗೆ ಕಾಂಗ್ರೆಸ್ ಜತೆ ಎಂತಹ ಸಂಬಂಧ ಇತ್ತು ಹಾಗೂ ಅವರನ್ನು ಕಾಂಗ್ರೆಸ್ ಹೇಗೆ ಮತ ಬ್ಯಾಂಕ್ ಆಗಿ ಬಳಸಿಕೊಂಡಿತು ಎಂಬುದನ್ನು ಅವರಿಗೆ ಮನವರಿಕೆ ಮಾಡುತ್ತೇನೆ. ಮುಸ್ಲಿಮರು ಈಗ ನನಗೆ ಮತ ಹಾಕುವುದು ಬೇಡ. ನಾನು 10 ವರ್ಷಗಳವರೆಗೆ ನಿಮ್ಮ ಪ್ರದೇಶಗಳನ್ನು ಅಭಿವೃದ್ಧಿಗೊಳಿಸುತ್ತೇನೆ. ಬಾಲ್ಯ ವಿವಾಹ ತಡೆಯುತ್ತೇನೆ, ಅವರು ಮದರಸಾಗಳ ಬದಲು ಕಾಲೇಜಿಗೆ ಹೋಗುವಂತೆ ಮಾಡುತ್ತೇನೆ. ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಏಳು ಕಾಲೇಜುಗಳನ್ನು ನಿರ್ಮಿಸುತ್ತೇನೆ” ಎಂದರು.