ನವದೆಹಲಿ: ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಸದ್ಯದಲ್ಲೇ ನಡೆಯಲಿರುವ ಕಾರಣ ಅಲ್ಲಿ ಪ್ರಚಾರದ ಅಬ್ಬರ ಜೋರಾಗಿ ನಡೆಯುತ್ತಿದೆ. ಪ್ರಚಾರದ ವೇಳೆ ಜಾತಿ, ಧರ್ಮ ಸೇರಿದಂತೆ ಭಾರತದ ರಾಜಕಾರಣದ ದಾಳಗಳೆಲ್ಲವೂ ಉರುಳುತ್ತಿದೆ. ಅಂತೆಯೇ ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ (Digvijaya Singh) ಅವರು ನಾನು ಸನಾತನ ಧರ್ಮವನ್ನು ಪಾಲಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಜತೆಗೆ ‘ಉತ್ತಮ ಹಿಂದೂ’ ಆಗಿರುವುದರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 1.11 ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಅವರು ಚುನಾವಣೆಯಲ್ಲಿ ಧರ್ಮವನ್ನು ಬಳಸುವುದು ಕೂಡ ತಪ್ಪು ಎಂಬ ವೈರುಧ್ಯದ ಹೇಳಿಕೆ ಕೊಟ್ಟಿದ್ದಾರೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ “ನಾನು ಸನಾತನ ಧರ್ಮವನ್ನು ಅನುಸರಿಸುತ್ತೇನೆ. ನಾನು ಉತ್ತಮ ಹಿಂದೂ. ಆದಾಗ್ಯೂ, ಚುನಾವಣೆಗಳಲ್ಲಿ ಧರ್ಮದ ಬಳಕೆಯನ್ನು ನಿಷೇಧಿಸುವುದು ಉತ್ತಮ ಎಂಬುದಾಗಿ ನುಡಿದಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಶಿವರಾಜ್ ಸಿಂಗ್ ಚೌಹಾಣ್ 1 ಲಕ್ಷ ರೂಪಾಯಿ ನೀಡಿದ್ದರೆ, ನಾನು 1.11 ಲಕ್ಷ ರೂಪಾಯಿ ನೀಡಿದ್ದೇನೆ. ಟ್ರಸ್ಟ್ಗೆ ಸಲ್ಲಿಸಲು ನಾನು ಆ ಚೆಕ್ ಅನ್ನು ಪಿಎಂ ಮೋದಿ ಅವರಿಗೆ ಕಳುಹಿಸಿದ್ದೆ. ಅವರು ಅದನ್ನು ಹಿಂದಕ್ಕೆ ಕಳುಹಿಸಿದ್ದರು ಮತ್ತು ಅದನ್ನು ನಾನೇ ಸಲ್ಲಿಸುವಂತೆ ಸಲಹೆ ಕೊಟ್ಟರು. ನಾನು ಅದನ್ನು ಸಲ್ಲಿಸಿದ್ದೇನೆ ಎಂದು ಸಿಂಗ್ ಎಎನ್ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ : Mann Ki Baat: ಅ.31ರಂದು ‘ಮೈ ಭಾರತ್’ಗೆ ಚಾಲನೆ ಎಂದ ಪ್ರಧಾನಿ ಮೋದಿ; ಏನಿದು?
ಅಂದಹಾಗೆ ನವರಾತ್ರಿಯ ಕೊನೆಯ ದಿನದಂದು ತಮ್ಮ ನಿವಾಸದಲ್ಲಿ ‘ಕನ್ಯಾ ಪೂಜೆ’ ಮಾಡಿದ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗಿನ ವಾಕ್ಸಮರ ನಡೆದ ಒಂದು ವಾರದ ನಂತರ ಸಿಂಗ್ ಅವರ ಹೇಳಿಕೆ ಬಂದಿದೆ.
ನಾಟಕಕಾರ ಎಂದ ದಿಗ್ವಿಜಯ ಸಿಂಗ್
ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರನ್ನು ‘ನಾಟಕಾರ ಎಂದು ಕರೆದಿದ್ದರು. ಮುಖ್ಯಮಂತ್ರಿ ಬಗ್ಗೆ ಮಾತನಾಡಬೇಡಿ. ಇಂತಹ ಸುಳ್ಳುಗಾರ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ. ಅವರು ಮಾಡುವಷ್ಟು ನಾಟಕ ಯಾರೂ ಮಾಡಿಲ್ಲ. . ಈಗ ಪ್ರಧಾನಿ ಮೋದಿ ಕೂಡ ಅವರಿಗೆ ಹೆದರುತ್ತಿದ್ದಾರೆ” ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕನಿಗೆ ತಿರುಗೇಟು ನೀಡಿದ ಚೌಹಾಣ್ “ನಿನ್ನೆ ಇಡೀ ದೇಶವು ‘ಕನ್ಯಾ ಪೂಜೆ’ ಮಾಡುತ್ತಿದ್ದಾಗ, ದಿಗ್ವಿಜಯ್ ಸಿಂಗ್ ಅವರು ಅದನ್ನು ಎಂದು ಕರೆದರು. ನಿಮ್ಮಂತಹ ಜನರು ಮಹಿಳೆಯರಿಗೆ ನೀಡುವ ಗೌರವವನ್ನು ಸಹಿಸುವುದಿಲ್ಲ. ಈ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ನವೆಂಬರ್ 17 ರಂದು ನಡೆಯಲಿರುವ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. 2020ರಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡ ನಂತರ ಕೇಸರಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.