ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಟ್ಟಾ ವಿರೋಧಿಯಾಗಿದ್ದ, ಕೇಂದ್ರ ಸರ್ಕಾರದ (Central Government) ಕ್ರಮಗಳನ್ನು ವಿರೋಧಿಸುತ್ತಿದ್ದ ಜೆಎನ್‌ಯು (JNU) ಮಾಜಿ ವಿದ್ಯಾರ್ಥಿ, ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಶೀದ್ (Shehla Rashid) ಅವರೀಗ ಮೋದಿ ಅಭಿಮಾನಿಯಾಗಿ ಬದಲಾಗಿದ್ದಾರೆ. ಕಳೆದ ವರ್ಷದ ನವೆಂಬರ್‌ನಿಂದ ಮೋದಿ, ಕೇಂದ್ರ ಸರ್ಕಾರದ ಕುರಿತು ಅವರು ನೀಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿಯಾಗಿದ್ದಾರೆ. ಅಷ್ಟೇ ಏಕೆ, ನಾನೇಕೆ ನರೇಂದ್ರ ಮೋದಿ ಅವರ ಅಭಿಮಾನಿಯಾದೆ ಎಂಬುದಾಗಿ ನ್ಯೂಸ್ 18 ಜತೆಗಿನ ಸಂದರ್ಶನದಲ್ಲಿ ಅವರೇ ಬಹಿರಂಗಪಡಿಸಿದ್ದಾರೆ.
“ನೀವೇಕೆ ನರೇಂದ್ರ ಮೋದಿ ಅವರನ್ನು ಮೆಚ್ಚುತ್ತಿದ್ದೀರಿ, ಏಕೆ 180 ಡಿಗ್ರಿ ಯು ಟರ್ನ್ ತೆಗೆದುಕೊಂಡಿರಿ ಎಂದು ಜನ ನನ್ನನ್ನು ಕೇಳುತ್ತಿದ್ದಾರೆ. ನಾನು ಏಕಾಏಕಿ ಬದಲಾಗಿಲ್ಲ. ಜಮ್ಮು-ಕಾಶ್ಮೀರದ ಪರಿಸ್ಥಿತಿಯು ನನ್ನನ್ನು ಬದಲಾಯಿಸಿದೆ. ಕಾಶ್ಮೀರದಲ್ಲಿ ಕಳೆದ 10 ವರ್ಷಗಳಲ್ಲಿ ಶಾಂತಿ ನೆಲೆಸಿದೆ. ಇತ್ತೀಚೆಗೆ ನಡೆದ ಮೋದಿ ರ‍್ಯಾಲಿಯಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಜನ ನೆರೆದಿದ್ದನ್ನು ನೋಡಿ, ಶಾಂತಿ, ಸುವ್ಯವಸ್ಥೆ ನೆಲೆಸಿದ್ದನ್ನೂ ನೋಡಿ ನಾನು ಬದಲಾಗಿದ್ದೇನೆ” ಎಂದು ಶೆಹ್ಲಾ ರಶೀದ್ ಅವರು ಹೇಳಿದ್ದಾರೆ.
ಶೆಹ್ಲಾ ರಶೀದ್ ಮಾತಿನ 10 ಪಾಯಿಂಟ್ಸ್
- ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯತೆಯನ್ನೂ ಲೆಕ್ಕಿಸದೆ ದಿಟ್ಟ ತೀರ್ಮಾನ ತೆಗೆದುಕೊಳ್ಳುತ್ತಾರೆ.
- ನಾನು ಬದಲಾಗಿಲ್ಲ, ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿರುವುದು ನಾನು ಮೋದಿ ಅಭಿಮಾನಿಯಾಗಿ ಬದಲಾಗಲು ಕಾರಣ
- ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಇದು 10 ವರ್ಷಗಳಲ್ಲಿ ಸಾಧ್ಯವಾಗಿದೆ ಎಂಬುದು ಗಮನಾರ್ಹ
- ನಾನೊಬ್ಬ ಹೆಮ್ಮೆಯ ಮುಸ್ಲಿಮಳಾಗಿದ್ದೇನೆ ಎಂದರೆ, ನರೇಂದ್ರ ಮೋದಿ ಏಕೆ ಹೆಮ್ಮೆಯ ಹಿಂದು ಆಗಬಾರದು?
- ನರೇಂದ್ರ ಮೋದಿ ಅವರು ಕಾಶ್ಮೀರದಲ್ಲಿ ಇತ್ತೀಚೆಗೆ ಕೈಗೊಂಡ ರ‍್ಯಾಲಿಯಲ್ಲಿ ಜನ ದಂಡಿಯಾಗಿ ಪಾಲ್ಗೊಂಡಿದ್ದರು
- ಕೊರೊನಾ ಸಂದರ್ಭದಲ್ಲಿ ಕೂಡ ನನ್ನ ಅಭಿಪ್ರಾಯಗಳು ಬದಲಾದವು
- ಮುಂದಿನ 25 ವರ್ಷಗಳಿಗಾಗಿ ಮೋದಿ ಅವರ ವಿಕಸಿತ ಭಾರತ ಕಲ್ಪನೆಯು ಅದ್ಭುತವಾದುದು
- ಜಮ್ಮು-ಕಾಶ್ಮೀರದಲ್ಲಿ ಸಕಾರಾತ್ಮಕ ಬದಲಾವಣೆ ತಂದಿರುವುದು ಮೋದಿ ಸರ್ಕಾರದ ಪ್ರಮುಖ ಸಾಧನೆ
- ಯಾರನ್ನೂ ಮನವೊಲಿಸಲು ನಾನು ಹೀಗೆ ಹೇಳುತ್ತಿಲ್ಲ, ಬದಲಾವಣೆ ನೋಡಿ ನಾನು ಬದಲಾದೆ
- ಹತ್ತು ವರ್ಷದ ಹಿಂದೆ ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ, ಈಗ ಕಾಶ್ಮೀರದಲ್ಲಿ ಅತ್ಯುತ್ತಮ ಮೂಲ ಸೌಕರ್ಯ ದೊರಕುತ್ತಿವೆ
Part. 1 of my interventions at the #RisingBharatSummit on what has changed in Kashmir. https://t.co/aCWxXFCAJ4
— Shehla Rashid (@Shehla_Rashid) March 19, 2024
ಯಾರಿವರು ಶೆಹ್ಲಾ ರಶೀದ್?
ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಒಕ್ಕೂಟದ ನಾಯಕಿಯಾಗಿದ್ದ ಶೆಹ್ಲಾ ರಶೀದ್ ಅವರು ಕೆಲ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟರ್ ವಿರೋಧಿಯಾಗಿದ್ದರು. 2016ರಲ್ಲಿ ಜೆಎನ್‌ಯು ವಿವಿಯಲ್ಲಿ ‘ಟುಕ್ಡೆ ಟುಕ್ಡೆ ಗ್ಯಾಂಗ್’ ಘಟನೆ ನಡೆದ ಬಳಿಕ ಶೆಹ್ಲಾ ರಶೀದ್ ಚರ್ಚೆಯ ಮುನ್ನೆಲೆಗೆ ಬಂದರು. ಅಲ್ಲದೆ, 2019ರಲ್ಲಿ “ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯು ಭಯ ಹುಟ್ಟಿಸುತ್ತಿವೆ” ಎಂಬುದಾಗಿ ಟ್ವೀಟ್ ಮಾಡಿದ ಕಾರಣ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದರೆ, ಇದೇ ಶೆಹ್ಲಾ ರಶೀದ್ ಅವರು 370ನೇ ವಿಧಿ ರದ್ದು ತೀರ್ಮಾನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದರು. “ಕಾಶ್ಮೀರದಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಸುಧಾರಣೆಯಾಗುತ್ತಿದೆ” ಎಂದು ವಿಧಿ ರದ್ದು ತೀರ್ಮಾನವನ್ನು ಬೆಂಬಲಿಸಿದ್ದರು. ಜೆಎನ್‌ಯುನಲ್ಲಿ ಪಿಎಚ್.ಡಿ ಪಡೆದಿರುವ ಇವರು, 2015-16ರಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಉಪಾಧ್ಯಕ್ಷೆಯಾಗಿದ್ದರು. ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟದ (AISA) ಸದಸ್ಯೆಯೂ ಆಗಿದ್ದರು. ಇವರು ಸಾಮಾಜಿಕ ಹೋರಾಟದಲ್ಲೂ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: ರಾಜಕೀಯದಲ್ಲಿ ಕಾಂಗ್ರೆಸ್ ಪದೇಪದೆ ಲಾಂಚ್ ಮಾಡುವುದು ಯಾರನ್ನು? ಮೋದಿ ಕೊಟ್ಟರು ಉತ್ತರ
ಮೋದಿ ಅವರ ಕಟು ವಿರೋಧಿಯಾಗಿದ್ದ ಶೆಹ್ಲಾ ರಶೀದ್, 2023ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಮೋದಿ ಸರ್ಕಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಲು ಆರಂಭಿಸಿದರು. “ನರೇಂದ್ರ ಮೋದಿ ಅವರು ಟೀಕೆಗಳ ಹೊರತಾಗಿಯೂ ನಿಸ್ವಾರ್ಥಿ. ಅವರು ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಸಂದರ್ಶನವೊಂದರಲ್ಲಿ ಶೆಹ್ಲಾ ರಶೀದ್ ಹೇಳಿದ್ದರು. “ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಗೊಳಿಸಿದ ಕೀರ್ತಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎಡಿಜಿಪಿ ಮನೋಜ್ ಸಿನ್ಹಾ ಅವರಿಗೆ ಸಲ್ಲಬೇಕು” ಎಂದು ಕೂಡ ಶ್ಲಾಘಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ