ನವದೆಹಲಿ: ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ದೇಶದ ಆಯಾ ರಾಜ್ಯಗಳಲ್ಲಿ ಮಹಿಳಾ ಆಯೋಗಗಳಿವೆ. ಮಹಿಳೆಯರಿಗೆ ಆಯೋಗಗಳು ನ್ಯಾಯ ಒದಗಿಸುತ್ತವೆ. ಆದರೆ, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ (Swati Maliwal) ಅವರೇ ಬಾಲ್ಯದಲ್ಲಿ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದಾರೆ. ಈ ಕುರಿತು ಸ್ವಾತಿ ಮಾಲಿವಾಲ್ ಅವರೇ ಹೇಳಿದ್ದಾರೆ.
ದೆಹಲಿ ಮಹಿಳಾ ಆಯೋಗದಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೆಣ್ಣುಮಕ್ಕಳ ಸಂಕಷ್ಟದ ಕುರಿತು ಮಾತನಾಡಿದರು. ಇದೇ ವೇಳೆ ಅವರು ತಮ್ಮ ವೈಯಕ್ತಿಕ ಜೀವನದ ಕಹಿ ಅನುಭವಗಳನ್ನು ಬಿಚ್ಚಿಟ್ಟರು. “ನಾನು ಚಿಕ್ಕವಳಿದ್ದಾಗ ನನ್ನ ತಂದೆ ತುಂಬ ಹೊಡೆಯುತ್ತಿದ್ದರು. ನನ್ನ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದರು. ಅವರು ಮನೆಗೆ ಬರುತ್ತಲೇ ನಾನು ಅಡಗಿ ಕೂರುತ್ತಿದ್ದೆ. ರಾತ್ರಿಯಿಡೀ ನಿದ್ದೆ ಇಲ್ಲದೆ, ಹೆಣ್ಣುಮಕ್ಕಳ ಹಕ್ಕುಗಳ ಪರ ಹೋರಾಡುವ ಕನಸು ಕಾಣುತ್ತಿದ್ದೆ” ಎಂದು ಹೇಳಿದರು.
“ನಾಲ್ಕನೇ ತರಗತಿವರೆಗೆ ನನ್ನ ತಂದೆಯ ಜತೆಗೇ ವಾಸಿಸುತ್ತಿದ್ದೆ. ಅವರು ನನ್ನ ಜುಟ್ಟು ಹಿಡಿದು, ಗೋಡೆಗೆ ತಾಗಿಸಿ ಹೊಡೆಯುತ್ತಿದ್ದರು” ಎಂದು ವಿವರಿಸಿದರು. ಕೆಲ ದಿನಗಳ ಹಿಂದಷ್ಟೇ ನಟಿ ಖುಷ್ಬು ಸುಂದರ್ ಅವರು ಕೂಡ ಬಾಲ್ಯದಲ್ಲಿ ಅವರ ತಂದೆ ನೀಡಿದ ಲೈಂಗಿಕ ಕಿರುಕುಳದ ಕುರಿತು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Swati Maliwal | ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಮೇಲೆಯೇ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ