Site icon Vistara News

ರಾಮ ಮಾಂಸಾಹಾರಿ ಎಂದ ಜಿತೇಂದ್ರನನ್ನು ಕೊಲ್ಲುವೆ; ಅಯೊಧ್ಯೆ ಸಂತನ ಎಚ್ಚರಿಕೆ

Ayodhya Seer Paramhans Acharya

I will kill the Jitendra Awhad: Ayodhya seer Paramhans Acharya’s warning to NCP leader

ಅಯೋಧ್ಯೆ: ರಾಮಮಂದಿರ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ “ರಾಮ ಮಾಂಸಾಹಾರಿಯಾಗಿದ್ದ” ಎಂದು ಎನ್‌ಸಿಪಿ ನಾಯಕ (ಶರದ್‌ ಪವಾರ್‌ ಬಣ) ಜಿತೇಂದ್ರ ಅವ್ಹಾದ್‌ (Jitendra Awhad) ನೀಡಿದ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಜಿತೇಂದ್ರ ಅವ್ಹಾದ್‌ ವಿರುದ್ಧ ಬಿಜೆಪಿ ದೂರು ದಾಖಲಿಸಲು ಮುಂದಾಗಿದೆ. ಇದರ ಬೆನ್ನಲ್ಲೇ, “ಜಿತೇಂದ್ರ ಅವ್ಹಾದ್‌ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಾನೇ ಅವನನ್ನು ಕೊಂದುಹಾಕುತ್ತೇನೆ” ಎಂದು ಅಯೋಧ್ಯೆ ಸಂತ ಪರಮಹಂಸ ಆಚಾರ್ಯ (Paramhans Acharya) ಖಡಕ್‌ ಎಚ್ಚರಿಕೆ ನೀಡಿದ್ದಾರೆ.

“ಭಗವಾನ್‌ ಶ್ರೀರಾಮನ ಕುರಿತು ಜಿತೇಂದ್ರ ಅವ್ಹಾದ್‌ ನೀಡಿರುವ ಹೇಳಿಕೆಯು ರಾಮನ ಭಕ್ತರಿಗೆ ನೋವುಂಟು ಮಾಡುವಂತಿದೆ. ರಾಮನ ಬಗ್ಗೆ ತುಚ್ಚವಾಗಿ ಹೇಳಿಕೆ ನೀಡಿದ ಜಿತೇಂದ್ರ ಅವ್ಹಾದ್‌ ವಿರುದ್ಧ ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಾಗೊಂದು ವೇಳೆ ಜಿತೇಂದ್ರ ಅವ್ಹಾದ್‌ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಆತನನ್ನು ನಾನೇ ಕೊಲ್ಲುತ್ತೇನೆ. ಇದು ನಾನು ನೀಡುತ್ತಿರುವ ಎಚ್ಚರಿಕೆಯಾಗಿದೆ” ಎಂದು ಪರಮಹಂಸ ಆಚಾರ್ಯ ಹೇಳಿದ್ದಾರೆ.

ಜಿತೇಂದ್ರ ಅವ್ಹಾದ್‌ ಹೇಳಿದ್ದೇನು?

ರಾಮ ಕಾಡಿನಲ್ಲಿದ್ದಾಗ ಬೇಟೆಯಾಡಿ ಮಾಂಸ ತಿನ್ನುತ್ತಿದ್ದ. ಎಲ್ಲರನ್ನೂ ಸಸ್ಯಾಹಾರಿಗಳನ್ನಾಗಿ ಬದಲಾಯಿಸುತ್ತಿರುವ ಹೊತ್ತಿನಲ್ಲಿ ನಾವು ಮಟನ್‌ ತಿಂದು ರಾಮನ ಆದರ್ಶಗಳನ್ನು ಪಾಲಿಸೋಣ. ಅಷ್ಟಕ್ಕೂ ರಾಮ ಮಾಂಸಾಹಾರಿಯಾಗಿದ್ದ. ಸುಮಾರು 14 ವರ್ಷ ಕಾಡಿನಲ್ಲಿ ಕಳೆದ ರಾಮನಿಗೆ ಸಸ್ಯಾಹಾರ ಸಿಗುವುದಾದರೂ ಹೇಗೆ? ನಾನು ನಿಜ ಹೇಳುತ್ತಿದ್ದೇನೋ ಇಲ್ಲವೋ ನೀವೇ ಹೇಳಿ ಎಂದು ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಿತೇಂದ್ರ ಅವ್ಹಾದ್‌ ಹೇಳಿದ್ದರು.

ಇದನ್ನೂ ಓದಿ: Lord Ram: ಶ್ರೀರಾಮ ಮಾಂಸ ಸೇವಿಸುತ್ತಿದ್ದ; ವಿವಾದದ ಕಿಡಿ ಹೊತ್ತಿಸಿದ ಎನ್‌ಸಿಪಿ ನಾಯಕ

ಜಿತೇಂದ್ರ ಅವ್ಹಾದ್‌ ನೀಡಿದ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. “ರಾಮ ಮಾಂಸಾಹಾರಿ ಎಂದು ಜಿತೇಂದ್ರ ಅವ್ಹಾದ್‌ ಹೇಳಿರುವುದು ಖಂಡನೀಯ. ಜಿತೇಂದ್ರ ಅವ್ಹಾದ್‌ ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಬಿಜೆಪಿ ನಾಯಕ ರಾಮ್‌ ಕದಮ್‌ ಹೇಳಿದ್ದಾರೆ. ಇದೇ ವಿವಾದವನ್ನು ಇಟ್ಟುಕೊಂಡು ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಅವರನ್ನು ರಾಮ್‌ ಕದಮ್‌ ಟೀಕಿಸಿದ್ದಾರೆ. “ಉದ್ಧವ್‌ ಠಾಕ್ರೆ ಅವರಿಗೆ ಹಿಂದುಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ವೋಟಿಗಾಗಿ ರಾಜಕೀಯ ಮಾಡುವುದನ್ನೇ ಉದ್ಧವ್‌ ಠಾಕ್ರೆ ರೂಢಿಸಿಕೊಂಡಿದ್ದಾರೆಯೇ ಹೊರತು ಹಿಂದುಗಳ ಭಾವನೆಗಳಿಗೆ ಅವರು ಗೌರವ ನೀಡುವುದಿಲ್ಲ” ಎಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version