ಜೈಪುರ: ಚುನಾವಣೆಗಳಲ್ಲಿ ರಾಜಕಾರಣಿಗಳ ದೊಡ್ಡ ದೊಡ್ಡ ಪೋಸ್ಟರ್‌ಗಳು, ಬ್ಯಾನರ್‌ಗಳ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸೇವೆಯ ರಾಜಕಾರಣದಿಂದ ಜನ ಮತಗಳನ್ನು ನೀಡುತ್ತಾರೆಯೇ ಹೊರತು, ಪೋಸ್ಟರ್ ಹಾಗೂ ಬ್ಯಾನರ್‌ಗಳಿಂದ ಅಲ್ಲ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಮಾಜಿ ರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಡ್ಕರಿ ಮಾತನಾಡಿದರು. “ಸೇವಾ ರಾಜಕಾರಣದಿಂದ ಮತಗಳನ್ನು ಪಡೆಯಬೇಕು. ಪೋಸ್ಟರ್ ಹಾಗೂ ಬ್ಯಾನರ್‌ಗಳಿಂದ ಮತಗಳನ್ನು ಪಡೆಯಬಾರದು. ಜನರು ಕೂಡ ಸೇವಾ ರಾಜಕಾರಣಕ್ಕೆ ಮತ ನೀಡುತ್ತಾರೆ” ಎಂದರು.
“ಕಳೆದ ಚುನಾವಣೆಯಲ್ಲಿ ನಾಗ್ಪುರದಿಂದ ಸ್ಪರ್ಧಿಸುವುದು ಕಷ್ಟ ಎಂದು ಹೇಳಲಾಗುತ್ತಿತ್ತು. ಅಲ್ಲಿ ಸ್ಪರ್ಧಿಸುವುದು ಬೇಡ ಎಂದು ಕೂಡ ಒಂದಷ್ಟು ಜನ ಸಲಹೆ ನೀಡಿದರು. ಆದರೂ ನಾನು ನಾಗ್ಪುರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದೆ. ನಾನು ಮುಂದಿನ ಚುನಾವಣೆಯಲ್ಲಿ ಎಲ್ಲೂ ನನ್ನ ಪೋಸ್ಟರ್, ಬ್ಯಾನರ್ ಹಾಕಿಸುವುದಿಲ್ಲ. ಯಾರಿಗೂ ನಾನು ಒಂದು ಕಪ್ ಟೀ ಕುಡಿಸುವುದಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: KS Eshwarappa: ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಿಯಿಂದ ನನ್ನ ಕೊಲೆಗೆ ಸ್ಕೆಚ್: ಕೆ.ಎಸ್. ಈಶ್ವರಪ್ಪ
“ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ. ದೇಶವೇ ಮೊದಲು ಎಂಬ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ತತ್ವದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಉಪಾಧ್ಯಾಯ ಅವರು ಅಂತ್ಯೋದಯದ ಕನಸು ಕಂಡಿದ್ದರು. ದೇಶದ ಕೊನೆಯ ಪ್ರಜೆಗೂ ಆಹಾರ, ವಸತಿ ಸೇರಿ ಎಲ್ಲ ಮೂಲ ಸೌಕರ್ಯ ನೀಡಬೇಕು ಎಂಬುದು ನಮ್ಮ ಬದ್ಧತೆಯಾಗಿದೆ” ಎಂದು ತಿಳಿಸಿದರು.