Site icon Vistara News

Nitin Gadkari: ‘ರಾಜಕೀಯದಿಂದಲೇ ನಿವೃತ್ತನಾಗುವೆ’; ಚುನಾವಣೆ ಮೊದಲೇ ನಿತಿನ್‌ ಗಡ್ಕರಿ ಹೀಗೆ ಹೇಳಿದ್ದೇಕೆ?

Nitin Gadkari

ಮುಂಬೈ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು ಹೊಸ ಸವಾಲು ಹಾಕಿದ್ದಾರೆ. “ದೇಶದ ಒಬ್ಬನೇ ಒಬ್ಬ ನಾಗರಿಕನು ನಾನು ಲಂಚ ಅಥವಾ ಕಮಿಷನ್‌ ಪಡೆದಿದ್ದೇನೆ ಎಂಬುದಾಗಿ ಹೇಳಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುವೆ” ಎಂದು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತಿನ್‌ ಗಡ್ಕರಿ ಅವರು ಪ್ರಸಕ್ತ ರಾಜಕೀಯ ವಿದ್ಯಮಾನ ಸೇರಿ ಹಲವು ವಿಷಯಗಳನ್ನು ತಿಳಿಸಿದರು. “ನಮ್ಮ ಮನೆಯಲ್ಲಿ ನಾನು ವಕೀಲನಾಗಬೇಕು ಎಂದು ಬಯಸಿದ್ದರು. ಆದರೆ, ನಾನು ಕೆಲಸ ಮಾಡುವವನಿಗಿಂತ, ಕೆಲಸ ನೀಡುವವನಾಗಬೇಕು ಎಂಬ ಗುರಿಯೊಂದಿಗೆ ಸಾಗಿದೆ. ಹಾಗಾಗಿ ನಾನು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟೆ. ಆದರೆ, ನಾನು ಇದುವರೆಗೆ ಒಂದೇ ಒಂದು ರೂಪಾಯಿ ಲಂಚ ಮುಟ್ಟಿಲ್ಲ. ಯಾರಾದರೂ ಒಬ್ಬರು ನಾನು ಲಂಚ ಪಡೆದಿದ್ದೇನೆ ಎಂದು ಹೇಳಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುವೆ” ಎಂದು ಹೇಳಿದರು.

“ಹಣ ಗಳಿಕೆಗಾಗಿ ರಾಜಕೀಯಕ್ಕೆ ಬರಲು ಇದೇನು ಬ್ಯುಸಿನೆಸ್‌ ಅಲ್ಲ. ದೇವರು ನಾನು ಬೇಡಿದ್ದಕ್ಕಿಂತ ಹೆಚ್ಚೇ ಕೊಟ್ಟಿದ್ದಾನೆ. ನಾನು ಯುಟ್ಯೂಬ್‌ ಮೂಲಕವೇ ಪ್ರತಿ ತಿಂಗಳು 3 ಲಕ್ಷ ರೂ. ಗಳಿಸುತ್ತೇನೆ. ಅಷ್ಟರಮಟ್ಟಿಗೆ ನಾನು ತೃಪ್ತನಾಗಿದ್ದೇನೆ. ನಾನು ಈಗ ಉದ್ಯಮ ಕೈಗೊಳ್ಳಲು ಇಚ್ಛಿಸುತ್ತಿಲ್ಲ. ಆದರೆ, ನಾನು ಉದ್ಯಮ ಮಾಡಿ 1,500 ಜನರಿಗೆ ಕೆಲಸ ಕೊಟ್ಟಿದ್ದೇನೆ. ಯಾರಿಗೂ ಜಾತಿ, ಮತ ನೋಡಿ ಕೆಲಸ ಕೊಟ್ಟಿಲ್ಲ” ಎಂದು ತಿಳಿಸಿದರು.

ಇದನ್ನೂ ಓದಿ: Nitin Gadkari : ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಮತ್ತೆ ಜೀವ ಬೆದರಿಕೆ ಕರೆ; ಏನಾಗುತ್ತಿದೆ ಹಿಂಡಲಗಾ ಜೈಲಿನಲ್ಲಿ?

ಜಾತಿ ರಾಜಕೀಯ ಸರಿಯಲ್ಲ

“ಜಾತಿ, ಮತ, ಭಾಷೆ ಸೇರಿ ಹಲವು ವಿಷಯಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ಯಾರೂ ಜಾತಿಯಿಂದ ದೊಡ್ಡ ವ್ಯಕ್ತಿಗಳಾಗಿಲ್ಲ. ಮೌಲ್ಯಗಳು ಹಾಗೂ ಕೆಲಸದ ಮೂಲಕವೇ ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ನಾನೆಂದೂ ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ಎಲ್ಲ ಜಾತಿ, ಧರ್ಮದವರೂ ನನಗೆ ಮತ ಹಾಕಿದ್ದಾರೆ. ನನಗೆ ಎಲ್ಲರೂ ಕುಟುಂಬಸ್ಥರೇ” ಎಂದು ಹೇಳಿದ್ದಾರೆ. ಪ್ರಸಕ್ತ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, “ಇಂದು ನನ್ನ ಚಮಚಾಗೆ (ಆಪ್ತ) ಒಂದು ಟಿಕೆಟ್‌ ಕೊಡಿ ಎಂಬುದಾಗಿ ಕೇಳುವವರೇ ಜಾಸ್ತಿ ಇದ್ದಾರೆ” ಎಂದು ಹೇಳಿದರು.

Exit mobile version