ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಳ್ಳುತ್ತಿರುವ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಮಹಿಳೆಯರು, ಮಕ್ಕಳು, ಹಿರಿಯರು ಎನ್ನದೆ ಪ್ರತಿಯೊಬ್ಬರೂ ಭಾರತ್ ಜೋಡೋ ಯಾತ್ರೆಗೆ ಬೆಂಬಲ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ, 88 ವರ್ಷದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿ ಜತೆ ಕಾಶ್ಮೀರದವರೆಗೂ ಪಾದಯಾತ್ರೆ ನಡೆಸುವ ಶಪಥ ಮಾಡಿದ್ದಾರೆ.
ಮಧ್ಯಪ್ರದೇಶದ ಕರುಣಾ ಪ್ರಸಾದ್ ಮಿಶ್ರಾ ಅವರು ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕುತ್ತಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಾಹುಲ್ ಗಾಂಧಿ ಯಾತ್ರೆಗೆ ಅವರು ಕೈಜೋಡಿಸಿದ್ದು, ಕಾಶ್ಮೀರದವರೆಗೆ ನಡೆಯುವ ಶಪಥ ಮಾಡಿದಾರೆ. “ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯದಲ್ಲಿ ಈ ಕುರಿತು ಶಪಥ ಮಾಡಿದ್ದಾನೆ. ಕಾರಿನಲ್ಲಿ ಕುಳಿತುಕೊಳ್ಳಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ. ಆದರೆ, ನಾನು ಕಾಶ್ಮೀರದವರೆಗೆ ನಡೆಯುತ್ತೇನೆ. ಲಾಲ್‌ಚೌಕ್‌ನಲ್ಲಿ ತಿರಂಗಾ ಹಾರಿಸುತ್ತೇನೆ” ಎಂದು ರಾಜಸ್ಥಾನದಲ್ಲಿ ಕರುಣಾ ಮಿಶ್ರಾ ಹೇಳಿದ್ದಾರೆ.
ಗಾಂಧೀಜಿ ಜತೆಗೂ ಪಾದಯಾತ್ರೆ
ಮಹಾತ್ಮ ಗಾಂಧೀಜಿ ಅವರ ಜತೆಗೂ ನಾನು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದೆ ಎಂದು ಕರುಣಾ ಮಿಶ್ರಾ ಹೇಳಿದ್ದಾರೆ. “ಗಾಂಧೀಜಿಯವರು 1935-36ರಲ್ಲಿ ಜಬಲ್ಪುರದಿಂದ ಅಲಹಾಬಾದ್‌ವರೆಗೆ ಕೈಗೊಂಡ ಪಾದಯಾತ್ರೆಯಲ್ಲಿ ನಾನೂ ಭಾಗವಹಿಸಿದ್ದೆ. ನನಗೆ ನಡೆಯುವುದು ಎಂದರೆ ತುಂಬ ಇಷ್ಟ. ಜವಾಹರ ಲಾಲ್ ನೆಹರು ಹಾಗೂ ವಿನೋಬಾ ಭಾವೆ ಅವರ ಜತೆಗೂ ಹೆಜ್ಜೆ ಹಾಕಿದ್ದೇನೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ‘ಸಚಿನ್ ಪೈಲಟ್ರಂಥ ಸಿಎಂ ಬೇಕು’; ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಎದುರೇ ಮೊಳಗಿತು ಯುವಕರ ಘೋಷಣೆ