ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರಾಗಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ (Kharge Congress President) ಆಯ್ಕೆಯಾಗಿದ್ದು, ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರಜಾಪ್ರಭುತ್ವ ಮಾದರಿಯಲ್ಲಿ ಪಕ್ಷದ ಚುನಾವಣೆ ನಡೆದಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಪಕ್ಷ ಸಂಘಟಿಸುತ್ತೇನೆ” ಎಂದು ತಿಳಿಸಿದ್ದಾರೆ. ಹಾಗೆಯೇ, ಬೆಲೆಯೇರಿಕೆ ಸೇರಿ ಹಲವು ಸಮಸ್ಯೆಗಳು ದೇಶದ ಜನರನ್ನು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
“ಪ್ರಜಾಪ್ರಭುತ್ವಕ್ಕೆ ದೇಶದಲ್ಲಿ ಭೀತಿ ಇದೆ. ದೇಶದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಜಾಪ್ರಭುತ್ವದ ಆಶಯಗಳಂತೆ ಚುನಾವಣೆ ನಡೆಸಿದೆ. ರಾಷ್ಟ್ರಮಟ್ಟದಲ್ಲಿ ಚುನಾವಣೆ ಸಂಘಟಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಹೆಜ್ಜೆ ಇಟ್ಟಿದೆ. ಚುನಾವಣೆಯನ್ನು ಯಶಸ್ವಿಗೊಳಿಸಿದ ಎಲ್ಲ ಮತದಾರರು (ಡೆಲಿಗೇಟ್ಸ್), ನಾಯಕರು, ಮುಖಂಡರು, ಕಾರ್ಯಕರ್ತರಿಗೆ ನಾನು ಧನ್ಯವಾದ ತಿಳಿಸುತ್ತೇನೆ” ಎಂದು ಹೇಳಿದರು.
“ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣೆ ನಡೆದಿದೆ. ನನ್ನ ಮಿತ್ರ, ಚುನಾವಣೆ ಅಭ್ಯರ್ಥಿ ಶಶಿ ತರೂರ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆಯು ಉತ್ತಮವಾಗಿ ನಡೆಯಿತು. ಮುಂದಿನ ದಿನಗಳಲ್ಲಿ ಇಬ್ಬರೂ ಜತೆಗೂಡಿ ಪಕ್ಷವನ್ನು ಸಂಘಟಿಸುತ್ತೇವೆ. ದೇಶಾದ್ಯಂತ ಪಕ್ಷವನ್ನು ಬಲಪಡಿಸುತ್ತೇವೆ” ಎಂದು ತಿಳಿಸಿದರು.
ಸೋನಿಯಾಗೆ ಆಭಾರಿ
“ಸೋನಿಯಾ ಗಾಂಧಿ ಅವರಿಗೆ ಆಭಾರಿಯಾಗಿದ್ದೇನೆ. ಸೋನಿಯಾ ಗಾಂಧಿ ಅವರು ತಮ್ಮ ವೈಯಕ್ತಿಕ ಜೀವನವನ್ನು ತ್ಯಜಿಸಿ, ಪಕ್ಷ ಸಂಘಟನೆ ಮಾಡಿದ್ದಾರೆ. ಅವರ ನಾಯಕತ್ವದಲ್ಲಿ ಕೇಂದ್ರದಲ್ಲಿ ಎರಡು ಬಾರಿ ಕಾಂಗ್ರೆಸ್ ಸರ್ಕಾರ ರಚಿಸುವ ಜತೆಗೆ ಅವರ ನೇತೃತ್ವದಲ್ಲಿಯೇ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ” ಎಂದು ಹೇಳಿದರು.
“ದೇಶದಲ್ಲಿ ಹಣದುಬ್ಬರ, ಬೆಲೆಯೇರಿಕೆ, ನಿರುದ್ಯೋಗ, ಬಡವರು ಹಾಗೂ ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ. ದೇಶದ ಸಮಸ್ಯೆಗಳ ವಿರುದ್ಧ ನಾವು ಜನಾಂದೋಲನ ಮಾಡುತ್ತೇವೆ. ಈಗಾಗಲೇ ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ್ ಜೋಡೋ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಎಲ್ಲರೂ ಬೆಂಬಲಿಸುವ ಮೂಲಕ ಪಕ್ಷವನ್ನು ಬಲಪಡಿಸೋಣ” ಎಂದು ತಿಳಿಸಿದರು.
ಇದನ್ನೂ ಓದಿ | ಮಲ್ಲಿಕಾರ್ಜುನ ಖರ್ಗೆ | ಕ್ರೂರ ರಜಾಕಾರರಿಂದ ಪ್ರಾಣ ಉಳಿಸಿಕೊಂಡಿದ್ದ ಮಗು ಈಗ ಕಾಂಗ್ರೆಸ್ ಅಧ್ಯಕ್ಷ