ಜೈಪುರ: ಭಾರತೀಯ ವಾಯುಪಡೆಯ ಮಿಗ್ 21 ವಿಮಾನ (IAF MIG-21) ರಾಜಸ್ಥಾನದ ಹನುಮಾನ್ಗಢ್ನಲ್ಲಿ ಪತನಗೊಂಡಿದ್ದು, ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಹಾಗೇ, ವಿಮಾನದಲ್ಲಿದ್ದ ಪೈಲೆಟ್ಗಳು ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ. ಈ ವಿಮಾನ ಸೂರತ್ಗಢ್ನಲ್ಲಿರುವ ವಾಯುನೆಲೆಯಿಂದ ಟೇಕ್ ಆಫ್ ಆಗಿತ್ತು. ಹೀಗೆ ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ, ಅದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಬಗ್ಗೆ ಪೈಲೆಟ್ ಕಂಟ್ರೋಲ್ ರೂಮಿಗೆ ಮಾಹಿತಿಯನ್ನೂ ನೀಡಿದ್ದರು. ಆದರೆ ಬಹ್ಲೋಲ್ ಬಳಿಯ ಮನೆಯೊಂದರ ಮೇಲೆ ಮಿಗ್ 21 ವಿಮಾನ ಅಪ್ಪಳಿಸಿದೆ. ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಭಾರತೀಯ ವಾಯುಪಡೆ ‘ವಾಯುಪಡೆಯ ಮಿಗ್ 21 ವಿಮಾನ ದೈನಂದಿನ ತರಬೇತಿ ಹಾರಾಟದಲ್ಲಿ ತೊಡಗಿತ್ತು. ಈ ವೇಳೆ ತಾಂತ್ರಿಕ ದೋಷದಿಂದಾಗಿ ಮನೆಯೊಂದಕ್ಕೆ ಅಪ್ಪಳಿಸಿದೆ. ಪೈಲೆಟ್ ಸುರಕ್ಷಿತರಾಗಿದ್ದಾರೆ. ಈ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ‘ ಎಂದು ಹೇಳಿದೆ.
ಇತ್ತೀಚೆಗಷ್ಟೇ ಭಾರತೀಯ ಸೇನೆಯ ಹೆಲಿಕಾಪ್ಟರ್ವೊಂದು ಜಮ್ಮು-ಕಾಶ್ಮೀರದ ಕಿಶ್ತ್ವಾರಾದಲ್ಲಿ ಪತನಗೊಂಡಿತ್ತು. ಇಬ್ಬರು ಪೈಲೆಟ್ಗಳು, ಒಬ್ಬ ಟೆಕ್ನಿಶಿಯನ್ ಗಾಯಗೊಂಡಿದ್ದರು. ಇವರೆಲ್ಲರೂ ಸದ್ಯ ಉಧಾಂಪುರದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ ರಾಜಸ್ಥಾನ ಬಾರ್ಮರ್ ಜಿಲ್ಲೆಯಲ್ಲಿ ಒಂದು ಮಿಗ್ 21 ಯುದ್ಧವಿಮಾನ ಪತನಗೊಂಡಿದ್ದು. ಈ ಅವಘಡದಲ್ಲಿ ಇಬ್ಬರು ಪೈಲೆಟ್ಗಳು ಮೃತಪಟ್ಟಿದ್ದರು.