ಜೈಪುರ: ಭಾರತೀಯ ವಾಯಪಡೆಯ (Indian Air Force) ಕಣ್ಗಾವಲು ವಿಮಾನವೊಂದು ರಾಜಸ್ಥಾನದ (Rajasthan) ಜೈಸಲ್ಮೇರ್ ಜಿಲ್ಲೆಯಲ್ಲಿ ಗುರುವಾರ (ಏಪ್ರಿಲ್ 25) ಬೆಳಗ್ಗೆ ಪತನಗೊಂಡಿದೆ. ಇದು ಮಾನವರಹಿತ ವಿಮಾನವಾದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದಾಗ್ಯೂ, ವಿಮಾನವು ಜಮೀನಿನಲ್ಲಿ ಪತನಗೊಂಡ (Aircraft Crash) ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ಆದರೆ, ಇಡೀ ವಿಮಾನವು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲಾ ಕೇಂದ್ರವಾದ ಜೈಸಲ್ಮೇರ್‌ನಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಪಿಥಾಲ ಗ್ರಾಮದ ಬಳಿಯ ಜಮೀನಿನಲ್ಲಿ ವಿಮಾನ ಪತನವಾಗಿದೆ. ಈ ಕುರಿತು ವಾಯುಪಡೆಯೇ ಮಾಹಿತಿ ನೀಡಿದೆ. “ಜೈಸಲ್ಮೇರ್ ಬಳಿಯಲ್ಲಿ ಭಾರತೀಯ ವಾಯುಪಡೆಯ ಮಾನವರಹಿತ ವಿಮಾನವು ಪತನಗೊಂಡಿದೆ. ದೈನಂದಿನ ಹಾರಾಟದ ವೇಳೆ ವಿಮಾನ ಪತನಗೊಂಡಿದೆ. ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಯಾರದ್ದೇ ವೈಯಕ್ತಿಕ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ” ಎಂದು ತಿಳಿಸಿದೆ.
One Remotely Piloted Aircraft of the Indian Air Force met with an accident near Jaisalmer today during a routine training sortie. No damage to any personnel or property has been reported. A Court of Inquiry has been constituted to find out the cause of the accident.
— Indian Air Force (@IAF_MCC) April 25, 2024
ವಿಮಾನ ಪತನದ ಸುದ್ದಿ ತಿಳಿಯುತ್ತಲೇ ಖುರಿ ಪೊಲೀಸ್ ಠಾಣೆ ಅಧಿಕಾರಿ ಮೇ ಜಾಬ್ತಾ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಾಯುಪಡೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ. ವಿಮಾನ ಪತನವಾಗುತ್ತಲೇ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಜಮಾಯಿಸಿದ್ದರು.
ಕಳೆದ ತಿಂಗಳಷ್ಟೇ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಪತನಗೊಂಡಿತ್ತು. ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಜೈಸಲ್ಮೇರ್ ಬಳಿ ಪತನಗೊಂಡಿದ್ದು, ಪೈಲಟ್‌ಗಳು ಸುರಕ್ಷಿತವಾಗಿದ್ದರು.
ʼಭಾರತ್ ಶಕ್ತಿ 2024ʼ ತರಬೇತಿ ವೇಳೆ ಫೈಟರ್ ಜೆಟ್ ಜೈಸಲ್ಮೇರ್‌ನ ಜವಾಹರ್ ಕಾಲೋನಿ ಬಳಿ ಪತನವಾಗಿತ್ತು. ಮಧ್ಯಾಹ್ನ 2 ಗಂಟೆಗೆ ಫೈಟರ್ ಜೆಟ್ ಪತನವಾಗಿ ಬೆಂಕಿ ಹತ್ತಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಹೇಗೋ ಇಬ್ಬರೂ ಪೈಲಟ್‌ಗಳು ಫೈಟರ್ ಜೆಟ್‌ನಿಂದ ಜಿಗಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದರು.
ಇದನ್ನೂ ಓದಿ: Russian Military Plane: ರಕ್ಷಣಾ ಸಚಿವಾಲಯದ ವಿಮಾನ ಪತನ; 15 ಮಂದಿಯ ದಾರುಣ ಸಾವು