Site icon Vistara News

‘ಐಎಎಸ್‌’ ಗಂಡನ ಬಿಟ್ಟು, ಗ್ಯಾಂಗ್‌ಸ್ಟರ್‌ ಜತೆ ಓಡಿಹೋಗಿದ್ದ ಮಹಿಳೆ ಬಾಳು ಅಂತ್ಯ; ಪತಿ ಮನೆಗೆ ವಾಪಸಾಗಿ ಆತ್ಮಹತ್ಯೆ!

News

IAS Officer's Wife Who Eloped With Gangster Returns Home, Dies By Suicide

ಗಾಂಧಿನಗರ: ಜೀವನದಲ್ಲಿ ಕೆಲವರನ್ನು ನೋಡಿದಾಗ ಅನಿಸುತ್ತದೆ. ದೇವರು ಅವರಿಗೆ ಎಲ್ಲವನ್ನೂ ಕೊಟ್ಟಿರುತ್ತಾನೆ. ಸ್ನೇಹಿತರು, ಸಂಬಂಧಿಕರನ್ನು ಕರುಣಿಸಿರುತ್ತಾನೆ. ಇದಕ್ಕೆ ನಿದರ್ಶನ ಎಂಬಂತೆ, ಗುಜರಾತ್‌ನಲ್ಲಿ (Gujarat) ಐಎಎಸ್‌ ಅಧಿಕಾರಿಯಾಗಿದ್ದ (IAS Officer) ಪತಿಯನ್ನು ತೊರೆದು, ಗ್ಯಾಂಗ್‌ಸ್ಟರ್‌ ಜತೆ ಪರಾರಿಯಾಗಿದ್ದ ಮಹಿಳೆಯೊಬ್ಬರ ಬಾಳು ಈಗ ದುರಂತ ಅಂತ್ಯ ಕಂಡಿದೆ. ಗ್ಯಾಂಗ್‌ಸ್ಟರ್‌ನನ್ನು ಬಿಟ್ಟು ಗಂಡನ ಮನೆಗೆ ವಾಪಸ್‌ ಬಂದ 45 ವರ್ಷದ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಜರಾತ್‌ ರಾಜಧಾನಿ ಗಾಂಧಿನಗರದ ಸೆಕ್ಟರ್‌ 19ರಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಸೂರ್ಯ ಜಯ್‌ ಎಂಬ ಮಹಿಳೆಯು 9 ತಿಂಗಳ ಹಿಂದೆ ಗ್ಯಾಂಗ್‌ಸ್ಟರ್‌ ಒಬ್ಬನ ಜತೆ ಪರಾರಿಯಾಗಿದ್ದರು. ಇವರ ಪತಿ ರಂಜೀತ್‌ ಕುಮಾರ್‌ ಅವರು ಗುಜರಾತ್‌ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಯಾಗಿದ್ದಾರೆ. ಐಎಎಸ್‌ ಅಧಿಕಾರಿಯಾಗಿದ್ದ ಪತಿಯನ್ನು ತೊರೆದು, ಅವರು ಗ್ಯಾಂಗ್‌ಸ್ಟರ್‌ ಜತೆ ಓಡಿಹೋಗಿದ್ದರು. ಆದರೆ, ಅವರು ಶನಿವಾರ (ಜುಲೈ 20) ಗಂಡನ ಮನೆಗೆ ವಾಪಸ್‌ ಬಂದವರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ (ಜುಲೈ 21) ಮೃತಪಟ್ಟಿದ್ದಾರೆ.

ವಾಪಸ್‌ ಬರುವ ಹಿಂದಿದೆ ದೊಡ್ಡ ಕತೆ

ಒಳ್ಳೆಯ ಗಂಡನ ಬಿಟ್ಟು, ಗ್ಯಾಂಗ್‌ಸ್ಟರ್‌ ಜತೆ ಓಡಿ ಹೋದೆ ಎಂಬ ಪಾಪಪ್ರಜ್ಞೆ ಕಾಡಿ ಸೂರ್ಯ ಜಯ್‌ ವಾಪಸ್‌ ಮನೆಗೆ ಬಂದಿದ್ದಲ್ಲ ಎಂಬ ಭೀಕರ ಮಾಹಿತಿ ಲಭ್ಯವಾಗಿದೆ. ಮಹಿಳೆ ವಿರುದ್ಧ 14 ವರ್ಷದ ಬಾಲಕನನ್ನು ಅಪಹರಣ ಮಾಡಿದ ಕೇಸ್‌ ದಾಖಲಾಗಿದೆ. ಇದರಿಂದಾಗಿ ಆಕೆಗೆ ಬಂಧನದ ಭೀತಿ ಎದುರಾಗಿದೆ. ಪತಿ ಐಎಎಸ್‌ ಆಫೀಸರ್‌ ಆಗಿರುವ ಕಾರಣ, ಆತನ ಮನೆಯಲ್ಲಿದ್ದರೆ ಪೊಲೀಸರು ಬಂಧಿಸುವುದಿಲ್ಲ ಎಂದು ಭಾವಿಸಿ ಮನೆಗೆ ನುಗ್ಗಲು ಯತ್ನಿಸಿದ್ದಾಳೆ. ಆದರೆ, ಅಧಿಕಾರಿ ಮನೆಯಲ್ಲಿದ್ದ ಸಿಬ್ಬಂದಿಯು ಒಳಗೆ ಹೋಗಲು ಬಿಟ್ಟಿಲ್ಲ. ಇದರಿಂದ ವಿಚಲಿತಳಾದ ಆಕೆಯು, ಅಲ್ಲಿಯೇ ವಿಷ ಸೇವಿಸಿದ್ದಾಳೆ. ಬಳಿಕ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾಳೆ. ಕೊನೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಅಧಿಕಾರಿಯ ವಕೀಲರು ಹೇಳುವುದೇನು?

ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ರಂಜೀತ್‌ ಕುಮಾರ್‌ ಅವರ ಪರ ವಕೀಲ ಹಿತೇಶ್‌ ಗುಪ್ತಾ ಅವರು ಮಾಹಿತಿ ನೀಡಿದ್ದಾರೆ. “2023ರಲ್ಲಿಯೇ ರಂಜೀತ್‌ ಕುಮಾರ್‌ ಹಾಗೂ ಸೂರ್ಯ ಜಯ್‌ ಪ್ರತ್ಯೇಕವಾಗಿದ್ದಾರೆ. ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಶನಿವಾರ (ಜುಲೈ 20) ರಂಜೀತ್‌ ಕುಮಾರ್‌ ಅವರು ವಿಚ್ಛೇದನದ ಅರ್ಜಿ ಕುರಿತಂತೆ ಮನೆಯಿಂದ ಹೊರಗೆ ಹೋದಾಗ ಮಹಿಳೆಯು ಮನೆಗೆ ಬಂದಿದ್ದಾರೆ. ಇದಾದ ಬಳಿಕ ದುರಂತ ನಡೆದಿದೆ” ಎಂದು ವಿವರಿಸಿದ್ದಾರೆ. ಅಂದಹಾಗೆ ಮಹಿಳೆಯ ಬಾಯ್‌ಫ್ರೆಂಡ್‌ ಗ್ಯಾಂಗ್‌ಸ್ಟರ್‌ ಆಗಿದ್ದು, ಆತನನ್ನು ಮಹಾರಾಜ ಸಿಂಗ್‌ ಎಂಬುದಾಗಿ ಗುರುತಿಸಲಾಗಿದೆ. ಈತನ ವಿರುದ್ಧವೂ ಅಪಹರಣ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Road Accident: ಜನ್ಮದಿನದಂದೇ ಯುವತಿಯ ಜೀವ ತೆಗೆದ ಜವರಾಯ; ಕಾರು ಚಾಲಕ ಪರಾರಿ

Exit mobile version