ಕಾರ್ಡ್ ಹಾಕಿದರೆ ಹಣ ಬರುವ ಎಟಿಎಂ ನಮಗೆಲ್ಲ ಗೊತ್ತು. ಆದರೆ ಬೆಂಗಳೂರಿನಲ್ಲಿ ಇಡ್ಲಿ ಕೊಡುವ ಎಟಿಎಂ ಕೂಡ ಇದೆ..! ನೀವಿದನ್ನು ನಂಬಲೇಬೇಕು. ಯಾಕೆಂದರೆ ಇಡ್ಲಿ ಕೊಡುವ ಎಟಿಎಂನ ವಿಡಿಯೋ ಕೂಡ ಈಗ ಸಿಕ್ಕಾಪಟೆ ವೈರಲ್ ಆಗುತ್ತಿದೆ. ದಕ್ಷಿಣ ಭಾರತದ ಸುಪ್ರಸಿದ್ಧ ತಿಂಡಿಗಳಲ್ಲಿ ಒಂದಾದ ಇಡ್ಲಿ ಅನೇಕಾನಕರಿಗೆ ಪ್ರಿಯ. ಅಂಥ ಇಡ್ಲಿಯೀಗ ಬೆಂಗಳೂರಿನ ಮಳಿಗೆಯೊಂದರಲ್ಲಿ ದಿನದ 24ಗಂಟೆ ಲಭ್ಯವಿರುತ್ತದೆ. ಅದೂ ಒಂದು ಮಷಿನ್ನಲ್ಲಿ..
ಹೀಗೆ 24 ಗಂಟೆಗಳ ಕಾಲ ಇಡ್ಲಿ-ಚಟ್ನಿ ನೀಡುವ ಮಷಿನ್ನ್ನು ಪ್ರಾರಂಭಿಸಿದ್ದು Freshot Robotics ಎಂಬ ಬೆಂಗಳೂರು ಮೂಲದ ಸ್ಟಾರ್ಟ್ಅಪ್. ಸದ್ಯ ಒಂದು ಮಳಿಗೆ ಶುರುವಾಗಿದ್ದು ಅದರಲ್ಲಿ 24×7 ಕಾಲವೂ ಬಿಸಿಬಿಸಿ -ಇಡ್ಲಿ, ಚಟ್ನಿ ಲಭ್ಯ. ನೀವಲ್ಲಿ ಹೋದರೆ ಹೇಗೆ ಪ್ರಕ್ರಿಯೆ ನಡೆಸಬೇಕು ಎಂಬುದು ಗೊತ್ತಾಗುತ್ತದೆ. ಇಡ್ಲಿ ಮಷಿನ್ ಬಳಿಯೇ ಒಂದು ಸ್ಕ್ಯಾನರ್ ಇಟ್ಟಿರಲಾಗಿದೆ. ನೀವು ಬಿಲ್ ಕೊಡಲು ಆ ಸ್ಕ್ಯಾನರ್ನಲ್ಲಿ ಸ್ಕ್ಯಾನ್ ಮಾಡಬೇಕು. ಆಗ ನಿಮ್ಮ ಮೊಬೈಲ್ನಲ್ಲಿ ಮೆನು ತೋರಿಸುತ್ತದೆ. ಅದರಲ್ಲಿ ನಿಮಗೆ ಎಷ್ಟು ಇಡ್ಲಿ ಬೇಕು ಎಂದು ನಮೂದಿಸಿ, ಹಣ ಪಾವತಿಸಿ. ನೀವು ಆರ್ಡರ್ ಕೊಟ್ಟಷ್ಟು ಇಡ್ಲಿಯನ್ನು ಮಷಿನ್ ಆ ಕ್ಷಣಕ್ಕೇ ತಯಾರಿಸಿ, ಚಟ್ನಿಯೊಂದಿಗೆ ಕೊಡುತ್ತದೆ. 52 ಸೆಕೆಂಡ್ಗಳಲ್ಲಿ ನಿಮ್ಮ ಇಡ್ಲಿ ರೆಡಿ..ಪೂರ್ತಿ ಪ್ಯಾಕ್ ಮಾಡಿದ ಬಾಕ್ಸ್ನಲ್ಲಿ ಇಡ್ಲಿ-ಚಟ್ನಿ ಹೊರಬರುತ್ತದೆ. ಇದೊಂದು ಪರಿಸರ ಸ್ನೇಹಿ ಮಷಿನ್ ಆಗಿದ್ದು, ಪ್ಯಾಕಿಂಗ್ಗೆ ಕೂಡ ಪ್ಲಾಸ್ಟಿಕ್ ಬಳಕೆ ಮಾಡೋದಿಲ್ಲ. ಒಟ್ಟಾರೆಯಾಗಿ 12 ನಿಮಿಷದಲ್ಲಿ 72 ಇಡ್ಲಿಗಳನ್ನು ಈ ಮಷಿನ್ ವಿತರಿಸಬಲ್ಲದು.
ಐಡಿಯಾ ಯಾರದ್ದು?
ಇಡ್ಲಿ ಮಷಿನ್ ಐಡಿಯಾ ಬಂದಿದ್ದು ಶರಣ್ ಹಿರೇಮಠ್ ಎಂಬುವರಿಗೆ. ಶರಣ್ ಹಿರೇಮಠ್ ಮತ್ತು ಚಂದ್ರಶೇಖರನ್ ಸೇರಿ 2019ರಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ Freshot Robotics ಸಂಸ್ಥಾಪಿಸಿದ್ದಾರೆ. ಅದಕ್ಕೊಂದು ಕಾರಣವೂ ಇದೆ. 2016ರಲ್ಲಿ ಒಮ್ಮೆ ಶರಣ್ ಹಿರೇಮಠ್ ಅವರ ಪುತ್ರಿಗೆ ಅನಾರೋಗ್ಯ ಕಾಡಿತ್ತು. ರಾತ್ರಿ ಆಕೆಗೆ ಇಡ್ಲಿ ತಿನ್ನಲು ಬೇಕಿತ್ತು. ಆಗ ಶರಣ್ ಹಿರೇಮಠ್ ಇಡ್ಲಿಗಾಗಿ ಹಲವು ಕಡೆಗಳಲ್ಲಿ ಸುತ್ತಾಡಿದ್ದರು. ಆದರೆ ಎಲ್ಲಿಯೂ ಇಡ್ಲಿ ಸಿಕ್ಕಿರಲಿಲ್ಲ. ಬಹುತೇಕ ರೆಸ್ಟೋರೆಂಟ್ಗಳು, ಹೋಟೆಲ್ಗಳು ಮುಚ್ಚಿದ್ದವು. ಬಾಗಿಲು ತೆರೆದಿದ್ದ ಹೋಟೆಲ್ಗಳಲ್ಲೂ ಇಡ್ಲಿ ಲಭ್ಯ ಇರಲಿಲ್ಲ. ಇದೇ ಈಗ ಅವರು ಇಡ್ಲಿ ಎಟಿಎಂ ತೆರೆಯಲು ಕಾರಣವಾಯಿತು. ಪ್ರೊಡಕ್ಟ್ ಡಿಸೈನ್ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ್ದ ಸುರೇಶ್ ಜತೆ ಸೇರಿ 2019ರಲ್ಲಿ ಹೀಗೊಂದು ಮಷಿನ್ ತಯಾರಿಸಿದ್ದಾರೆ. 2022ರ ಏಪ್ರಿಲ್ನಿಂದ ಮಷಿನ್ ಅಧಿಕೃತವಾಗಿ ಕೆಲಸ ಮಾಡುತ್ತಿದ್ದು, ಹಲವರು ಉಪಯೋಗ ಪಡೆಯುತ್ತಿದ್ದಾರೆ. ಹಾಗೇ ಈ ಮಷಿನ್ನಲ್ಲಿ ಇನ್ನಷ್ಟು ಆಹಾರಗಳು ಸಿಗುವಂತೆ ಮಾಡುವ ಮತ್ತು ಬೆಂಗಳೂರಿನ ಇನ್ನೂ ಹಲವು ಕಡೆಗಳಿಗೆ ವಿಸ್ತರಿಸುವ ಬಗ್ಗೆಯೂ ಸ್ಟಾರ್ಟಪ್ ಸಂಸ್ಥಾಪಕರು ಯೋಚನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Modi In Karnataka| ಮೋದಿ ಮೆನುವಿನಲ್ಲಿ ಮೈಸೂರ್ ಪಾಕ್, ಮಲ್ಲಿಗೆ ಇಡ್ಲಿ, ಅವಲಕ್ಕಿ