Site icon Vistara News

Nitin Gadkari | ತಿರುಚಿದ ಮತ್ತು ಸುಳ್ಳು ಸುದ್ದಿ ಹರಡುವವರ ವಿರುದ್ಧ ನಿತಿನ್ ಗಡ್ಕರಿ ಕಾನೂನು ಕ್ರಮದ ಎಚ್ಚರಿಕೆ

nitin gadkari

ನವ ದೆಹಲಿ: ಬಿಜೆಪಿಯ ಸಂಸದೀಯ ಮಂಡಳಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರನ್ನು ಕೈ ಬಿಟ್ಟ ಬೆನ್ನಲ್ಲೇ ನಾನಾ ಸುದ್ದಿಗಳು ಹರಿದಾಡುತ್ತಿವೆ. ತಮ್ಮದೇ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಕ್ಕೆ ಆರ್‌ಎಸ್ಎಸ್ ಒಪ್ಪಿಗೆಯಿಂದಲೇ ಸಂಸದೀಯ ಮಂಡಳಿಯಿಂದ ಗಡ್ಕರಿಯನ್ನು ಕೈ ಬಿಡಲಾಗಿತ್ತು ಎಂಬ ಸುದ್ದಿ ಹರಡಿತ್ತು. ಏತನ್ಮಧ್ಯೆ, ಬಿಜೆಪಿ ಸರ್ಕಾರ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬರ್ಥದ ವಿಡಿಯೋ ವಿರುದ್ಧ ನಿತಿನ್ ಗಡ್ಕರಿ ಗರಂ ಆಗಿದ್ದಾರೆ. ಈ ರೀತಿಯಾಗಿ ಕಪೋಲಕಲ್ಪಿತ ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ಕಾರಣಕ್ಕಾಗಿ ತಮ್ಮ ಹೇಳಿಕೆಯನ್ನು ತಿರುಚಿ, ಕಪೋಲಕಲ್ಪಿತವಾಗಿ ಸುದ್ದಿ ಹರಡತ್ತಿರುವವರ ವಿರುದ್ಧ ಸಚಿವ ಗಡ್ಕರಿ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪಕ್ಷದ ಹಿತದ ದೃಷ್ಟಿಯಿಂದ ಇಂಥವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಈಗ ಮತ್ತೊಮ್ಮೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿನಾನು ಆಡಿರುವ ಮಾತುಗಳನ್ನು ಸಂದರ್ಭದಾಚೆಗೆ ಮತ್ತು ಸರಿಯಲ್ಲದ್ದ ಹೇಳಿಕೆಗಳನ್ನು ತಿರುಚುವ ಮೂಲಕ ಮುಖ್ಯವಾಹಿನಿಯ ಕೆಲವರು, ಸಾಮಾಜಿಕ ಮಾಧ್ಯಮಗಳು ಮತ್ತು ನಿರ್ದಿಷ್ಟವಾಗಿ ಕೆಲವು ವ್ಯಕ್ತಿಗಳು ರಾಜಕೀಯ ಲಾಭಕ್ಕಾಗಿ ನನ್ನ ವಿರುದ್ಧ ಕೆಟ್ಟ ಮತ್ತು ಕಟ್ಟುಕತೆ ಪ್ರಚಾರವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗಡ್ಕರಿ ಅವರು ಟ್ವೀಟ್ ಮಾಡಿದ್ದಾರೆ.

ನಿತಿನ್ ಗಡ್ಕರಿ ಅವರು ಮಂಗಳವಾರ ಪುಸ್ತಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಅವರ ನಿರ್ದಿಷ್ಟ ಮಾತುಗಳನ್ನು ಮಾತ್ರ ತೆಗೆದುಕೊಂಡು ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಲಾಗಿದೆ. ಆ ವಿಡಿಯೋ ಅನ್ನು ಟ್ವಿಟರ್‌ನಲ್ಲಿ ಷೇರ್ ಮಾಡಿರುವ ಗಡ್ಕರಿ, ಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡವವರ ವಿರುದ್ದ ಕೆಂಡ ಕಾರಿದ್ದಾರೆ. ತಮ್ಮ ಈ ಟ್ವೀಟ್ ಅನ್ನು ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಪ್ರಧಾನಿ ಕಾರ್ಯಾಲಯ ಟ್ವಿಟರ್ ಅಕೌಂಟ್‌ಗೂ ಟ್ಯಾಗ್ ಮಾಡಿದ್ದಾರೆ.

ನಾನು ಸಾಮಾನ್ಯ ವಾಗಿ ಇಂಥ ದುರುದ್ದೇಶಪೂರಿತ ಅಜೆಂಡಾಗಳನ್ನು ಹೊದಿರುವ ಸಂಗತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುವುದಿಲ್ಲ. ಆದರೆ, ಇಂಥ ದುಷ್ಕೃತ್ಯವನ್ನು ಮುಂದುವರಿಸಿದರೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುವುದ್ಕಕಾಗಿ ಷೇರ್ ಮಾಡಿದ್ದೇನೆ. ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಆರ್‌ಎಸ್‌ಎಸ್‌ಗೆ ಮುಜುಗರ ತಂದದ್ದೇ ನಿತಿನ್‌ ಗಡ್ಕರಿ ಪದಚ್ಯುತಿಗೆ ಕಾರಣವೇ?

Exit mobile version