ನವದೆಹಲಿ: ಭಾರತೀಯ ಪ್ರತಿಪಕ್ಷಗಳು ಒಂದಾಗಿ ಚುನಾವಣೆಗೆ ಸ್ಪರ್ಧಿಸಿದರೆ ಖಂಡಿತವಾಗಿಯೂ ಭಾರತೀಯ ಜನತಾ ಪಾರ್ಟಿ(BJP)ಯನ್ನು ಸೋಲಿಸಬಹುದು ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಹೇಳಿದ್ದಾರೆ. ಇಟಲಿಯ Corriere della Sera ದಿನ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ರಾಹುಲ್ ಗಾಂಧಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೋ ಸೋಲಿಸಬಹುದು. ಅದಕ್ಕಾಗಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಶನದ ವೇಳೆ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆಯ ಅನುಭವಗಳು, ಮುಂಬರುವ ಚುನಾವಣೆಯಲ್ಲಿ ಮೋದಿಯನ್ನು ಹೇಗೆ ಸೋಲಿಸಬಹುದು, ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ಅವರ ಜತೆಗಿನ ಒಡನಾಟಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಭಾರತ್ ಜೋಡೋ ಯಾತ್ರೆ ಅನುಭವ
ಭಾರತ್ ಜೋಡೋ ಯಾತ್ರೆ ಬಗೆಗಿನ ಅನುಭವ ಹಂಚಿಕೊಂಡ ರಾಹುಲ್ ಗಾಂಧಿ ಅವರು ಇದೊಂದು ರೀತಿಯಲ್ಲಿ ತಪಸ್ಸಿನ ರೀತಿಯಲ್ಲಿತ್ತು. ಪಶ್ಚಿಮ ದೇಶದವರಿಗೆ ತಪಸ್ಸು ಎಂಬ ಸಂಸ್ಕೃತ ಪದವನ್ನು ಸರಿಯಾಗಿ ಗ್ರಹಿಸಲಾಗುವುದಿಲ್ಲ. ನೀವೇನಾದರೂ ಇದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದರೆ ತ್ಯಾಗ, ಸಹನೆ ಅಂತ ಹೇಳಬಹುದು. ಆದರೆ, ಅದು ಸರಿಯಾದ ಅರ್ಥವಲ್ಲ. ಪಾದಯಾತ್ರೆಯು ವಿಶಿಷ್ಟ ಅನುಭವವನ್ನು ನೀಡುತ್ತದೆ. ಅದು ನಿಮ್ಮನ್ನು ನಿಮ್ಮೊಳಗೇ ನೋಡಿಕೊಳ್ಳುವಂತೆ ಮಾಡುತ್ತದೆ. ಅದು ಭಾರತೀಯ ವಿಶಿಷ್ಟ ಶಕ್ತಿಯನ್ನು ಸಾದರಪಡಿಸುತ್ತದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಹಿಂದೂ ಮತ್ತು ಮುಸ್ಲಿಮರ ನಡುವಿನ ಧ್ರುವೀಕರಣ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಧ್ರುವೀಕರಣ ಕುರಿತು ಮಾಧ್ಯಮಗಳು ಬಿತ್ತರಿಸುವ ರೀತಿಯಲ್ಲಿ ಪರಿಸ್ಥಿತಿ ಇಲ್ಲ. ಬಡತನ, ಅನಕ್ಷರತೆ, ಹಣದುಬ್ಬರ, ಕೋವಿಡ್ ನಂತರದ ಸಣ್ಣ ವ್ಯಾಪಾರೋದ್ಯಮಗಳ ನಷ್ಟ, ಸಾಲ, ಭೂರಹಿತಕ ಕೃಷಿಕರ ಸಮಸ್ಯೆಗಳ ಕುರಿತಾದ ಗಮನವನ್ನು ಬೇರೆಡೆ ಸೆಳೆಯಲು ಈ ತಂತ್ರವನ್ನು ಬಳಸಲಾಗುತ್ತಿದೆ ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ: Rahul Gandhi: ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಯುನಿವರ್ಸಿಟಿ ಬಿಸಿನೆಸ್ ಸ್ಕೂಲ್‌ಲ್ಲಿ ರಾಹುಲ್ ಗಾಂಧಿ ವಿಶೇಷ ಉಪನ್ಯಾಸ
ನಿರಂಕುಶ ಆಡಳಿತ
ದೇಶದಲ್ಲಿ ಈಗಾಗಲೇ ಫಾಸಿಸಮ್ ಇದ್ದೇ ಇದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಗಳು ವಿಫಲವಾಗಿವೆ. ಸಂಸತ್ತು ಕೂಡ ಕೆಲಸ ಮಾಡುತ್ತಿಲ್ಲ. ಎರಡು ವರ್ಷಗಳ ಕಾಲ ನನಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ನಾನು ಮಾತನಾಡಲಾರಂಭಿಸಿದರೆ, ಮೈಕ್ರೋಫೋನ್ ಆಫ್ ಮಾಡಲಾಗುತ್ತಿತ್ತು. ಶಕ್ತಿಗಳ ನಡುವಿನ ಸಮತೋಲನ ಹೊರಟುಹೋಗಿದೆ. ನ್ಯಾಯಾಂಗ ಕೂಡ ಸ್ವತಂತ್ರವಾಗಿ ಉಳಿದಿಲ್ಲ. ಪತ್ರಿಕೆಗಳೂ ಮುಕ್ತವಾಗಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎಲ್ಲವೂ ಕೇಂದ್ರೀಕೃತಗೊಳ್ಳುತ್ತಿದೆ ಎಂದು ರಾಹುಲ್ ಹೇಳಿದರು.