ಮುಂಬೈ: ಮಹಾರಾಷ್ಟ್ರದಲ್ಲಿ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಶಿವಸೇನೆ ಪಕ್ಷದ ಹೆಸರು ಹಾಗೂ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಚುನಾವಣೆ ಆಯೋಗವು ಏಕನಾಥ್ ಶಿಂಧೆ ಬಣಕ್ಕೆ ನೀಡಿ, ಅವರ ಬಣವೇ ನಿಜವಾದ ಶಿವಸೇನೆ ಎಂಬುದಾಗಿ ಘೋಷಿಸಿರುವುದಕ್ಕೆ ಉದ್ಧವ್ ಠಾಕ್ರೆ (Uddhav Thackeray) ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನೀವು ಗಂಡಸರೇ ಆಗಿದ್ದರೆ, ಕದ್ದ ಬಿಲ್ಲು ಮತ್ತು ಬಾಣದೊಂದಿಗೆ ನಮ್ಮೆದುರು ಬನ್ನಿ” ಎಂದು ಶಿಂಧೆ ಬಣಕ್ಕೆ ಸವಾಲು ಹಾಕಿದ್ದಾರೆ.
ಅಧಿಕೃತ ನಿವಾಸ ‘ಮಾತೋಶ್ರೀ’ ಎದುರು ನೆರೆದಿದ್ದ ಅಪಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಏಕನಾಥ್ ಶಿಂಧೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ರಾಜ್ಯದ ಜನರಿಗೆ ಯಾವುದು ನಿಜವಾದ ಶಿವಸೇನೆ ಎಂಬುದು ಗೊತ್ತಿದೆ. ಅವರಿಗೆ (ಏಕನಾಥ್ ಶಿಂಧೆ ಬಣ) ಶಿವಸೇನೆಯ ಹೆಸರು ಬೇಕು, ಪಕ್ಷದ ಬಿಲ್ಲು ಮತ್ತು ಬಾಣದ ಗುರುತು ಬೇಕು. ಆದರೆ, ಶಿವಸೇನೆಯ ಕುಟುಂಬ ಬೇಡ. ನಿಜವಾಗಿಯೂ ನೀವು ಗಂಡಸರಾಗಿದ್ದರೆ ನಮ್ಮೆದುರು ಬನ್ನಿ. ಜನರೆದುರು ಕಳ್ಳತನ ಮಾಡಿದ ಬಿಲ್ಲು ಮತ್ತು ಬಾಣ ಹಿಡಿದು ನಿಲ್ಲಿ” ಎಂಬುದಾಗಿ ಸವಾಲು ಎಸೆದಿದ್ದಾರೆ. “ಯುದ್ಧ ಆರಂಭವಾಗಿದೆ, ಮುಂದಿನ ಚುನಾವಣೆಯಲ್ಲಿ ಜನರೇ ಕಳ್ಳರಿಗೆ ಪಾಠ ಕಲಿಸಲಿದ್ದಾರೆ” ಎಂದೂ ಹೇಳಿದರು.
ಬಲ ಪ್ರದರ್ಶನ ಕುರಿತು ಆದಿತ್ಯ ಠಾಕ್ರೆ ಟ್ವೀಟ್
EC ಎಂದರೆ ಸಂಪೂರ್ಣವಾಗಿ ರಾಜಿ ಮಾಡಿಕೊಂಡ ಸಂಸ್ಥೆ
ಉದ್ಧವ್ ಠಾಕ್ರೆ ಅವರು ಚುನಾವಣೆ ಆಯೋಗದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. “ಎಲೆಕ್ಷನ್ ಕಮಿಷನ್ (EC) ಎಂದರೆ ಸಂಪೂರ್ಣವಾಗಿ ರಾಜಿ ಮಾಡಿಕೊಂಡ ಸಂಸ್ಥೆ (Entirely Compromised) ಆಗಿದೆ. ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮನಂತೆ ಕಾರ್ಯನಿರ್ವಹಿಸುತ್ತಿದೆ” ಎಂದು ಅಸಮಾಧಾನ ಹೊರಹಾಕಿದರು. ಮಾತೋಶ್ರೀ ಎದುರು ಸಾವಿರಾರು ಕಾರ್ಯಕರ್ತರನ್ನು ಜಮಾಯಿಸಿ ಉದ್ಧವ್ ಠಾಕ್ರೆ ಬಲ ಪ್ರದರ್ಶನ ಮಾಡಿದರು.
ಉದ್ಧವ್‌ಗೆ ತಿರುಗೇಟು ಕೊಟ್ಟ ಬಿಜೆಪಿ
ಮಾತೋಶ್ರೀ ಎದುರು ಉದ್ಧವ್ ಠಾಕ್ರೆ ಅವರು ಕಾರಿನ ಸನ್‌ರೂಫ್‌ನಲ್ಲಿ ನಿಂತು ಅವರ ತಂದೆ ಬಾಳಾಸಾಹೇಬ್ ಠಾಕ್ರೆ ಅವರನ್ನು ನೆನಪಿಸುವ ಹಾಗೆ ಬಲ ಪ್ರದರ್ಶನ ಮಾಡಿದರು. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, “ಕಾರಿನ ಮೇಲೆ ನಿಂತು ಮಾತನಾಡಿದ ತಕ್ಷಣ ಉದ್ಧವ್ ಠಾಕ್ರೆ ಅವರು ಬಾಳಾಸಾಹೇಬ್ ಠಾಕ್ರೆ ಆಗುವುದಿಲ್ಲ” ಎಂದಿದೆ.
ಕೇಶವ್ ಉಪಾಧ್ಯೆ ಟ್ವೀಟ್
ಬಾಳಾಸಾಹೇಬ್ ಠಾಕ್ರೆ ಅವರು ಹಗಲು-ರಾತ್ರಿ ಕಷ್ಟಪಟ್ಟು ಶಿವಸೇನೆಯನ್ನು ಕಟ್ಟಿದರು. ಪಕ್ಷದ ಕಾರ್ಯಕರ್ತರೊಂದಿಗೆ ಒಡನಾಡಿ, ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ, ಉದ್ಧವ್ ಠಾಕ್ರೆ ಅವರು ಮನೆಯಿಂದಲೇ ಹೊರಬರುವುದಿಲ್ಲ, ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಕಿವಿಯಾಗುವುದಿಲ್ಲ” ಎಂದು ಬಿಜೆಪಿ ಮುಖಂಡ ಕೇಶವ್ ಉಪಾಧ್ಯೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Uddhav Thackeray: ‘ದೇಶದಲ್ಲಿ ಪ್ರಜಾಪ್ರಭುತ್ವ ಅಂತ್ಯ’, ಶಿವಸೇನೆ ಚಿಹ್ನೆ ಕಳೆದುಕೊಂಡ ಬಳಿಕ ಉದ್ಧವ್ ಆಕ್ರೋಶ