Site icon Vistara News

ದೇಶದಲ್ಲಿರಬೇಕು ಎಂದರೆ ಭಾರತ್‌ ಮಾತಾ ಕಿ ಜೈ ಎನ್ನಲೇಬೇಕು; ಕೇಂದ್ರ ಸಚಿವ ಆದೇಶ!

Kailash Choudhary

If Want To Live In India, Have To Say Bharat Mata Ki Jai: Says Union Minister Kailash Choudhary

ಹೈದರಾಬಾದ್:‌ ಪಾಕಿಸ್ತಾನ ವಿರುದ್ಧ ನಡೆದ ಕ್ರಿಕೆಟ್‌ ಪಂದ್ಯದಲ್ಲಿ (ICC World Cup 2023) ರೋಹಿತ್‌ ಶರ್ಮಾ ಪಡೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರತ್‌ ಮಾತಾ ಕಿ ಜೈ (Bharat Mata ki Jai), ವಂದೇ ಮಾತರಂ ಘೋಷಣೆಗಳು ಮೊಳಗಿವೆ. ಇಸೇಲ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ವಾಪಸ್‌ ಬಂದವರೂ ಭಾರತ್‌ ಮಾತಾ ಕಿ ಜೈ ಎನ್ನುತ್ತಿದ್ದಾರೆ. ಇದರ ಬೆನ್ನಲ್ಲೇ, “ಭಾರತದಲ್ಲಿರಬೇಕು ಎಂದರೆ, ಅವರು ಭಾರತ್‌ ಮಾತಾ ಕಿ ಜೈ ಎನ್ನಲೇಬೇಕು” ಎಂದು ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವ ಕೈಲಾಶ್‌ ಚೌಧರಿ (Kailash Choudhary) ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಯೊಬ್ಬರ ಹೇಳಿಕೆ ಉಲ್ಲೇಖಿಸುತ್ತ ಹೀಗೆ ಹೇಳಿದರು. “ಭಾರತದಲ್ಲಿ ಇರಬೇಕು ಎಂದು ಬಯಸುವವರು ಭಾರತ್‌ ಮಾತಾ ಕಿ ಜೈ ಎನ್ನಬೇಕು. ಹಾಗೊಂದು ವೇಳೆ, ಭಾರತ್‌ ಮಾತಾ ಕಿ ಜೈ ಎನ್ನುವುದಿಲ್ಲ ಎಂದರೆ, ಅಂತಹವರಿಗೆ ತಕ್ಕ ಪಾಠ ಕಲಿಸಬೇಕು” ಎಂದರು. ಹಾಗೆಯೇ, ರಾಜ್ಯದಲ್ಲಿ ರಾಷ್ಟ್ರೀಯವಾದ ಮನಸ್ಥಿತಿಯ ಸರ್ಕಾರವನ್ನು ಜನ ಆಯ್ಕೆ ಮಾಡಬೇಕು ಎಂದು ಕೂಡ ಹೇಳಿದರು. ಆ ಮೂಲಕ ಬಿಜೆಪಿಯನ್ನೇ ಗೆಲ್ಲಿಸಿ ಎಂದು ಜನರಿಗೆ ಪರೋಕ್ಷವಾಗಿ ಕರೆ ನೀಡಿದರು.

“ಯಾರಾದರೂ ಭಾರತ್‌ ಮಾತಾ ಕಿ ಜೈ ಎನ್ನುವುದಿಲ್ಲ ಎಂದರೆ, ಅವರಿಗೆ ಜೈ ಎನ್ನುವಂತೆ ಆಗ್ರಹಿಸಬೇಕು. ಭಾರತದಲ್ಲಿರಬೇಕು ಎಂದರೆ ಭಾರತ್‌ ಮಾತಾ ಕಿ ಜೈ ಎನ್ನಬೇಕು ಎಂದು ಹೇಳಬೇಕು. ಅಷ್ಟಕ್ಕೂ, ಭಾರತದಲ್ಲಿದ್ದುಕೊಂಡು ಯಾರು ಪಾಕಿಸ್ತಾನ ಜಿಂದಾಬಾದ್‌ ಎನ್ನುತ್ತಾರೆ? ಭಾರತ್‌ ಮಾತಾ ಕಿ ಜೈ, ವಂದೇ ಮಾತರಂ ಎಂದು ಹೇಳುವವರಿಗೆ ಮಾತ್ರ ಭಾರತದಲ್ಲಿ ಜಾಗ ಇದೆ” ಎಂದರು.

“ಭಾರತದಲ್ಲಿದ್ದುಕೊಂಡು ಯಾರಾದರೂ ಭಾರತ್‌ ಮಾತಾ ಕೀ ಜೈ ಎನ್ನುವುದಿಲ್ಲ ಎಂದಾದರೆ, ಅವರಿಗೆ ಹಿಂದುಸ್ತಾನದ ಮೇಲೆ, ಭಾರತದ ಮೇಲೆ ನಂಬಿಕೆ ಇಲ್ಲ ಎನ್ನುವುದಾದರೆ, ಅವರು ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆಯಲ್ಲಿ ನಂಬಿಕೆ ಇಟ್ಟಿದ್ದರೆ, ಅಂತಹವರು ಧಾರಾಳವಾಗಿ ಪಾಕಿಸ್ತಾನಕ್ಕೆ ಹೋಗಬಹುದು. ದೇಶದಲ್ಲೀಗ ರಾಷ್ಟ್ರೀಯವಾದದ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.

ಇದನ್ನೂ ಓದಿ: Chandrayaan 3 : ಚಂದ್ರಯಾನ ಯಶಸ್ಸು ಕೋರಿ ಮುಸ್ಲಿಮರಿಂದ ದರ್ಗಾದಲ್ಲಿ ಪ್ರಾರ್ಥನೆ, ಭಾರತ್‌ ಮಾತಾ ಕಿ ಜೈ ಘೋಷಣೆ

ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟದ ವಿರುದ್ಧವೂ ಕೈಲಾಶ್‌ ಚೌಧರಿ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್‌ ಮೊದಲು ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಕದ್ದುಕೊಂಡಿತು. ಹಾಗಾಗಿ, ಇಂದು ರಾಹುಲ್‌ ಗಾಂಧಿ ಎಂಬ ಹೆಸರಿದೆ. ಈಗ ಇಂಡಿಯಾ ಎಂಬ ಹೆಸರನ್ನೂ ಕದ್ದುಕೊಂಡಿದೆ. ಯುಪಿಎ ಅವಧಿಯ ಭ್ರಷ್ಟಾಚಾರವನ್ನು ಜನರ ಮನಸ್ಸಿಂದ ಮರೆಮಾಚಲು ಇಂಡಿಯಾ ಎಂಬ ಹೆಸರಿಟ್ಟುಕೊಂಡಿದೆ” ಎಂದು ಕುಟುಕಿದರು.

Exit mobile version