ನವದೆಹಲಿ: ಸನಾತನ ಧರ್ಮ (Sanatan Dharma) ನಿರ್ಮೂಲನೆಯಾಗಬೇಕು ಎಂದು ಹೇಳಿದ್ದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ (Tamil Nadu CM M K Stalin) ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ (Minister Udhayanidhi Stalin) ವಿರುದ್ಧ ಸುಪ್ರೀಂ ಕೋರ್ಟ್ ವಕೀಲರೊಬ್ಬರು (Supreme Court Lawyer) ದಿಲ್ಲಿ ಪೊಲೀಸ್‌ಗೆ ದೂರು (Delhi Police) ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿರುವ ವಿನೀತ್ ಜಿಂದಾಲ್ ದೂರು ನೀಡಿದ್ದು, ಉದಯನಿಧಿ ತಮ್ಮ ಭಾಷಣದಲ್ಲಿ ಸನಾತನ ಧರ್ಮದ ವಿರುದ್ಧ ಪ್ರಚೋದನಕಾರಿ, ದ್ವೇಷಮಯ, ಅವಹೇಳನಕಾರಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಮಧ್ಯೆ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ (Tamli Nadu BJP Chief K Annamalai) ಅವರು, ಧೈರ್ಯವಿದ್ದರೆ ಉದಯನಿಧಿ ಅವರು ತಮ್ಮ ತಾಯಿ ದೇವಸ್ಥಾನಕ್ಕೆ ಹೋಗುವುದನ್ನು ತಡೆಯಲಿ ಎಂದು ಹೇಳಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವಂತೆ ಮತ್ತು ಸನಾತನವನ್ನು ಸೊಳ್ಳೆಗಳು, ಡೆಂಗ್ಯೂ, ಕರೋನಾ ಮತ್ತು ಮಲೇರಿಯಾಗಳೊಂದಿಗೆ ಹೋಲಿಸುವ ಹೇಳಿಕೆಯಿಂದ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರುದಾರ ವಕೀಲ ವಿನೀತ್ ಜಿಂದಾಲ್ ಹೇಳಿದ್ದಾರೆ.
ಉದಯನಿಧಿ ಅವರ ಮಾತುಗಳು ಸನಾತನ ಧರ್ಮದ ಮೇಲಿನ ದ್ವೇಷವನ್ನು ತೋರಿಸುತ್ತದೆ. ನಮ್ಮ ದೇಶದ ಸಂವಿಧಾನದ ಪ್ರಕಾರ ಅವರು ತಮಿಳುನಾಡು ಸರ್ಕಾರದಲ್ಲಿ ಶಾಸಕ ಮತ್ತು ಸಚಿವರಾಗಿದ್ದಾರೆ. ಅವರು ಎಲ್ಲರನ್ನೂ ಗೌರವಿಸಬೇಕು. ಆದರೆ ಅವರು ಉದ್ದೇಶಪೂರ್ವಕವಾಗಿ ಸನಾತನ ಧರ್ಮ ವಿರುದ್ಧ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಹೇಳಿಕೆಯನ್ನು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ನೀಡಿದ್ದಾರೆ ಎಂದು ದೂರಿದ್ದಾರೆ.
ತಮ್ಮ ತಾಯಿ ದೇವಸ್ಥಾನಕ್ಕೆ ಹೋಗುವುದನ್ನು ಉದಯನಿಧಿ ತಡೆಯಲಿ: ಬಿಜೆಪಿ ನಾಯಕ
ತಮಿಳುನಾಡು ಸಚಿವ ಉದಯನಿಧಿ ವಿರುದ್ಧ ವಾಗ್ದಾಳಿ ನಡೆಸಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು, ಉದಯನಿಧಿ ಅವರು ಹೇಳಿಕೆಯು ಬಾಲಿಶ ಹಾಗೂ ಕುಚೇಷ್ಟೇಯಿಂದ ಕೂಡಿದೆ. ಸ್ಟಾಲಿನ್ ‘ಜೂನಿಯರ್’ ತನ್ನ ತಂದೆ ಮತ್ತು ಅಜ್ಜನಿಂದ ಮಾತ್ರ ಸ್ಥಾನವನ್ನು ಅನುಭವಿಸುತ್ತಿದ್ದಾರೆ ಎಂದು ಕುಟುಕಿದರು.
ಈ ಸುದ್ದಿಯನ್ನೂ ಓದಿ: Sanatan Dharma: ಸಂತರು-ಮೋದಿ ಫೋಟೊ ಹಂಚಿಕೊಂಡು ಸನಾತನಿಗಳಿಗೆ ಪ್ರಕಾಶ್ ರಾಜ್ ಟೀಕೆ; ಜಾಡಿಸಿದ ಜನ!
ಸನಾತನ ಧರ್ಮವು ಕಾಲಾತೀತ ಮತ್ತು ಶಾಶ್ವತವಾಗಿದೆ. ಮೊಘಲರು, ಈಸ್ಟ್ ಇಂಡಿಯಾ ಕಂಪನಿ ಮತ್ತು ಕ್ರಿಶ್ಚಿಯನ್ ಮಿಷನರಿಗಳು ಸಹ ಅದನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಅದನ್ನು ತೊಡೆದುಹಾಕಲು ಅವನು(ಉದಯನಿಧಿ) ಯಾರು ಎಂದು ಅಣ್ಣಾಮಲೈ ಅವರು ಹೇಳಿದರು. ಉದಯನಿಧಿ ಅವರಿಗೆ ಧೈರ್ಯ ಇದ್ದರೆ, ಅವರ ತಾಯಿ ದೇವಸ್ಥಾನಕ್ಕೆ ಹೋಗುವುದನ್ನು ತಡೆಯಲಿ ಎಂದು ಬಿಜೆಪಿ ನಾಯಕ ಅಣ್ಣಾಮಲೈ ಅವರು ಇದೇ ವೇಳೆ ಸವಾಲು ಹಾಕಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.