Site icon Vistara News

Sachin Pilot | ಗೌರವ ಕೊಟ್ಟರಷ್ಟೇ ಗೌರವ ಸಿಗುತ್ತದೆ! ಸಿಎಂ ಗೆಹ್ಲೋಟ್‌ಗೆ ತಿರುಗೇಟು ನೀಡಿದ ಪೈಲಟ್

Gehlot VS Pilot

ಜೈಪುರ: ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ (Sachin Pilot) ನಡುವಿನ ವಾಕ್ಸಮರ ತಾರಕಕ್ಕೇರಿದೆ. ಪೈಲಟ್ ಅವರನ್ನು ಕೊರೊನಾಗೆ ಹೋಲಿಸಿದ್ದ ಗೆಹ್ಲೋಟ್ ಅವರಿಗೆ ತಿರುಗೇಟು ನೀಡಿರುವ ಸಚಿನ್ ಪೈಲಟ್ ಅವರು, ”ರಾಜಕಾರಣದಲ್ಲಿ ಸಂಯಮ ಕಾಪಾಡಿಕೊಳ್ಳುವುದು ಅಗತ್ಯ. ನೀವು ಗೌರವ ಕೊಟ್ಟರಷ್ಟೇ, ಮರಳಿ ಗೌರವ ಸಿಗುತ್ತದೆ,” ಎಂದು ಹೇಳಿದ್ದಾರೆ.

ರ್ಯಾಲಿಯೊಂದರಲ್ಲಿ ಮಾತನಾಡಿದ ಸಚಿನ್, ನನಗೆ ನಾನೇ ಇಷ್ಟ ಪಡದ ಪದಗಳನ್ನು ನಾನು ನನ್ನ ರಾಜಕೀಯ ವಿರೋಧಿಗಳಿಗೂ ಬಳಸುವುದಿಲ್ಲ. ಜನರು ತಮ್ಮ ನಾಲಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮತ್ತೊಬ್ಬರನ್ನು ಬೈಯುವುದು ತುಂಬ ಸರಳ. ಆದರೆ, ಒಮ್ಮೆ ಆಡಿದ ಮಾತುಗಳನ್ನು ಮತ್ತೆ ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾನು ಯಾರ ವಿರುದ್ಧವೂ ವೈಯಕ್ತಿಕ ದಾಳಿ ನಡೆಸಿಲ್ಲ. ಒಂದು ವೇಳೆ ನೀವು ಗೌರವ ಕೊಟ್ಟರೆ, ನಿಮಗೆ ಮರಳಿ ಅದೇ ಗೌರವ ಸಿಗುತ್ತದೆ” ಎಂದು ಸಿಎಂ ಗೆಹ್ಲೋಟ್ ಅವರ ಹೆಸರನ್ನು ಉಲ್ಲೇಖಿಸದೇ ತಿರುಗೇಟು ನೀಡಿದರು.

ಗೆಹ್ಲೋಟ್ ಹೇಳಿದ್ದೇನು?
ಗೆಹ್ಲೋಟ್ ಅವರು ಬಜೆಟ್ ಪೂರ್ವ ಸಭೆಯಲ್ಲಿ ಪಾಲ್ಗೊಂಡು, ಈ ವಿವಾದಕ್ಕೆ ಕಾರಣವಾಗುವ ಮಾತುಗಳನ್ನಾಡಿದ ವಿಡಿಯೋ ವೈರಲ್ ಆಗಿತ್ತು. ಸಭೆಯಲ್ಲಿ ಪಾಲ್ಗೊಂಡವರ ಪ್ರಶ್ನೆಗೆ ಉತ್ತರಿಸಿದ ಗೆಹ್ಲೋಟ್ ಅವರು, ಯಾರನ್ನೂ ಹೆಸರಿಸದೇ, ”ಈ ಮೊದಲು ಸಭೆ ಮಾಡಲು ಮುಂದಾಗಿದ್ದೆ. ಆದರೆ, ಕೊರೊನಾ ಬಂತು. ಆ ಬಳಿಕ ಪಕ್ಷದೊಳಗೆ ಬಹುದೊಡ್ಡ ಕೊರೊನಾ ಕೂಡ ಎಂಟ್ರಿ ಪಡೆಯಿತು,” ಎಂದು ಹೇಳುತ್ತಾರೆ. ಕೊರೊನಾ ಸಾಂಕ್ರಾಮಿಕ ವೇಳೆ, ಸಚಿನ್ ಪೈಲಟ್ ಅವರು ಗೆಹ್ಲೋಟ್ ವಿರುದ್ಧ ಬಂಡೆದ್ದಿದ್ದರು. ಹಾಗಾಗಿ, ಗೆಹ್ಲೋಟ್ ಅವರು ಪೈಲಟ್ ಅವರನ್ನೇ ಉಲ್ಲೇಖಿಸಿ, ಕೊರೊನಾ ಎಂದು ಹೇಳಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ | Gehlot VS Pilot | ʼಸಚಿನ್‌ʼ ಬಂಡಾಯಕ್ಕೆ ಅಮಿತ್‌ ಶಾ ʼಪೈಲಟ್ʼ‌, ಗಂಭೀರ ಆರೋಪ ಮಾಡಿದ ಸಿಎಂ ಗೆಹ್ಲೋಟ್

Exit mobile version