Site icon Vistara News

Asaduddin Owaisi: ಹೆಂಡತಿ ಬೈದರೆ ಏನು ಮಾಡಬೇಕು? ಓವೈಸಿ ಹೇಳಿದ ಈ ಮಾತು ಪಾಲಿಸಿ!

Kanwar Yatra

ಹೈದರಾಬಾದ್:‌ ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್‌ ಓವೈಸಿ (Asaduddin Owaisi) ಅವರು ಯಾವಾಗಲೂ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ, ಇಸ್ಲಾಂ ಧರ್ಮದ ಪ್ರವರ್ತಕರಂತೆ ಅವರು ಮಾತನಾಡುತ್ತಾರೆ. ಆದರೆ, ಈ ಬಾರಿ ಅಸಾದುದ್ದೀನ್‌ ಓವೈಸಿ ಅವರು ಕಾರ್ಯಕ್ರಮದಲ್ಲಿ ಗಂಡ-ಹೆಂಡತಿ (Husband And Wife Relationship) ಸಂಬಂಧದ ಬಗ್ಗೆ ಮಾತನಾಡುವ ಮೂಲಕ ಅವರು ಅಚ್ಚರಿ ಮೂಡಿಸಿದ್ದಾರೆ. “ಹೆಂಡತಿ ಬೈದರೆ ಸುಮ್ಮನಿರಬೇಕು, ಆಕೆಯ ಮೇಲೆ ದರ್ಪ ತೋರಬಾರದು” ಎಂದು ಪಕ್ಷದ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

“ನಾನು ಇದನ್ನು ತುಂಬ ಸಲ ಹೇಳಿದ್ದೇನೆ. ಇದರಿಂದ ಕೆಲವರ ಮನಸ್ಸಿಗೆ ನೋವಾಗಬಹುದು. ಆದರೆ, ಹೆಂಡತಿಯಾದವಳು ಗಂಡನ ಬಟ್ಟೆಗಳನ್ನು ತೊಳೆಯಬೇಕು, ಅಡುಗೆ ಮಾಡಿ ಬಡಿಸಬೇಕು ಅಥವಾ ನಿಮ್ಮ ತಲೆ ಸವರಬೇಕು ಎಂದು ಎಲ್ಲಿಯೂ ಕುರಾನ್‌ನಲ್ಲಿ ಹೇಳಿಲ್ಲ. ಹಾಗಾಗಿ, ಗಂಡಂದಿರು ತಮ್ಮ ಹೆಂಡತಿಯರ ಮೇಲೆ ಯಾವಾಗಲೂ ದರ್ಪ ತೋರಬಾರದು. ಅವರ ಮೇಲೆ ದೌರ್ಜನ್ಯ ಎಸಗಬಾರದು” ಎಂದು ಕಾರ್ಯಕರ್ತರಿಗೆ ಅಸಾದುದ್ದೀನ್‌ ಓವೈಸಿ ಕಿವಿಮಾತು ಹೇಳಿದರು.

“ಗಂಡ ದುಡಿಯುವ ಸಂಬಳದಲ್ಲಿ ಹೆಂಡತಿಗೆ ಪಾಲಿದೆ. ಆದರೆ, ಹೆಂಡತಿ ದುಡಿಯುವ ದುಡ್ಡಿನಲ್ಲಿ ಗಂಡನಿಗೆ ಯಾವುದೇ ಪಾಲು ಇಲ್ಲ. ತುಂಬ ಜನ ಹೆಂಡತಿ ಅಡುಗೆ ಮಾಡಿಲ್ಲ ಎಂದರೆ, ಸರಿಯಾಗಿ ಅಡುಗೆ ಮಾಡಿಲ್ಲ ಎಂದರೆ ಬೈಯುತ್ತಾರೆ. ಸಹೋದರರೇ, ಇದು ಇಸ್ಲಾಂ, ಎಲ್ಲಿಯೂ ಹೆಂಡತಿಯನ್ನು ಗುಲಾಮಳಂತೆ ಕಾಣಬೇಕು ಎಂದು ಉಲ್ಲೇಖಿಸಿಲ್ಲ. ಹೆಂಡತಿಗೆ ಬೈಯುವುದು, ಹೊಡೆಯುವುದು ಸರಿಯಲ್ಲ. ನೀವು ನಿಜವಾಗಿಯೂ ಪ್ರವಾದಿ ಮೊಹಮ್ಮದರ ಅನುಯಾಯಿ ಆಗಿದ್ದರೆ, ಹೆಣ್ಣುಮಕ್ಕಳ ಮೇಲೆ ಕೈ ಎತ್ತುವುದಿಲ್ಲ” ಎಂದು ತಿಳಿಸಿದರು.

ಇದನ್ನೂ ಓದಿ: Baba Ramdev: ನಾನು ಟೀಕಿಸಿದ್ದು ಓವೈಸಿಯನ್ನು, ಒಬಿಸಿಗಳನ್ನಲ್ಲ ಎಂದ ಬಾಬಾ ರಾಮದೇವ್

ಹಳೆಯ ಕತೆ ಹೇಳಿದ ಓವೈಸಿ

ಗಂಡ-ಹೆಂಡತಿ ಸಂಬಂಧದ ಬಗ್ಗೆ ಕತೆಯ ಮೂಲಕವೂ ಕಾರ್ಯಕರ್ತರಲ್ಲಿ ಅರಿವು ಮೂಡಿಸಿದರು. “ಒಮ್ಮೆ ಫಾರೂಕ್‌ ಎಂಬಾತ ಧರ್ಮಗುರುವಿನ ಮನೆಗೆ ಹೋದ. ಧರ್ಮ ಗುರುವಿನ ಮನೆಗೆ ಹೋಗುತ್ತಲೇ ಆತನ ಹೆಂಡತಿಯು ಬೈಯುತ್ತಿದ್ದಳು. ಧರ್ಮ ಗುರುವಿಗೇ ಹೆಂಡತಿ ಬೈಯುತ್ತಿದ್ದಳು. ನಾನೂ ಇದೇ ಸಮಸ್ಯೆ ಎದುರಿಸುತ್ತಿದ್ದೇನೆ ಗುರುಗಳೇ ಎಂದು ಫಾರೂಕ್‌ ಹೇಳಿದ. ಆಗ ಗುರುಗಳು, ಆಕೆ ನನ್ನ ಹೆಂಡತಿ, ನನ್ನ ಮನೆಯನ್ನು ನೋಡಿಕೊಳ್ಳುತ್ತಾಳೆ. ನನ್ನ ಮಕ್ಕಳಿಗೆ ಜನ್ಮ ನೀಡುವ ಜತೆಗೆ ಅವುಗಳನ್ನು ಪೋಷಣೆ ಮಾಡುತ್ತಾಳೆ. ಅವಳು ಕೂಡ ಮನುಷ್ಯಳೇ. ಆಕೆ ಏನಾದರೂ ಸಿಟ್ಟಿನಲ್ಲಿ ಹೇಳಿದರೆ, ನಾನು ಸುಮ್ಮನೆ ಕೇಳಿಸಿಕೊಳ್ಳುತ್ತೇನೆ ಎಂಬುದಾಗಿ ಫಾರೂಕ್‌ಗೆ ಧರ್ಮ ಗುರುಗಳು ಹೇಳಿದರು” ಎಂಬುದಾಗಿ ಅಸಾದುದ್ದೀನ್‌ ಓವೈಸಿ ಸಂಬಂಧದ ಕುರಿತು ಕತೆಯನ್ನು ನಿದರ್ಶನವಾಗಿ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version