ಲಖನೌ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಗೋರಖ್‌ನಾಥ್ ದೇವಾಲಯದಲ್ಲಿ (Gorakhnath Temple Attack) ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಐಐಟಿ ಪದವೀಧರ ಅಹ್ಮದ್ ಮುರ್ತಜ ಅಬ್ಬಾಸಿಗೆ (Ahmed Murtaza Abbasi) ಎನ್‌ಐಎ ವಿಶೇಷ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಗೋರಖ್‌ನಾಥ್ ದೇವಾಲಯಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಖ್ಯ ಅರ್ಚಕರಾಗಿದ್ದು, ಆಗಾಗ ಭೇಟಿ ನೀಡುತ್ತಾರೆ. ಇದೇ ಕಾರಣಕ್ಕೆ ಪ್ರಕರಣವು ದೇಶಾದ್ಯಂತ ಗಮನ ಸೆಳೆದಿತ್ತು.
ವಿವಾದಿತ ಧಾರ್ಮಿಕ ನಾಯಕ ಜಾಕೀರ್ ನಾಯ್ಕ್ ಅನುಯಾಯಿಯಾಗಿರುವ ಅಬ್ಬಾಸಿಯು 2022ರ ಏಪ್ರಿಲ್ 3ರಂದು ಗೋರಖ್‌ನಾಥ್ ದೇಗುಲಕ್ಕೆ ತೆರಳಿ, ಒಳಗೆ ನುಗ್ಗಲು ಯತ್ನಿಸಿದ್ದ. ಇದೇ ವೇಳೆ ಈತನನ್ನು ತಡೆಯಲು ಪಿಎಸಿ (Provincial Armed Constabulary) ಸಿಬ್ಬಂದಿಯು ಮುಂದಾಗಿದ್ದರು. ಆಗ, ಪಿಎಸಿಯ ಇಬ್ಬರು ಸಿಬ್ಬಂದಿಯ ಮೇಲೆ ಅಬ್ಬಾಸಿಯು ಕುಡಗೋಲಿನಿಂದ ಹಲ್ಲೆ ಮಾಡಿದ್ದ.
ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಾರಣ ಅಹ್ಮದ್ ಮುರ್ತಜ ಅಬ್ಬಾಸಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಉತ್ತರ ಪ್ರದೇಶ ಉಗ್ರ ನಿಗ್ರಹ ದಳ (ATS) ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ನಡೆಸಿದ್ದರು.
ಮುಂಬೈ ಐಐಟಿಯಿಂದ ಪದವಿ ಪಡೆದಿರುವ ಅಬ್ಬಾಸಿ ಬಳಿ ಶಂಕಾಸ್ಪದ ವಸ್ತುಗಳು, ಜಿಹಾದ್ ಅಂಶವಿರುವ ವಿಡಿಯೊಗಳುಳ್ಳ ಪೆನ್‌ಡ್ರೈವ್ ಸೇರಿ ಹಲವು ವಸ್ತುಗಳು ಪತ್ತೆಯಾಗಿದ್ದವು. ಈಗ ಎನ್‌ಐಎ ವಿಶೇಷ ನ್ಯಾಯಾಲಯವು 60 ದಿನ ಸತತವಾಗಿ ವಿಚಾರಣೆ ನಡೆಸಿ, ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: Etah Fake Encounter | ನಕಲಿ ಎನ್‌ಕೌಂಟರ್ ಪ್ರಕರಣ, 9 ಪೊಲೀಸರು ದೋಷಿ, ಇವರಲ್ಲಿ ಐವರಿಗೆ ಜೀವಾವಧಿ ಶಿಕ್ಷೆ