ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಜಂಟಿ ಪ್ರವೇಶ ಪರೀಕ್ಷೆ (Advanced) (JEE Results 2023) ಫಲಿತಾಂಶ ಪ್ರಕಟವಾಗಿದ್ದು, ತೆಲಂಗಾಣದ ವಾವಿಲಾಲಾ ಚಿದ್ವಿಲಾಸ ರೆಡ್ಡಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಗುವಾಹಟಿ ಐಐಟಿಯು ಫಲಿತಾಂಶ ಪ್ರಕಟಿಸಿದ್ದು, ಸಾಮಾನ್ಯ ರ‍್ಯಾಂಕ್ ಪಟ್ಟಿಯಲ್ಲಿ (CRL) ವಿ.ಸಿ.ರೆಡ್ಡಿ ಅಗ್ರಸ್ಥಾನಿ ಎನಿಸಿದ್ದಾರೆ. ಇನ್ನು ಮಹಿಳೆಯರ ವಿಭಾಗದಲ್ಲೂ ಹೈದರಾಬಾದ್ ಐಐಟಿ ವಲಯದ ನಯಕಾಂತಿ ನಾಗ ಭವ್ಯಶ್ರೀ ಅವರು ಟಾಪರ್ ಆಗಿದ್ದಾರೆ. ಹಾಗಾಗಿ, ಸಿಆರ್‌ಎಲ್‌ನಲ್ಲಿ ಈ ಬಾರಿ ಐಐಟಿ ಹೈದರಾಬಾದ್ ವಲಯ ಗಣನೀಯ ಸಾಧನೆ ಮಾಡಿದೆ.
ವಿ.ಸಿ. ರೆಡ್ಡಿ ಅವರು 360ಕ್ಕೆ 341 ಅಂಕಗಳನ್ನು ಪಡೆಯುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಟಾಪರ್ ಎನಿಸಿದ್ದಾರೆ. ನಯಕಾಂತಿ ನಾಗ ಭವ್ಯಶ್ರೀಯು 360ಕ್ಕೆ 298 ಅಂಕ ಪಡೆದು ಹೆಣ್ಣುಮಕ್ಕಳ ವಿಭಾಗದಲ್ಲಿ ರ‍್ಯಾಂಕ್ ಗಳಿಸಿದ್ದಾರೆ. ಇಬ್ಬರೂ ಹೈದರಾಬಾದ್ ಐಐಟಿ ವಲಯದವರು ಎನ್ನುವುದು ಗಮನಾರ್ಹ ಎನಿಸಿದೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿಗಳಿಗೆ ಪ್ರವೇಶ ಪಡೆಯಲು ಐಐಟಿ ಜೆಇಇ Advanced ಪರೀಕ್ಷೆ ನಡೆಸಲಾಗುತ್ತಿದೆ. ಇಲ್ಲಿ ರ‍್ಯಾಂಕ್ ಪಡೆದವರು ಐಐಟಿಗಳಿಗೆ ಪ್ರವೇಶ ಪಡೆಯಲಿದ್ದಾರೆ.
ಟಾಪ್ 10 ರ‍್ಯಾಂಕ್ ಹೋಲ್ಡರ್ಸ್
- ವಾವಿಲಾಲಾ ಚಿದ್ವಿಲಾಸ ರೆಡ್ಡಿ (ಐಐಟಿ ಹೈದರಾಬಾದ್ ವಲಯ)
- ರಮೇಶ್ ಸೂರ್ಯ ತೇಜ (ಐಐಟಿ ಹೈದರಾಬಾದ್ ವಲಯ)
- ರಿಷಿ ಕಾಲ್ರಾ (ಐಐಟಿ ರೂರ್ಕಿ ವಲಯ)
- ರಾಘವ್ ಗೋಯಲ್ (ಐಐಟಿ ರೂರ್ಕಿ ವಲಯ)
- ಅಡ್ಡಗಡ ವೆಂಕಟ ಶಿವಂ (ಐಐಟಿ ಹೈದರಾಬಾದ್ ವಲಯ)
- ಪ್ರಭಾವ್ ಖಂಡೇಲ್ವಾಲ್ (ಐಐಟಿ ದೆಹಲಿ ವಲಯ)
- ಬೆಕ್ಕಿನ ಅಭಿನವ್ ಚೌಧರಿ (ಐಐಟಿ ಹೈದರಾಬಾದ್ ವಲಯ)
- ಮಲಯ್ ಕೇದಿಯಾ (ಐಐಟಿ ದೆಹಲಿ ವಲಯ)
- ನಾಗಿರೆಡ್ಡಿ ಬಾಲಾಜಿ ರೆಡ್ಡಿ (ಐಐಟಿ ಹೈದರಾಬಾದ್ ವಲಯ)
- ಯಕ್ಕಂಟಿ ಪಾಣಿ ವೆಂಕಟ, ಮನೀಂಧರ್ ರೆಡ್ಡಿ (ಐಐಟಿ ಹೈದರಾಬಾದ್ ವಲಯ)
ಈ ಬಾರಿಯ ಐಐಟಿ ಜೆಇಇ Advanced ಪರೀಕ್ಷೆಗೆ 1,80,372 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇವರ ಪೈಕಿ 43,773 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಇದನ್ನೂ ಓದಿ: NEET Result 2023: ಕಲ್ಲು ಹೊಡೆಯುತ್ತಿದ್ದ ಕಾಶ್ಮೀರದಲ್ಲಿ ಅಂಕಕ್ಕೆ ಗುರಿ ಇಟ್ಟ 3 ಮುಸ್ಲಿಂ ಸಹೋದರಿಯರು; ನೀಟ್ ಪಾಸ್