ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ಸಿಲುಕಿ, ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮೊದಲ ಸುದ್ದಿಗೋಷ್ಠಿ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. “ನನ್ನನ್ನು ಬಂಧಿಸಿ, ಜೈಲಿಗೆ ಕಳುಹಿಸಿ. ಆದರೆ, ನಾನು ದೇಶದ ಜನರ ಪರವಾಗಿ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಅದಾನಿ ಪ್ರಕರಣದ ಕುರಿತು ಮಾತನಾಡುವುದನ್ನು ಬಿಡುವುದಿಲ್ಲ” ಎಂದು ಹೇಳಿದ್ದಾರೆ. ಹಾಗೆಯೇ, ಬಿಜೆಪಿ ಆಗ್ರಹದಂತೆ ಕ್ಷಮೆಯಾಚಿಸಲು ನಾನು ಸಾವರ್ಕರ್ ಅಲ್ಲ, ಗಾಂಧಿ ಎಂದು ಹೇಳಿದರು.
ನಾನು ಗಾಂಧಿ, ಸಾವರ್ಕರ್ ಅಲ್ಲ
“ನನ್ನ ರಾಹುಲ್ ಗಾಂಧಿ ಇದ್ದೇನೆಯೇ ಹೊರತು, ಸಾವರ್ಕರ್ ಅಲ್ಲ. ಗಾಂಧಿಗಳು ಯಾವುತ್ತಿಗೂ ಕ್ಷಮೆಯಾಚಿಸುವುದಿಲ್ಲ. ಹಾಗಾಗಿ, ಗೌತಮ್ ಅದಾನಿ ಪ್ರಕರಣ ಸೇರಿ ಯಾವುದೇ ವಿಷಯಗಳ ಕುರಿತು ನಾನು ಮಾತನಾಡಿರುವ ಕುರಿತು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು. ಲಂಡನ್‌ನಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದ ಕುರಿತು ಕ್ಷಮೆಯಾಚಿಸಬೇಕು ಎಂಬುದಾಗಿ ಬಿಜೆಪಿ ಆಗ್ರಹಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ರಾಹುಲ್ ಹೀಗೆ ಉತ್ತರಿಸಿದರು.
ರಾಹುಲ್ ಗಾಂಧಿ ಸುದ್ದಿಗೋಷ್ಠಿ
“ದೇಶದ ಪ್ರಧಾನಿಯು ಅದಾನಿ ಕುರಿತು ನಾನು ಮಾಡಿದ ಭಾಷಣದಿಂದ ಹೆದರಿದ್ದಾರೆ. ಅವರ ಕಣ್ಣುಗಳಲ್ಲಿ ನಾನು ಭಯವನ್ನು ನೋಡಿದ್ದೇನೆ. ಹಾಗಾಗಿ, ಮೊದಲು ನನ್ನ ವಿರುದ್ಧ ಆರೋಪ ಮಾಡಲಾಯಿತು. ವಿಷಯಾಂತರ ಮಾಡಲು ಯತ್ನಿಸಲಾಯಿತು. ಈಗ ಕೊನೆಗೆ ನನ್ನನ್ನು ಅನರ್ಹಗೊಳಿಸಲಾಗಿದೆ. ಆದರೆ, ನಾನು ದೇಶದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿ ಧ್ವನಿ ಎತ್ತುತ್ತಿದ್ದೇನೆ. ನನ್ನ ವಿರುದ್ಧ ಯಾವ ಗುರಾಣಿ ಬಳಸಿದರೂ ನಾನು ಹಿಂಜರಿಯುವುದಿಲ್ಲ, ಹೆದರುವುದಿಲ್ಲ. ಸಂಸತ್ತಿನಿಂದ ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ” ಎಂದರು.
ಪ್ರಜಾಪ್ರಭುತ್ವದ ಮೇಲೆ ದಾಳಿ
ಇದನ್ನೂ ಓದಿ: Rahul Gandhi: ‘ಮೋದಿ ಉಪನಾಮ’ ಒಂದೇ ಅಲ್ಲ, ಗೌರಿ ಲಂಕೇಶ್ ಕೇಸ್ ಸೇರಿ ರಾಹುಲ್ ವಿರುದ್ಧ ದಾಖಲಾದ ಪ್ರಕರಣ ಯಾವವು?
“ದೇಶದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಪ್ರತಿದಿನವೂ ದಾಳಿಯ ನಿದರ್ಶನಗಳನ್ನು ನಾವು ನೋಡುತ್ತಿದ್ದೇವೆ. ಅಷ್ಟಕ್ಕೂ, ನಾನೇನು ಮಾಡಿದೆ? ಪ್ರಧಾನಿ ಹಾಗೂ ಅದಾನಿ ಜತೆಗಿನ ಸಂಬಂಧದ ಬಗ್ಗೆ ಮಾತನಾಡಿದೆ. ಅಕ್ರಮದ ಬಗ್ಗೆ ಪ್ರಸ್ತಾಪಿಸಿದೆ. ಅಷ್ಟಕ್ಕೇ, ನನ್ನ ಮೇಲೆ ದಾಳಿ ನಡೆಯಿತು. ಲೋಕಸಭೆಯಲ್ಲಿ ನಾನು ಭಾಷಣ ಮಾಡಲು ಅಡ್ಡಿಗೊಳಿಸಲಾಯಿತು. ನನ್ನ ಭಾಷಣವನ್ನು ತಿರುಚಲಾಯಿತು. ಕೆಲವು ಸಚಿವರು ಸುಳ್ಳು ಹೇಳಿದರು” ಎಂಬುದಾಗಿ ದೂರಿದರು.