Site icon Vistara News

‌’ಕಾಶ್ಮೀರ ಸೇಫ್’ ಎಂದು ಬ್ರಿಟನ್‌ನಲ್ಲಿ ಗುಡುಗಿದ್ದ ಪತ್ರಕರ್ತೆಗೆ ದೆಹಲಿಯಲ್ಲಿ ಹೀಗಾ ಮಾಡೋದು!

Yana Mir

'I’m not Malala’ fame Kashmiri activist vs Delhi Customs in videos

ನವದೆಹಲಿ: “ಜಮ್ಮು-ಕಾಶ್ಮೀರ ಸುರಕ್ಷಿತವಾಗಿದೆ. ನಾವು ಆರಾಮವಾಗಿ ಇದ್ದೇವೆ” ಎಂದು ಬ್ರಿಟನ್‌ ಸಂಸತ್ತಿನಲ್ಲಿ ಗುಡುಗಿದ್ದ ಜಮ್ಮು-ಕಾಶ್ಮೀರ ಪತ್ರಕರ್ತೆ ಯಾನಾ ಮಿರ್‌ (Yana Mir) ಅವರಿಗೆ ದೆಹಲಿ ಏರ್‌ಪೋರ್ಟ್‌ನಲ್ಲಿ (Delhi Airport) ಮುಜುಗರದ ಸಂಗತಿ ಎದುರಾಗಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಾನಾ ಮಿರ್‌ ಅವರನ್ನು ಕಸ್ಟಮ್ಸ್‌ ಅಧಿಕಾರಿಗಳು ಕೂಲಂಕಷವಾಗಿ ತಪಾಸಣೆ ಮಾಡಿದ್ದು, ಇದಕ್ಕೆ ಯಾನಾ ಮಿರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅತ್ತ, ಕಸ್ಟಮ್ಸ್‌ ಅಧಿಕಾರಿಗಳು (Customs Officials), “ಯಾನಾ ಮಿರ್‌ ಅವರು ತಪಾಸಣೆಗೆ ಸಹಕರಿಸಿಲ್ಲ” ಎಂದು ದೂರಿದ್ದಾರೆ.

ತಪಾಸಣೆ ಕುರಿತು ಯಾನಾ ಮಿರ್‌ ಅವರು ವಿಡಿಯೊ ಹಂಚಿಕೊಂಡಿದ್ದಾರೆ. “ಭಾರತದಲ್ಲಿ ನಾನು ಸ್ವತಂತ್ರಳಾಗಿದ್ದೇನೆ, ಸುರಕ್ಷಿತಳಾಗಿದ್ದೇನೆ ಎಂದು ಹೇಳಿದೆ. ಆದರೆ, ದೆಹಲಿಯಲ್ಲಿ ನನಗೆ ಎಂತಹ ಸ್ವಾಗತ ಸಿಕ್ಕಿದೆ ನೋಡಿ. “ನಿಮ್ಮ ಬ್ಯಾಗ್‌ ಸ್ಕ್ಯಾನ್‌ ಮಾಡಬೇಕು. ನಿಮ್‌ ಬ್ಯಾಗ್‌ ಓಪನ್‌ ಮಾಡಿ, ನೀವು ಲೂಯಿಸ್‌ ವುಯಿಟ್ಟನ್‌ ಶಾಪಿಂಗ್‌ ಬ್ಯಾಗ್‌ ಏಕೆ ತಂದಿದ್ದೀರಿ? ಅವುಗಳಿಗೆ ಹಣ ಕೊಟ್ಟಿದ್ದೀರಾ? ಬಿಲ್‌ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ನಾನೊಬ್ಬ ದಿಟ್ಟ ಪತ್ರಕರ್ತೆ ಎಂದು ಲಂಡನ್‌ ಜನ ಭಾವಿಸಿದ್ದರೆ, ದೆಹಲಿ ಕಸ್ಟಮ್ಸ್‌ ಅಧಿಕಾರಿಗಳೋ ನನ್ನನ್ನು ಬ್ರ್ಯಾಂಡ್‌ ಸ್ಮಗ್ಲರ್‌ ಎಂಬುದಾಗಿ ಭಾವಿಸಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಂಡನ್‌ನಲ್ಲಿ ಯಾನಾ ಹೇಳಿದ್ದೇನು?

ಜಮ್ಮು-ಕಾಶ್ಮೀರದ ವಿಷಯದಲ್ಲಿ ಆಗಾಗ ಮೂಗು ತೂರಿಸುವ ನೊಬೆಲ್‌ ಶಾಂತಿ ಪುರಸ್ಕೃತ ಹೋರಾಟಗಾರ್ತಿ ಮಲಾಲಾ ಯೂಸುಫ್‌ಜಾಯ್‌ ಅವರಿಗೆ ಜಮ್ಮು-ಕಾಶ್ಮೀರದ ಯುವತಿ ಯಾನಾ ಮಿರ್‌ ಅವರು ಕೆಲ ದಿನಗಳ ಹಿಂದಷ್ಟೇ ಬ್ರಿಟನ್‌ ಸಂಸತ್ತಲ್ಲಿ ತಿರುಗೇಟು ನೀಡಿದ್ದರು. “ಜಮ್ಮು-ಕಾಶ್ಮೀರ ಸುರಕ್ಷಿತವಾಗಿದೆ. ನಾನು ಮಲಾಲಾ ಯೂಸುಫ್‌ಜಾಯ್‌ ಅವರಂತೆ ನನ್ನ ದೇಶವನ್ನು ತೊರೆಯುವುದಿಲ್ಲ” ಎಂದು ಹೇಳುವ ಮೂಲಕ ಜಮ್ಮು-ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ಹಾಗೂ ಮಲಾಲಾ ಯೂಸುಫ್‌ಜಾಯ್‌ ಅವರ ಕುತಂತ್ರವನ್ನು ಬಯಲಿಗೆಳೆದಿದ್ದರು.

ಬ್ರಿಟನ್‌ ಸಂಸತ್‌ನಲ್ಲಿ ಆಯೋಜಿಸಿದ್ದ ಸಂಕಲ್ಪ ದಿವಸ ಕಾರ್ಯಕ್ರಮದಲ್ಲಿ ಯಾನಾ ಮಿರ್‌ ಮಾತನಾಡಿದ್ದರು. ಜಮ್ಮು-ಕಾಶ್ಮೀರದಲ್ಲಿ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿಯಾಗಿರುವ ಯಾನಾ ಮಿರ್‌ ಅವರಿಗೆ ಕಾರ್ಯಕ್ರಮದಲ್ಲಿ ಡೈವರ್ಸಿಟಿ ಅಂಬಾಸಿಡರ್‌ ಅವಾರ್ಡ್‌ ನೀಡಿ ಗೌರವಿಸಲಾಗಿತ್ತು. ಇದಾದ ಬಳಿಕ ಮಾತನಾಡಿದ್ದ ಅವರು, “ನಾನು ಮಲಾಲಾ ಯೂಸುಫ್‌ಜಾಯ್‌ ಅಲ್ಲ. ಏಕೆಂದರೆ, ನನ್ನ ಭಾರತ ದೇಶವು ಸುರಕ್ಷಿತವಾಗಿದೆ. ನನ್ನ ಜಮ್ಮು-ಕಾಶ್ಮೀರವು ಸುಭ್ರವಾಗಿದೆ. ನಾನು ಎಂದಿಗೂ ಭಾರತವನ್ನು ಬಿಟ್ಟು ಬರುವುದಿಲ್ಲ ಹಾಗೂ ಈ ದೇಶದ ಆಶ್ರಯ ಬೇಡುವುದಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಶ್ಮೀರದ ಬಗ್ಗೆ ಜಗತ್ತಿನ ಕಣ್ತೆರೆಸಿದ ಯಾನಾ ಮೀರ್‌ಗೆ ಒಂದು ಚಪ್ಪಾಳೆ

ಜಮ್ಮು-ಕಾಶ್ಮೀರದ ಬಗ್ಗೆ ಯಾನಾ ಮಿರ್‌ ಮಾತನಾಡಿದ್ದರು. “ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಅಲ್ಲಿ ಶಾಂತಿ ನೆಲೆಸಿದೆ. ಜಮ್ಮು-ಕಾಶ್ಮೀರವು ಸುರಕ್ಷಿತವಾಗಿದೆ. ಮಾನವ ಹಕ್ಕುಗಳ ರಕ್ಷಣೆಯಾಗುತ್ತಿದೆ. ಹಾಗಾಗಿ, ಪಾಕಿಸ್ತಾನ ಸೇರಿ ಯಾವುದೇ ರಾಷ್ಟ್ರಗಳು ಪಾಕಿಸ್ತಾನದ ವಿಷಯದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಸಂಕಲ್ಪ ದಿವಸ ಆಚರಣೆ ಮಾಡಿದ ಬಳಿಕವಾದರೂ, ಜಮ್ಮು-ಕಾಶ್ಮೀರದ ಕುರಿತು ಪಾಕಿಸ್ತಾನ ಸೇರಿ ಯಾವುದೇ ದೇಶವು ಸುಳ್ಳು ಮಾಹಿತಿ ಹರಡುವುದಿಲ್ಲ ಎಂಬ ವಿಶ್ವಾಸವಿದೆ. ಯಾರೂ ಜಮ್ಮು-ಕಾಶ್ಮೀರದ ಜನರನ್ನು ಪ್ರತ್ಯೇಕಿಸಿ ನೋಡುವುದಿಲ್ಲ ಎಂಬ ನಂಬಿಕೆ ಇದೆ” ಎಂದು ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version