ನವದೆಹಲಿ: ಪ್ರಸಕ್ತ ವರ್ಷ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಯಾಗಿರುವ ಸ್ಕೈಮೆಟ್ ಎರಡು ದಿನಗಳ ಹಿಂದೆ ವರದಿ ನೀಡಿತ್ತು. ಇದೀಗ ಭಾರತೀಯ ಹವಾಮಾನ ಇಲಾಖೆ(IMD) ಕೂಡ ಪ್ರಸಕ್ತ ವರ್ಷದ ಮಳೆಗಾಲದ ಬಗ್ಗೆ ಮುನ್ಸೂಚನೆ ನೀಡಿದೆ. ಈ ಬಾರಿಯ ಮಳೆಗಾಲದಲ್ಲಿ ವಾಡಿಕೆ ಮಳೆಯಾಗಲಿದೆ. ಅಂದರೆ, ಅತಿ ಹೆಚ್ಚು ಅಥವಾ ಅತಿ ಕಡಿಮೆ ಮಳೆ ಆಗುವುದಿಲ್ಲ. ದೇಶಾದ್ಯಂತ ಹದವಾಗಿ ಸಾಮಾನ್ಯ ಪ್ರಮಾಣದಲ್ಲಿ ಮಳೆಯಾಗಲಿದೆ (Monsoon 2023).
“ದೇಶದಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಕೊಂಚ ಜಾಸ್ತಿ ಮಳೆಯಾಗುವ ಸಾಧ್ಯತೆ ಶೇ.67ರಷ್ಟಿದೆ. ಜೂನ್‌ನಿಂದ ಸೆಪ್ಟೆಂಬರ್ ಅವಧಿಯವರೆಗೆ ದೀರ್ಘಾವದಿ ಸರಾಸರಿಯ ಶೇ.96ರಷ್ಟು ಮಳೆಯಾಗಲಿದೆ” ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್ ಹೇಳಿದ್ದಾರೆ. ಮಳೆಯನ್ನೇ ನಂಬಿಕೊಂಡು ಕೃಷಿ ನಡೆಸುತ್ತಿರುವ ರೈತರಿಗೆ ಇದು ಶುಭ ಸುದ್ದಿಯಾಗಿದೆ.
ಇದಕ್ಕೂ ಮೊದಲು ಖಾಸಗಿ ಹವಾಮಾನ ಏಜೆನ್ಸಿಯಾದ ಸ್ಕೈಮೆಟ್ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ವರದಿ ಮಾಡಿತ್ತು. ಎಲ್ ನಿನೋದಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಅದು ವರದಿಯಲ್ಲಿ ಹೇಳಿತ್ತು.
ಆದರೆ ಇದೀಗ ಭಾರತೀಯ ಹವಾಮಾನ ಇಲಾಖೆಯು ಆ ವರದಿಯನ್ನು ತಳ್ಳಿ ಹಾಕಿದೆ. ಎಲ್ ನಿನೋ ಹಾಗೂ ಭಾರತದ ಮಳೆಯ ನಡುವೆ ನೇರವಾದ ಸಂಬಂಧವಿಲ್ಲ. ಹಾಗಾಗಿ ದೇಶದಲ್ಲಿ ಮಳೆಯ ಪ್ರಮಾಣಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಎಲ್ ನಿನೊ ದಕ್ಷಿಣ ಅಮೆರಿಕಾದ ಬಳಿ ಪೆಸಿಫಿಕ್ ಸಾಗರದಲ್ಲಿ ನೀರಿನ ತಾಪಮಾನವನ್ನು ಸೂಚಿಸುತ್ತದೆ. ಇದು ಭಾರತದಲ್ಲಿ ಮಾನ್ಸೂನ್ ಮಾರುತಗಳು ದುರ್ಬಲಗೊಳ್ಳುವುದರೊಂದಿಗೆ ಸಂಬಂಧಿಸಿದೆ.
ಇದನ್ನೂ ಓದಿ: Monsoon 2023: ಈ ವರ್ಷ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ! ಸ್ಕೈಮೆಟ್ ಹವಾಮಾನ ವರದಿಯಲ್ಲಿ ಏನಿದೆ?
ಈ ತಿಂಗಳ ಆರಂಭದಲ್ಲಿ, ಹವಾಮಾನ ಇಲಾಖೆಯು ವಾಯುವ್ಯ ಮತ್ತು ಪರ್ಯಾಯ ದ್ವೀಪದ ಭಾಗಗಳನ್ನು ಹೊರತುಪಡಿಸಿ ದೇಶದ ಹಲವಾರು ಭಾಗಗಳಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ವರದಿಯಾಗುವ ನಿರೀಕ್ಷೆಯಿದೆ ಎಂದು ಹೇಳಿತ್ತು.
ಸ್ಕೈಮೆಟ್ ವರದಿ ಹೇಳಿದ್ದೇನು?
ಪ್ರಸಕ್ತ ವರ್ಷದಲ್ಲಿ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ (Monsoon 2023) ಎಂದು ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ (Skymet) ಸೋಮವಾರ ತಿಳಿಸಿದೆ. ಎಲ್ ನಿನೊ ಜೊತೆಗೆ, ಮಾನ್ಸೂನ್ ಮೇಲೆ ಪ್ರಭಾವ ಬೀರುವ ಇತರ ಅಂಶಗಳು ಮಳೆ ಕಡಿಮೆಯಾಗಲು ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶೇಷ ಎಂದರೆ, ಇದೇ ಕಂಪನಿಯ 2023ರ ಜನವರಿ 4ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದಲ್ಲಿ ಈ ವರ್ಷ ಮಳೆ ಸಾಮಾನ್ಯವಾಗಿರಲಿದೆ ಎಂದು ಮುನ್ಸೂಚನೆ ನೀಡಿತ್ತು. ಈಗ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
ಸ್ಕೈಮೆಟ್ ಮ್ಯಾನೇಜಿಂಗ್ ಡೈರೆಕ್ಟರ್ ಜತಿನ್ ಸಿಂಗ್ ಅವರು, ಟ್ರಿಪಲ್-ಡಿಪ್-ಲಾ ನಿನಾ ಪರಿಣಾಮ ನೈಋತ್ಯ ಮಾನ್ಸೂನ್ ಕಳೆದ 4 ಸತತ ಋತುಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಈಗ, ಲಾ ನಿನಾ ಕೊನೆಗೊಂಡಿದೆ. ಪ್ರಮುಖ ಸಾಗರ ಮತ್ತು ವಾಯುಮಂಡಲದ ಇಎನ್‌ಎಸ್‌ಒ ತಟಸ್ಥ ಸ್ಥಿತಿಗಳೊಂದಿಗೆ ಸ್ಥಿರವಾಗಿವೆ. ಎಲ್ ನಿನೋ ಸಂಭವನೀಯತೆ ಹೆಚ್ಚುತ್ತಿದೆ ಮತ್ತು ಮಳೆಗಾಲದ ಸಮಯದಲ್ಲಿ ಪ್ರಬಲ ವರ್ಗವಾಗಲು ಅದರ ಸಂಭವನೀಯತೆಯು ದೊಡ್ಡದಾಗಿ ಬೆಳೆಯುತ್ತಿದೆ. ಹಾಗಾಗಿ ಎಲ್ ನಿನೋ ವಾಪಸಾತಿಯು ದುರ್ಬಲ ಮಳೆಗಾಲವನ್ನು ಊಹಿಸಬಹುದಾಗಿದೆ ಎಂದು ಹೇಳಿದ್ದಾರೆ.