ಇಂದು ವಿಶ್ವ ಪುರುಷರ ದಿನ. ಪ್ರತಿವರ್ಷ ನವೆಂಬರ್ 19ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತಿದೆ. ಯಾಕೆ ಈ ಆಚರಣೆ? ಯಾವಾಗಿನಿಂದ ಪ್ರಾರಂಭವಾಯಿತು? ಯಾರು ಶುರು ಮಾಡಿದರು? ಏನಿದರ ಮಹತ್ವ?-ಇಂದು ಪುರುಷರಿಗೆಲ್ಲ ವಿಶ್ವ ಪುರುಷ ದಿನದ ಶುಭಾಶಯ ಕೋರುವ ಜತೆಗೆ, ಈ ದಿನದ ಬಗ್ಗೆ ಸಂಪೂರ್ಣ ವಿವರವನ್ನೂ ತಿಳಿದುಕೊಳ್ಳುವುದು ಒಳಿತಲ್ಲವೇ?
ಪ್ರಾರಂಭಿಸಿದ್ದು ಯಾರು?
ಮೊಟ್ಟಮೊದಲು ಪುರುಷರ ದಿನಾಚರಣೆ ಪ್ರಾರಂಭವಾಗಿದ್ದು 1999ರಲ್ಲಿ. ವೆಸ್ಟ್ಇಂಡೀಸ್ನ ಟ್ರಿನಿಡಾಡ್ ಆ್ಯಂಡ್ ಟೊಬಾಗೋ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದ ಡಾ. ಜೆರೋಮ್ ಟೀಲಕ್ಸಿಂಗ್ ಅವರು, ತಮ್ಮ ತಂದೆ ಹುಟ್ಟುಹಬ್ಬದ ದಿನವಾದ ನವೆಂಬರ್ 19ರಂದು ಮೊದಲು ಪುರುಷರ ದಿನವನ್ನು ಆಚರಿಸಿದರು. ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಪುರುಷರ ಸಾಧನೆಯನ್ನು ಗುರುತಿಸಿ, ಅದನ್ನು ಆಚರಣೆ ಮಾಡುವ ಜತೆ, ಅವರ ಆರೋಗ್ಯದ ಬಗ್ಗೆಯೂ ಅರಿವು ಮೂಡಿಸುವ ಕೆಲಸವಾಗಬೇಕು ಎಂಬ ಉದ್ದೇಶವಿಟ್ಟುಕೊಂಡೇ ಜೆರೋಮ್ ಈ ದಿನವನ್ನು ಪ್ರಾರಂಭಿಸಿದರು.
ಒಬ್ಬ ಮಗನಾಗಿ, ಪತಿಯಾಗಿ, ತಂದೆಯಾಗಿ, ಸಹೋದರನಾಗಿ, ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ‘ಪುರುಷ’ನಾಗಿ ಆ ಪುರುಷನ ಹೊಣೆಗಾರಿಕೆ ವೈಯಕ್ತಿಕ ಬದುಕಲ್ಲೂ, ಸಾಮಾಜಿಕ ಜೀವನದಲ್ಲೂ ತುಂಬ ದೊಡ್ಡದು ಮತ್ತು ಮಹತ್ವದ್ದು. ನಮ್ಮದಂತೂ ಮೊದಲಿನಿಂದಲೂ ಪುರುಷಪ್ರಭುತ್ವ ಸಮಾಜ. ಹೀಗಿರುವಾಗ ಸಹಜವಾಗಿಯೇ ಅವರ ಜವಾಬ್ದಾರಿ ದೊಡ್ಡದಾಗಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡರೂ ದೊಡ್ಡದೊಡ್ಡ ಹುದ್ದೆಗಳಲ್ಲಿ ಸಿಂಹಪಾಲು ಪುರುಷರದ್ದು. ಅವರ ನಿರ್ಧಾರ, ಯೋಚನಾ ಲಹರಿಗಳೇ ದೇಶವನ್ನು ಆಳುತ್ತಿವೆ. ವೈಯಕ್ತಿಕ ದುಡಿಮೆಯ ಒಟ್ಟೊಟ್ಟಿಗೇ ಸಮಾಜ, ದೇಶ ಉದ್ಧಾರಕ್ಕೆ ಅವಿರತ ಶ್ರಮಿಸುತ್ತಿರುವ ಪುರುಷರು ನಮ್ಮ-ನಿಮ್ಮೆಲ್ಲರ ಮಧ್ಯೆ ಇದ್ದಾರೆ.
ಇಷ್ಟೆಲ್ಲ ಮಹತ್ವದ ಪಾತ್ರ ವಹಿಸುವ ಪುರುಷರಲ್ಲಿ ಸಕಾರಾತ್ಮಕ ಚಿಂತನೆಗಳು ಅತ್ಯಗತ್ಯ. ಈ ಸಕಾರಾತ್ಮಕತೆಯಿಂದಲೇ ಅವರು ಸಮಾಜದಲ್ಲಿ ಬದಲಾವಣೆ ತರಬೇಕು, ಕುಟುಂಬವನ್ನೂ ಮುನ್ನಡೆಸಬೇಕು ಮತ್ತು ಮಾದರಿಯಾಗುವ ಕೆಲಸ ಮಾಡಬೇಕು ಎಂಬ ಬಗ್ಗೆ ಅವರಿಗೆ ಪ್ರೇರೇಪಿಸುವ ಸಲುವಾಗಿ ಪುರುಷರ ದಿನಾಚರಣೆ ಅಸ್ತಿತ್ವಕ್ಕೆ ಬಂದಿದೆ. ಅಷ್ಟೇ ಅಲ್ಲ, ಸದಾ ದುಡಿಮೆ-ಒತ್ತಡದಲ್ಲಿರುವ ಪುರುಷರ ಆರೋಗ್ಯವೂ ತುಂಬ ಮುಖ್ಯ. ಅವರಲ್ಲಿಯೂ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ‘ದುಡಿಮೆ ನಡುವೆ ಆರೋಗ್ಯ ನಿರ್ಲಕ್ಷಿಸಬೇಡಿ, ಸದಾ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರಿ’ ಎಂದು ಹೇಳಲೂ ಈ ದಿನವನ್ನು ಮೀಸಲಿಡಲಾಗಿದೆ.
ಆದರೆ ಈ ದಿನಾಚರಣೆಯನ್ನು ಭಾರತದಲ್ಲಿ ಜನಪ್ರತಿಯ, ಖ್ಯಾತಿಗೊಳಿಸಿದ್ದು ಭಾರತದ ವಕೀಲೆ ಉಮಾ ಚಲ್ಲಾ ಎಂಬುವರು. ಎರಡು ಮಕ್ಕಳ ತಾಯಿಯಾಗಿರುವ ಅವರು ಪುರುಷರ ದಿನಾಚರಣೆಗೆ ವಿಶೇಷ ಪ್ರಾಮುಖ್ಯತೆ ಕೊಟ್ಟರು. ಪುರುಷ ದಿನವನ್ನು ಭಾರತದಲ್ಲಿ ಆಚರಿಸುವಂತೆ ಮಾಡಲೆಂದೇ ವಿವಿಧ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿದರು. ಆ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಉಮಾ ಅವರ ನಿರಂತರ ಪ್ರಯತ್ನದಿಂದ 2007ರಿಂದ ಭಾರತದಲ್ಲೂ ಪ್ರತಿವರ್ಷ ನವೆಂಬರ್ 19ರಂದು ವಿಶ್ವ ಪುರುಷರ ದಿನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಪುರುಷರ ಮೇಲಿನ ದೌರ್ಜನ್ಯ ತಡೆಯಬೇಕು ಎಂಬ ಆಶಯವನ್ನೂ ಉಮಾ ಅತ್ಯಂತ ಗಟ್ಟಿಯಾಗಿ ಹೇಳುತ್ತ ಬಂದಿದ್ದಾರೆ.
ಈದಿನ ವಿಶ್ ಮಾಡಿ
ವಿಶ್ವ ಪುರುಷರ ದಿನವಾದ ಇಂದು ಅವರನ್ನು ತುಸು ಖುಷಿಪಡಿಸಿ. ನಿಮ್ಮ ತಂದೆ, ಮಗ, ಪತಿ, ಸಹೋದರ..ಸಹೋದ್ಯೋಗಿಗಳು ಹೀಗೆ..ಸುತ್ತಲೂ ಇರುವ ಪುರುಷರಿಗೆ ವಿಶ್ ಮಾಡಿ. ಆರೋಗ್ಯದ ಬಗ್ಗೆ ಅರಿವು ಇರಲಿ ಎಂಬ ಕಾಳಜಿಪೂರ್ವಕ ಕಿವಿಮಾತು ಹೇಳಿ. ಅವರ ಸಾಧನೆಯನ್ನು ಶ್ಲಾಘಿಸಿ. ಇನ್ನೂ ವಿಶೇಷ ಮಾಡಬೇಕು ಎಂದರೆ, ಕೇಕ್ ಕಟ್ ಮಾಡಿಸಿ, ಸಿಹಿ ತಿನ್ನಿಸಿ. ಮನೆಯಲ್ಲಿ ಒಂದೊಳ್ಳೆ ಅಡುಗೆ ಮಾಡಿ ಪ್ರೀತಿಯಿಂದ ಊಟ ಬಡಿಸಿ, ಗಿಫ್ಟ್ ಕೊಡಿ.
ಇದನ್ನೂ ಓದಿ: ನನ್ನ ಪತಿ ರಾತ್ರಿ 9ಗಂಟೆವರೆಗೂ ಸ್ನೇಹಿತರೊಂದಿಗೇ ಇರಲಿ, ನಾನು ತೊಂದರೆ ಕೊಡುವುದಿಲ್ಲ; ಮದುವೆ ದಿನ ಒಪ್ಪಂದಕ್ಕೆ ಸಹಿ ಹಾಕಿದ ವಧು