ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಬಿಜೆಪಿಯು ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, 72 ಅಭ್ಯರ್ಥಿಗಳಿಗೆ ಟಿಕೆಟ್ (BJP Candidates List) ಘೋಷಣೆ ಮಾಡಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿ ಕರ್ನಾಟಕದಲ್ಲಿಯೇ 8 ಹಾಲಿ ಸಂಸದರಿಗೆ ಬಿಜೆಪಿ ಗೇಟ್‌ಪಾಸ್ ನೀಡಿದೆ. ಅಷ್ಟೇ ಅಲ್ಲ, ಬಿಜೆಪಿಯು ಇದುವರೆಗೆ 267 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, 63 ಹಾಲಿ ಸಂಸದರಿಗೆ (Sitting MPs) ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ.
ಹೌದು, ಬಿಜೆಪಿ ಇದುವರೆಗೆ ಘೋಷಿಸಿದ 267 ಅಭ್ಯರ್ಥಿಗಳಲ್ಲಿ ಶೇ.21ರಷ್ಟು ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಇನ್ನೂ ಮುಂದಿನ ದಿನಗಳಲ್ಲಿ ಹಾಲಿ ಸಂಸದರಿಗೆ ಕೊಕ್ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಬಿಜೆಪಿಯು ಮೊದಲು ಘೋಷಿಸಿದ 195 ಅಭ್ಯರ್ಥಿಗಳಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿ 33 ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಇನ್ನು ಎರಡನೇ ಪಟ್ಟಿಯಲ್ಲಿ ಕೇವಲ 72 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೂ 30 ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ ಎಂಬುದು ಗಮನಾರ್ಹವಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಹಾಲಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂದು ತಿಳಿದುಬಂದಿದೆ.
ಯಾವ ರಾಜ್ಯದಲ್ಲಿ ಎಷ್ಟು ಸಂಸದರಿಗೆ ಕೊಕ್?
ಬಿಜೆಪಿ ಇದುವರೆಗೆ ಘೋಷಿಸಿದ 267 ಅಭ್ಯರ್ಥಿಗಳಲ್ಲಿ ದೆಹಲಿಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ. ಇನ್ನು ಗುಜರಾತ್‌ನಲ್ಲಿ 5, ಮಹಾರಾಷ್ಟ್ರದಲ್ಲಿ 8, ಕರ್ನಾಟಕದಲ್ಲಿ 8 ಸಂಸದರು ಸೇರಿ ಒಟ್ಟು 63 ಹಾಲಿ ಸಂಸದರಿಗೆ ಬಿಜೆಪಿಯು ಟಿಕೆಟ್ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಅಧಿಕ ಸ್ಥಾನಗಳು ಹಾಗೂ ಬಿಜೆಪಿಯು 370ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಗುರಿ ನೀಡಿದ್ದಾರೆ. ಹಾಗಾಗಿ, ಅಳೆದು-ತೂಗಿ ಟಿಕೆಟ್ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ 8 ಹಾಲಿ ಸಂಸದರಿಗೆ ಟಿಕೆಟ್ ಇಲ್ಲ
ಡಿ.ವಿ. ಸದಾನಂದಗೌಡ
ನಳಿನ್ ಕುಮಾರ್ ಕಟೀಲ್
ಪ್ರತಾಪ್ ಸಿಂಹ
ಶಿವಕುಮಾರ್ ಉದಾಸಿ
ದೇವೇಂದ್ರಪ್ಪ
ಜಿ.ಎಸ್. ಬಸವರಾಜು
ಜಿ.ಎಂ. ಸಿದ್ದೇಶ್ವರ್
ಶ್ರೀನಿವಾಸ್ ಪ್ರಸಾದ್
ಬೆಂಗಳೂರು ಉತ್ತರದಲ್ಲಿ ಡಿ.ವಿ. ಸದಾನಂದ ಅವರ ಬದಲಿಗೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಬದಲು ಬ್ರಿಗೇಡಿಯರ್ ಬ್ರಿಜೇಶ್ ಚೌಟ ಆಯ್ಕೆಯಾಗಿದ್ದಾರೆ. ಮೈಸೂರು-ಕೊಡಗಿನಲ್ಲಿ ಪ್ರತಾಪ್‌ಸಿಂಹ ಅವರ ಬದಲು ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಹಾವೇರಿಯಲ್ಲಿ ಶಿವಕುಮಾರ್ ಉದಾಸಿ ಅವರ ಬದಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: Lok sabha Election 2024 : ನಾನು ಕಾಂತೇಶ್‌ಗೇ ಟಿಕೆಟ್ ಕೊಡಿ ಅಂದಿದ್ದೆ, ಗೆಲ್ತೀನಿ ಅಂತ ನಂಗೇ ಕೊಟ್ರು ಎಂದ ಬೊಮ್ಮಾಯಿ
ಬಳ್ಳಾರಿ ಕ್ಷೇತ್ರದಲ್ಲಿ ಹಾಲಿ ಸಂಸದ ದೇವೇಂದ್ರಪ್ಪ ಅವರ ಬದಲು ಶ್ರೀರಾಮುಲು ಟಿಕೆಟ್ ಪಡೆದಿದ್ದಾರೆ.
ತುಮಕೂರಿನಲ್ಲಿ ಹಾಲಿ ಸಂಸದರಾದ ಜಿ.ಎಸ್. ಬಸವರಾಜ ಅವರ ಬದಲಿಗೆ ವಿ ಸೋಮಣ್ಣ ಅವರಿಗೆ ಟಿಕೆಟ್ ಸಿಕ್ಕಿದೆ.
ದಾವಣಗೆರೆ ಕ್ಷೇತ್ರದಲ್ಲಿ ಜಿ.ಎಂ. ಸಿದ್ದೇಶ್ವರ್ ಅವರಿಗೆ ಟಿಕೆಟ್ ಮಿಸ್ ಆಗಿದ್ದರೂ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ಸಿಕ್ಕಿದೆ. ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್ ಅವರ ಬದಲಿಗೆ ಮಾಜಿ ಶಾಸಕ ಬಾಲರಾಜು ಟಿಕೆಟ್ ಪಡೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ