Site icon Vistara News

OBC Reservation In UP | ಒಬಿಸಿ ಮೀಸಲಾತಿ ಕುರಿತ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ, ಯೋಗಿ ಸರ್ಕಾರಕ್ಕೆ ಬಿಗ್‌ ರಿಲೀಫ್‌

CM Yogi praises UP Police for Asad Ahmed Encounter

ನವದೆಹಲಿ/ಲಖನೌ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳಿಗೆ ಮೀಸಲಾತಿ (OBC Reservation In UP) ನೀಡುವ ವಿಚಾರದಲ್ಲಿ ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ದೊಡ್ಡ ರಿಲೀಫ್‌ ಸಿಕ್ಕಿದೆ. ಉತ್ತರ ಪ್ರದೇಶ ಸರ್ಕಾರದ ಒಬಿಸಿ ಮೀಸಲಾತಿ ಕರಡು ಅಧಿಸೂಚನೆಯನ್ನು ರದ್ದುಗೊಳಿಸಿದ್ದ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಹಾಗಾಗಿ, ಇದರಿಂದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ‌ ಭಾರಿ ಮುನ್ನಡೆ ದೊರೆತಂತಾಗಿದೆ.

ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ನ್ಯಾಯಪೀಠವು, ಹೈಕೋರ್ಟ್‌ ತೀರ್ಪಿಗೆ ತಡೆಯಾಜ್ಞೆ ನೀಡಿದೆ. ಹಾಗೆಯೇ, “ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿದ ಸಮಿತಿಯು 2023ರ ಮಾರ್ಚ್‌ 31ರೊಳಗೆ ತೀರ್ಮಾನ ತೆಗೆದುಕೊಳ್ಳಬೇಕು” ಎಂದು ನಿರ್ದೇಶಿಸಿದೆ.

ಏನಿದು ಪ್ರಕರಣ?
ಜನವರಿ 31ರಂದು ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಸ್ಪರ್ಧಿಸಲು ಒಬಿಸಿ ಅಭ್ಯರ್ಥಿಗಳಿಗೆ ಶೇ.27ರಷ್ಟು ಮೀಸಲಾತಿ ಕಲ್ಪಿಸಿ ಡಿಸೆಂಬರ್‌ 5ರಂದು ಯೋಗಿ ಆದಿತ್ಯನಾಥ್‌ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ಆದರೆ, ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠವು ಒಬಿಸಿ ಮೀಸಲಾತಿಯ ಕರಡು ಅಧಿಸೂಚನೆಯನ್ನು ರದ್ದುಪಡಿಸಿ, ಮೀಸಲಾತಿ ಇಲ್ಲದೆಯೇ ಚುನಾವಣೆ ನಡೆಸಲು ಆದೇಶಿಸಿತ್ತು.

ಜನವರಿ 31ರಂದು ಮೂರು ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, 545 ನಗರ ಪಂಚಾಯಿತಿಗಳ ಅಧ್ಯಕ್ಷರು, 200 ನಗರ ಪಾಲಿಕೆ ಸದಸ್ಯರು ಹಾಗೂ 17 ಮುನ್ಸಿಪಲ್‌ ಕಾರ್ಪೊರೇಷನ್‌ಗಳ ಮೇಯರ್‌ಗಳ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇದರ ದೃಷ್ಟಿಯಿಂದಾಗಿ ಯೋಗಿ ಸರ್ಕಾರ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಿತ್ತು.

ಮೀಸಲಾತಿ ಇಲ್ಲದೆ ಚುನಾವಣೆ ಇಲ್ಲ ಎಂದಿದ್ದ ಯೋಗಿ
ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಬಳಿಕ ಪ್ರತಿಕ್ರಿಯಿಸಿದ್ದ ಯೋಗಿ ಆದಿತ್ಯನಾಥ್‌, “ಒಬಿಸಿ ಮೀಸಲಾತಿ ನೀಡದೆಯೇ ಚುನಾವಣೆಯನ್ನೇ ನಡೆಸುವುದಿಲ್ಲ” ಎಂದು ಹೇಳಿದ್ದರು. “ಸುಪ್ರೀಂ ಕೋರ್ಟ್‌ನ ಸೂತ್ರದಂತೆಯೇ ಆಯೋಗ ರಚಿಸಿ, ಅಧ್ಯಯನ ನಡೆಸಿದ ಬಳಿಕವೇ ಮೀಸಲಾತಿ ನೀಡಲಾಗುವುದು. ಒಟ್ಟಿನಲ್ಲಿ ಮೀಸಲಾತಿ ಇಲ್ಲದೆ ಚುನಾವಣೆ ನಡೆಸುವುದಿಲ್ಲ” ಎಂದಿದ್ದರು.

ಇದನ್ನೂ ಓದಿ | OBC Reservation In UP | ಚುನಾವಣೆಯಲ್ಲಿ ಒಬಿಸಿ ಮೀಸಲಾತಿ ರದ್ದು, ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಹಿನ್ನಡೆ

Exit mobile version