ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆಯ (Lok Sabha Election 2024) ದಿನಾಂಕ ಘೋಷಣೆಗೆ ಇಂದು (ಮಾರ್ಚ್ 16) ಚುನಾವಣೆ ಆಯೋಗವು (Election Commission) ತೆರೆ ಎಳೆಯಲಿದೆ. ಚುನಾವಣೆ ದಿನಾಂಕ ಘೋಷಣೆಗೆ ಮೊದಲೇ ಎಲ್ಲ ರಾಜಕೀಯ ಪಕ್ಷಗಳು ಪ್ರಚಾರ, ರಣತಂತ್ರ, ಟಿಕೆಟ್ ಘೋಷಣೆ ಸೇರಿ ಹತ್ತಾರು ಚಟುವಟಿಕೆಗಳಲ್ಲಿ ತೊಡಗಿವೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಜನತೆಗೆ ಪತ್ರ (Open Letter) ಬರೆದಿದ್ದಾರೆ.
ದೇಶದ ಅಭಿವೃದ್ಧಿ, ಕೇಂದ್ರ ಸರ್ಕಾರದ ಯೋಜನೆಗಳು, ಜನರಿಗೆ ಕೃತಜ್ಞತೆ, ವಿಕಸಿತ ಭಾರತದ ಕಲ್ಪನೆ ಸೇರಿ ನರೇಂದ್ರ ಮೋದಿ ಅವರು ಹತ್ತಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. “ಪ್ರಿಯ ದೇಶವಾಸಿಗಳೇ, 140 ಕೋಟಿ ಜನರ ಆಶೀರ್ವಾದ, ಬೆಂಬಲ ಹಾಗೂ ಸ್ಫೂರ್ತಿಯಿಂದಾಗಿಯೇ 10 ವರ್ಷಗಳಿಂದ ಉತ್ತಮ ಆಡಳಿತ ನೀಡಲು ಸಾಧ್ಯವಾಗಿದೆ. ಬಡವರು, ರೈತರು, ಯುವಕರು ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಒಂದು ದಶಕದಲ್ಲಿ ನಮ್ಮ ಸರ್ಕಾರವು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆಲ್ಲ ನಿಮ್ಮ ಆಶೀರ್ವಾದವೇ ಕಾರಣ” ಎಂದು ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Hon’ble Prime Minister Shri Narendra Modi Ji writes a letter to his family…#ModiKaParivar #PhirEkBaarModiSarkar #NaMoAgain pic.twitter.com/zD3zCjDHUj
— Dr.Shambhu Kumar (@kmshambhu) March 16, 2024
“ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ ಸುಸಜ್ಜಿತ ಮನೆಗಳ ನಿರ್ಮಾಣದ ಯಶಸ್ಸು, ವಿದ್ಯುತ್ ಸಂಪರ್ಕ, ಪ್ರತಿಯೊಬ್ಬರ ಮನೆಗಳಿಗೂ ನೀರು ಹಾಗೂ ಅಡುಗೆ ಅನಿಲ ಸಿಲಿಂಡರ್ ಪೂರೈಕೆ, ಆಯುಷ್ಮಾನ್ ಭಾರತ್ ಯೋಜನೆ ಅನ್ವಯ ಉಚಿತ ಚಿಕಿತ್ಸೆ, ರೈತರಿಗೆ ಹಣಕಾಸು ನೆರವು, ಮಾತೃ ವಂದನಾ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ನೆರವು ನೀಡುವುದು ಸೇರಿ ಹತ್ತಾರು ಯೋಜನೆಗಳ ಯಶಸ್ಸಿಗೆ ನೀವು ನೀಡಿದ ಬೆಂಬಲ, ನನ್ನ ಮೇಲೆ ಇಟ್ಟ ನಂಬಿಕೆಯೇ ಇಂಧನವಾಗಿದೆ” ಎಂದು ಹೇಳಿದ್ದಾರೆ.
370ನೇ ವಿಧಿ ರದ್ದು, ಜಿಎಸ್‌ಟಿ ಪ್ರಸ್ತಾಪ
ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಪ್ರಮುಖ ತೀರ್ಮಾನಗಳ ಕುರಿತು ಕೂಡ ಪ್ರಧಾನಿ ಪ್ರಸ್ತಾಪಿಸಿದ್ದಾರೆ. “ದೇಶದ ಜನ ನಮ್ಮ ಮೇಲೆ ಇಟ್ಟ ನಂಬಿಕೆಯಿಂದಲೇ ಐತಿಹಾಸಿಕ ತೀರ್ಮಾನಗಳನ್ನು ಕೂಡ ತೆಗೆದುಕೊಳ್ಳಲು ಸಾಧ್ಯವಾಗಿದೆ. ಜಿಎಸ್‌ಟಿ ಜಾರಿ, 370ನೇ ವಿಧಿ ರದ್ದು, ತ್ರಿವಳಿ ತಲಾಕ್ ನಿಷೇಧ, ನಾರಿ ಶಕ್ತಿ ವಂದನಾ ಕಾಯ್ದೆ, ನೂತನ ಸಂಸತ್ ಭವನದ ಉದ್ಘಾಟನೆ, ಉಗ್ರವಾದ ಹಾಗೂ ಎಡಪಂಥೀಯ ತೀವ್ರವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು” ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Modi Road Show: ಮೋದಿ ರೋಡ್ ಶೋಗೆ ಕೋರ್ಟ್ ಅಸ್ತು; ತಮಿಳುನಾಡು ಸರ್ಕಾರಕ್ಕೆ ಮುಖಭಂಗ
“ಜನರ ಸಹಭಾಗಿತ್ವ ಇದ್ದಾಗಲೇ ಪ್ರಜಾಪ್ರಭುತ್ವದ ಮೆರುಗು ಇನ್ನಷ್ಟು ಹೆಚ್ಚಾಗುತ್ತದೆ. ದೇಶದ ಜನ ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ, ಭರವಸೆ ಇಟ್ಟ ಕಾರಣದಿಂದಾಗಿಯೇ ನಾನು ದೇಶದ ಪ್ರಗತಿಗಾಗಿ ಹಲವು ನಿರ್ಧಾರ ತೆಗೆದುಕೊಳ್ಳಲು ಕಾರಣವಾಯಿತು. ಜನರಿಗಾಗಿ ಯೋಜನೆಗಳ ಜಾರಿ, ಅವುಗಳ ಸಮರ್ಪಕ ಅನುಷ್ಠಾನಕ್ಕೆ ಶಕ್ತಿ ನೀಡಿತು. ಮುಂದಿನ ದಿನಗಳಲ್ಲೂ ವಿಕಸಿತ ಭಾರತದ ಕನಸಿನ ಸಾಕಾರಕ್ಕಾಗಿ ನಿಮ್ಮ ಸಲಹೆ-ಸೂಚನೆಗಳ ಅಗತ್ಯವಿದೆ. ದೇಶದ ಏಳಿಗೆಯು ಉಚ್ಛ್ರಾಯ ಸ್ಥಿತಿ ತಲುಪಲು ನಿಮ್ಮ ಬೆಂಬಲ, ಸಹಕಾರ ಇದ್ದೇ ಇರುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಮೋದಿ ಪತ್ರದ ಮೂಲಕ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ