ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಪಕ್ಷಗಳು ಯಾವಾಗ ಜೂನ್ ಹತ್ತು ಬಂದಿಲ್ಲ. ಒಮ್ಮೆ ರಾಜ್ಯಸಭಾ ಚುನಾವಣೆ ಮುಗಿದಿಲ್ಲ ಅಂತ ಚಿಂತಾಕ್ರಾಂತವಾಗಿವೆ. ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ತಮ್ಮ ಶಾಸಕರನ್ನು ಯಾರೂ ಬೇಟೆಯಾಡದಂತೆ ಕಾಪಾಡಿಕೊಳ್ಳುವುದಕ್ಕಾಗಿ ರೆಸಾರ್ಟ್ ಪಾಲಿಟಿಕ್ಸ್ ಮೊರೆ ಹೋಗಿವೆ.
ಕಾಂಗ್ರೆಸ್‌ನ ಶಾಸಕರು ಉದಯ್‌ಪುರದ ರೆಸಾರ್ಟ್‌ನಲ್ಲಿದ್ದರೆ, ಬಿಜೆಪಿ ತನ್ನ ಶಾಸಕರನ್ನು ತರಬೇತಿ ಶಿಬಿರದ ಹೆಸರಿನಲ್ಲಿ ರೆಸಾರ್ಟ್‌ಗೆ ಕಳುಹಿಸಿದೆ. ಕಾಂಗ್ರೆಸ್ ಶಿಬಿರದಲ್ಲಿ ಜಾದೂ ಜೋರಾಗಿದ್ದರೆ, ಬಿಜೆಪಿ ಪಾಳಯದಲ್ಲಿ ಯೋಗ ವಿದ್ಯೆ ಕಲಿಕೆ ನಡೆಯುತ್ತಿದೆ.
ಕಾಂಗ್ರೆಸ್ ಶಾಸಕರು ತಂಗಿರುವ ಉದಯಪುರ ರೆಸಾರ್ಟ್‌ನಲ್ಲಿ ಸೋಮವಾರ ರಾತ್ರಿ ಜಾದೂ ಪ್ರದರ್ಶನ ಏರ್ಪಡಿಸಲಾಗಿತ್ತು. ಖ್ಯಾತ ಜಾದೂಗಾರ ಅಂಚಲ್ ಅವರನ್ನು ಇದಕ್ಕಾಗಿ ಕರೆಸಿಕೊಳ್ಳಲಾಗಿತ್ತು. ರಾತ್ರಿ ಊಟದ ಬಳಿಕ ಎಲ್ಲರೂ ರಿಲ್ಯಾಕ್ಸ್ ಆಗುತ್ತಿದ್ದಂತೆಯೇ ಜಾದೂ ಮ್ಯಾಜಿಕ್ ನಡೆಯಿತು. ವಿಶೇಷವೆಂದರೆ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ತಂದೆಯೂ ಜಾದೂಗಾರರಾಗಿದ್ದರು. ಬಹುಶಃ ಅದೇ ಅವರನ್ನು ಜಾದೂಗಾರರನ್ನು ಕರೆಸಲು ಪ್ರೇರಣೆ ನೀಡಿರಲೂಬಹುದು. ಅಶೋಕ್ ಗೆಹ್ಲೋಟ್ ಅವರು ಕೂಡಾ ಪ್ರದರ್ಶನವನ್ನು ತನ್ಮಯರಾಗಿ ವೀಕ್ಷಿಸಿದರು. ರೆಸಾರ್ಟ್‌ನಿಂದ ಬಂದ ಸೆಲ್‌ಫೋನ್ ದೃಶ್ಯಾವಳಿಗಳು ಅವರು ಶಾಸಕರೊಂದಿಗೆ ಕಾರ್ಯಕ್ರಮವನ್ನು ಆನಂದಿಸುತ್ತಿರುವುದನ್ನು ತೋರಿಸಿವೆ.
ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ?
ಬಿಜೆಪಿ ಕುದುರೆ ವ್ಯಾಪಾರ ಮಾಡಿ ತನ್ನ ಶಾಸಕರನ್ನು ಖರೀದಿಸಬಹುದು ಎಂಬ ಆತಂಕದಿಂದ ಕಾಂಗ್ರೆಸ್ ತನ್ನ ಶಾಸಕರನ್ನು ಜೂನ್ 2ರಂದು ಉದಯಪುರಕ್ಕೆ ಸ್ಥಳಾಂತರಿಸಿತ್ತು. 13 ಪಕ್ಷೇತರರ ಪೈಕಿ 12 ಮಂದಿ ಹಾಗೂ ಕಾಂಗ್ರೆಸ್‌ನ ಮೂವರು ರಾಜ್ಯಸಭಾ ಅಭ್ಯರ್ಥಿಗಳು ಸೇರಿದಂತೆ 100ಕ್ಕೂ ಹೆಚ್ಚು ಶಾಸಕರು ಉದಯಪುರ ರೆಸಾರ್ಟ್‌ನಲ್ಲಿದ್ದಾರೆ.
ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿರುವ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಎರಡನ್ನು ಗೆಲ್ಲಲು ಸಜ್ಜಾಗಿದ್ದು, ಸದನದಲ್ಲಿ 108 ಶಾಸಕರು ಇದ್ದಾರೆ. ಅದರ ನಂತರ, ಪಕ್ಷವು 26 ಹೆಚ್ಚುವರಿ ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಮೂರನೇ ಸ್ಥಾನವನ್ನು ಗೆಲ್ಲಲು 41 ಮತಗಳು ಬೇಕಾಗಿದ್ದು, ಕಾಂಗ್ರೆಸ್‌ಗೆ 15 ಮತಗಳ ಕೊರತೆಯಿದೆ. ಹಿರಿಯ ನಾಯಕರಾದ ಮುಕುಲ್ ವಾಸ್ನಿಕ್, ರಣದೀಪ್ ಸುರ್ಜೆವಾಲಾ ಮತ್ತು ಪ್ರಮೋದ್ ತಿವಾರಿ ಕಣದಲ್ಲಿದ್ದಾರೆ.
12 ಮಂದಿ ಪಕ್ಷೇತರರು ಮತ್ತು ಸಿಪಿಎಂನ ಇಬ್ಬರು ಸೇರಿದಂತೆ 123 ಶಾಸಕರ ಬೆಂಬಲವಿದೆ ಎಂದು ಕಾಂಗ್ರೆಸ್ ಈಗ ಹೇಳಿಕೊಂಡಿದೆ. ಆದರೆ ನಿಶ್ಚಿಂತೆಯಿಂದ ಇರಲು ಇನ್ನೂ ಮೂರು ಮತಗಳು ಬೇಕಾಗುತ್ತವೆ ಮತ್ತು ಅದಕ್ಕಾಗಿ ಅವರು ಭಾರತೀಯ ಬುಡಕಟ್ಟು ಪಕ್ಷದ ಇಬ್ಬರು ಶಾಸಕರ ಮೇಲೆ ಕಣ್ಣಿಟ್ಟಿದ್ದಾರೆ.
ಟಿವಿ ಚಾನೆಲ್ ಒಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಸಂಖ್ಯೆಗಳು “ಕಾಂಗ್ರೆಸ್ ಪರವಾಗಿವೆ” ಎಂದು ಹೇಳಿದರು. ಕಠಿಣ ಸ್ಪರ್ಧೆಯ ನಿರೀಕ್ಷೆಯಿರುವ ಮೂರನೇ ಸ್ಥಾನವನ್ನೂ ಪಕ್ಷ ತನ್ನದಾಗಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಯೋಗವಿದೆಯೇ?
ಒಂದು ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ, ಬಿಜೆಪಿ ಬಳಿ 30 ಹೆಚ್ಚುವರಿ ಮತಗಳು ಉಳಿಯುತ್ತವೆ. ಅವುಗಳು ಬಹುಶಃ ಸುಭಾಷ್ ಚಂದ್ರ ಅವರಿಗೆ ಬೀಳುತ್ತವೆ. ಬಿಜೆಪಿ ಮತ್ತು ಆರ್‌ಎಲ್‌ಪಿ ಬೆಂಬಲದ ಹೊರತಾಗಿಯೂ, ಸ್ಥಾನವನ್ನು ಗೆಲ್ಲಲು ಸುಭಾಷ್ ಚಂದ್ರ ಅವರಿಗೆ ಇನ್ನೂ ಎಂಟು ಶಾಸಕರ ಬೆಂಬಲದ ಅಗತ್ಯವಿದೆ.
ಇದನ್ನೂ ಓದಿ| ರಾಜ್ಯಸಭೆ ಚುನಾವಣೆ | ದೇಶದ ವಿತ್ತ ಸಚಿವೆಗಿಂತ JDS ಅಭ್ಯರ್ಥಿ 230 ಪಟ್ಟು ಶ್ರೀಮಂತ!