ಪಾಟ್ನಾ: ಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸುತ್ತಾರೆ ಎಂಬರ್ಥದ ಪೋಸ್ಟರ್ಗಳು ಬಿಹಾರದ ಪಾಟ್ನಾದಲ್ಲಿರುವ ಆರ್ಜೆಡಿ ನಾಯಕಿ ರಾಬ್ರಿ ದೇವಿ ನಿವಾಸದ ಹೊರಗಡೆ ರಾರಾಜಿಸುತ್ತಿವೆ. ಆದರೆ ಈ ಪೋಸ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ರಾವಣನಿಗೆ, ನಿತೀಶ್ ಕುಮಾರ್ ಅವರನ್ನು ರಾಮನಿಗೆ ಹೋಲಿಸಲಾಗಿದೆ. ಹಾಗೇ, ಮೋದಿಯವರನ್ನು ಕಂಸನಿಗೂ, ನಿತೀಶ್ ಕುಮಾರ್ ಅವರನ್ನು ಕೃಷ್ಣನಿಗೂ ಹೋಲಿಕೆ ಮಾಡಲಾಗಿದೆ. ಈ ಪೋಸ್ಟರ್ ಈಗ ವಿವಾದದ ಕಿಡಿ ಹೊತ್ತಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ರಾವಣನಿಗೆ ಹೋಲಿಸಿದ್ದರು. ಅವರ ಮಾತಿಗೆ ಅಪಾರ ಟೀಕೆ-ವ್ಯಂಗ್ಯ-ವಿರೋಧ ವ್ಯಕ್ತವಾಗಿತ್ತು. ಮತ್ತೀಗ ಈ ಪೋಸ್ಟರ್ನಲ್ಲೂ ಅದೇ ಎಡವಟ್ಟು ಮಾಡಲಾಗಿದೆ. ಎನ್ಡಿಎ ಒಕ್ಕೂಟದಿಂದ ಹೊರಬಂದು, ಬಿಹಾರದಲ್ಲಿ ಆರ್ಜೆಡಿಯೊಟ್ಟಿಗೆ ಸೇರಿ ಸರ್ಕಾರ ರಚನೆ ಮಾಡಿರುವ ನಿತೀಶ್ ಕುಮಾರ್, 2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕೈಂಕರ್ಯದಲ್ಲಿ ತೊಡಗಿದ್ದಾರೆ. ವಿಪಕ್ಷಗಳ ಬಣದಿಂದ ಅವರೇ ಪ್ರಧಾನಿ ಅಭ್ಯರ್ಥಿ ಎಂದೂ ಹೇಳಲಾಗುತ್ತಿದೆ. ಈ ಮಾತನ್ನು ನಿತೀಶ್ ಕುಮಾರ್ ಅಲ್ಲಗಳೆಯುತ್ತಿದ್ದರೂ, ಯಾರೂ ನಂಬುವ ಸ್ಥಿತಿಯಲ್ಲಂತೂ ಇಲ್ಲ.
ಇದೇ ಹೊತ್ತಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಖಂಡಿತವಾಗಿಯೂ ಮೋದಿಯನ್ನು ಸೋಲಿಸುತ್ತಾರೆ ಎಂಬರ್ಥದಲ್ಲೇ ಪೋಸ್ಟರ್ನಲ್ಲಿ ಬಿಂಬಿಸಲಾಗಿದೆ. ಪೋಸ್ಟರ್ನಲ್ಲಿ ಮೇಲಿನ ಭಾಗದಲ್ಲಿ ಮೊದಲು ರಾಮ-ರಾವಣರ ಚಿತ್ರವಿದೆ, ಮಧ್ಯ ಭಾಗದಲ್ಲಿ ಕೃಷ್ಣ-ಕಂಸರ ಚಿತ್ರ ಮತ್ತು ಅಂತಿಮವಾಗಿ ನಿತೀಶ್ ಕುಮಾರ್-ಪ್ರಧಾನಿ ನರೇಂದ್ರ ಮೋದಿ ಚಿತ್ರವಿದೆ. ರಾಮಾಯಣದಲ್ಲಿ ರಾಮನಿಂದ ರಾವಣ ಹತನಾದಂತೆ, ಮಹಾಭಾರತದಲ್ಲಿ ಕಂಸನನ್ನು ಕೃಷ್ಣ ಮಣಿಸಿದಂತೆ, 2024ರಲ್ಲಿ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿಯನ್ನು ಸೋಲಿಸುತ್ತಾರೆ ಎಂಬುದು ಈ ಪೋಸ್ಟರ್ನ ಸಾರಾಂಶ. ಹಾಗೇ, ಪೋಸ್ಟರ್ನ ಮೂಲೆಯಲ್ಲಿ ಆರ್ಜೆಡಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂನಂ ರಾಯ್ ಫೋಟೋ ಕೂಡ ಇದೆ.
ಬಿಜೆಪಿ ಕಿಡಿ
ಇನ್ನು ಪೋಸ್ಟರ್ ನೋಡಿದ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವಿಡಿಯೊ ಶೇರ್ ಮಾಡಿಕೊಂಡಿರುವ ಬಿಜೆಪಿ ವಕ್ತಾರ ನಿಖಿಲ್ ಆನಂದ್ ‘ಹೀಗೆಲ್ಲ ಯುದ್ಧ ನಡೆಯಲು ಇದು ಯಾವುದೇ ರಾಜ ಪ್ರಭುತ್ವದ ಯುಗವಲ್ಲ. ಇದು ಪ್ರಜಾಪ್ರಭುತ್ವದ ಕಾಲ. ಇಲ್ಲಿ ಮತಗಳೇ ಆಳುವವರ ಭವಿಷ್ಯ ನಿರ್ಧಾರ ಮಾಡುತ್ತವೆ. ರಾಮ-ರಾವಣ ಮತ್ತು ಕೃಷ್ಣ-ಕಂಸ ಎಂಬುದು ಸರಿಯಾಗಿಯೇ ಇದೆ. ಆದರೆ ನಿತೀಶ್-ನಮೋ ಬದಲು ನಮೋ-ನಿತೀಶ್ ಎಂದಾಗಬೇಕು. ಆದರೂ ಈಗಾಗಲೇ ಸತ್ತುಹೋಗಿರುವ ಮನುಷ್ಯನನ್ನು ಯಾಕಾದರೂ ಕೊಲ್ಲಬೇಕು ಎಂಬ ಪ್ರಶ್ನೆಯೂ ಮೂಡುತ್ತದೆ ಎಂದು ಅವರು ನಿತೀಶ್ ಕುಮಾರ್ರನ್ನು ಟೀಕಿಸಿದರು. ಅಷ್ಟೇ ಅಲ್ಲ ತೇಜ್ (ಪ್ರತಾಪ್)-ತೇಜ್ (ಸ್ವಿ) ಈ ಪ್ರಾಸಪದಗಳ ಬಗ್ಗೆ ಏನನ್ನೋಣ? ಆರ್ಜೆಡಿಯ ಪೋಸ್ಟರ್ ಮೂರ್ಖರೇ ಈ ಬಗ್ಗೆ ಹೇಳಬೇಕು’ ಎಂದು ವ್ಯಂಗ್ಯವಾಡಿದ್ದಾರೆ.