Site icon Vistara News

ಬಹುತೇಕ ಪ್ರಕರಣಗಳಲ್ಲಿ ಆರೆಸ್ಸೆಸ್ ಸದಸ್ಯರು ಬಲಿಪಶುಗಳೇ ಹೊರತು ಅಪರಾಧಿಗಳಲ್ಲ ಎಂದ ಸುಪ್ರೀಂ

In the most of the cases RSS members are victims, not criminals: Says Supreme Court

ನವದೆಹಲಿ: ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನಕ್ಕೆ ಅನುಮತಿ ನೀಡಿದ್ದ ಮದ್ರಾಸ್‌ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಆರ್‌ಎಸ್‌ಎಸ್‌ ಪಥಸಂಚಲನ ಮಾಡಬಹುದಾಗಿದೆ. ಹಾಗೆಯೇ, “ಬಹುತೇಕ ಪ್ರಕರಣಗಳಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಬಲಿಪಶುಗಳಾಗಿದ್ದಾರೆಯೇ ಹೊರತು ಅಪರಾಧಿಗಳು ಎಂಬುದು ಸಾಬೀತಾಗಿಲ್ಲ” ಎಂದು ಕೋರ್ಟ್‌ ಹೇಳಿದೆ.

ಮದ್ರಾಸ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಡಿಎಂಕೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ. ರಾಮಸುಬ್ರಮಣಿಯನ್‌ ಹಾಗೂ ಪಂಕಜ್‌ ಮಿತ್ತಲ್‌ ಅವರಿದ್ದ ದ್ವಿಸದಸ್ಯ ಪೀಠವು, ಮದ್ರಾಸ್‌ ಹೈಕೋರ್ಟ್‌ ತೀರ್ಪನ್ನು ಎತ್ತಿಹಿಡಿಯಿತು. “ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ವಿಷಯಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ಕಾರ್ಯಕರ್ತರ ವಿರುದ್ಧ ದಾಖಲಾದ ಯಾವುದೇ ಪ್ರಕರಣಗಳು ಸಾಬೀತಾಗಿಲ್ಲ. ಬಹುತೇಕ ಪ್ರಕರಣಗಳಲ್ಲಿ ಅವರೇ ಬಲಿಪಶು ಆಗಿದ್ದಾರೆ. ಹಾಗಾಗಿ, ಆರ್‌ಎಸ್‌ಎಸ್‌ ಪಥಸಂಚಲನ ತಡೆಯಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿತು.

ದೇಶಾದ್ಯಂತ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಹಾಗಾಗಿ, ತಮಿಳುನಾಡಿನಲ್ಲಿ ಆರ್‌ಎಸ್‌ಎಸ್‌ ಪಥಸಂಚಲನದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಪ್ರತಿ ಗಲ್ಲಿ, ಮೊಹಲ್ಲಾದಲ್ಲಿ ಪಥಸಂಚಲನಕ್ಕೆ ಅವಕಾಶ ನೀಡುವುದು ಅಪಾಯಕಾರಿ ಎಂದು ತಮಿಳುನಾಡು ಸರ್ಕಾರದ ಪರ ವಕೀಲ ಮುಕುಲ್‌ ರೋಹಟಗಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದರು. ಆರ್‌ಎಸ್‌ಎಸ್‌ ಪರ ವಕೀಲರು ಕೂಡ ವಾದ ಮಂಡಿಸಿ, ರಾಜ್ಯದಲ್ಲಿ ಪಥಸಂಚಲನ ಕೈಗೊಳ್ಳುವಾಗ ಪಿಎಫ್‌ಐನಿಂದ ಅಡ್ಡಿಯುಂಟಾದರೆ, ಬೆದರಿಕೆ ಬಂದರೆ, ರಾಜ್ಯ ಸರ್ಕಾರ ರಕ್ಷಣೆ ಒದಗಿಸಬೇಕು ಎಂದು ತಿಳಿಸಿದರು.

ಕೊನೆಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, “ಬಹುತೇಕ ಪ್ರಕರಣಗಳಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರೇ ಬಲಿಪಶುಗಳಾಗಿದ್ದಾರೆ. ಹೈಕೋರ್ಟ್‌ನ ವಿಭಾಗೀಯ ಪೀಠವು, ಪಥಸಂಚಲನಕ್ಕೆ ಅನುಮತಿ ನೀಡುವ ಜತೆಗೆ ಹಲವು ನಿಬಂಧನೆಗಳನ್ನು ಕೂಡ ವಿಧಿಸಿದೆ. ಹಾಗಾಗಿ, ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅವಕಾಶ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಸ್ಪಷ್ಟಪಡಿಸುವ ಜತೆಗೆ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ನ್ಯಾಯಪೀಠ ವಜಾಗೊಳಿಸಿತು. ಸುಪ್ರೀಂ ಕೋರ್ಟ್‌ ಆದೇಶದಿಂದ ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ಹಿನ್ನಡೆಯಾದಂತಾಗಿದೆ. ಕಾನೂನು-ಸುವ್ಯವಸ್ಥೆಯ ಕಾರಣಕ್ಕಾಗಿ ಪಥಸಂಚಲನಕ್ಕೆ ಅವಕಾಶ ನೀಡಬಾರದು ಎಂಬುದು ತಮಿಳುನಾಡು ಸರ್ಕಾರದ ನಿಲುವಾಗಿತ್ತು. ಇದನ್ನು ಹಲವು ಹಿಂದು ಸಂಘಟನೆಗಳು ಕೂಡ ವಿರೋಧಿಸಿದ್ದವು.

ಇದನ್ನೂ ಓದಿ: ‘ನಿಮ್ಮ ರಕ್ತ ಹರಿಸುತ್ತೇವೆ’; ಜಮ್ಮು ಕಾಶ್ಮೀರದ ಆರ್​ಎಸ್​ಎಸ್​ ಪ್ರಮುಖರಿಗೆ ಉಗ್ರ ಬೆದರಿಕೆ, 30 ಜನರ ಟಾರ್ಗೆಟ್​ ಲಿಸ್ಟ್​ ಬಿಡುಗಡೆ

Exit mobile version