Site icon Vistara News

New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?

inauguration of New parliament building and Check details

ನವದೆಹಲಿ: ಹೊಸ ಸಂಸತ್ ಭವನ ಉದ್ಘಾಟನೆಗೆ (New Parliament Building:) ಕ್ಷಣಗಣನೆ ಆರಂಭವಾಗಿದೆ. ಲೋಕಸಭಾ ಸ್ಫೀಕರ್ ಓಂ ಬಿರ್ಲಾ (Speaker OM Birla) ಹಾಗೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ನೂತನ ಸಂಸತ್ ಭವನವನ್ನು ಇಂದು (ಮೇ 28ರಂದು)ಉದ್ಘಾಟನೆ ಮಾಡಲಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮವು ಎರಡು ಹಂತದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಮೊದಲನೆ ಹಂತದಲ್ಲಿ, ಸಂಸತ್ತಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿಯ ಮೇಲಾವರಣದೊಳಗೆ ನಡೆಯುವ ಧಾರ್ಮಿಕ ಕ್ರಿಯೆಯೊಂದಿಗೆ ಸಮಾರಂಭವು ಪ್ರಾರಂಭವಾಗುತ್ತದೆ. ಈ ವೇಳೆ, ಪ್ರಧಾನಿ ಮೋದಿ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಸೇರಿದಂತೆ ಹಿರಿಯ ಸಚಿವರು ಭಾಗವಹಿಸಲಿದ್ದಾರೆ.

ಬಳಿಕ ಲೋಕಸಭೆ ಮತ್ತು ರಾಜ್ಯಸಭೆ ಆವರಣಗಳನ್ನು ಗಣ್ಯರು ಪರಿಶೀಲಿಸಿದ ಬಳಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಲೋಕಸಭೆ ಸ್ಪೀಕರ್ ಪೀಠದ ಮುಂದೆ ಪವಿತ್ರ ರಾಜದಂಡವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಪ್ರತಿಷ್ಠಾಪನೆಯನ್ನು ತಮಿಳುನಾಡಿನಿಂದ ಆಗಮಿಸಿದ ಪುರೋಹಿತರೇ ಮಾಡಲಿದ್ದು, ರಾಜದಂಡವನ್ನು ವಿನ್ಯಾಸ ಮಾಡಿದ ಮೂಲ ಅಕ್ಕಸಾಲಿಗ ಕೂಡ ಈ ವೇಳೆ ಹಾಜರು ಇರಲಿದ್ದಾರೆ. ಮೊದಲನೆ ಹಂತದ ಈ ಕಾರ್ಯಕ್ರಮವು ಬೆಳಗ್ಗೆ 9.30ಕ್ಕೆ ಮುಕ್ತಾಯವಾಗಲಿದೆ.

ಮಧ್ಯಾಹ್ನದ ವೇಳೆ ಎರಡನೇ ಹಂತದ ಕಾರ್ಯಕ್ರಮಗಳು ನಡೆಯಲಿವೆ. ಈ ವೇಳೆ ನಾಯಕರು ಮಾತನಾಡಲಿದ್ದಾರೆ. ಮೊದಲಿಗೆ ರಾಜ್ಯಸಭೆಯ ಡೆಪ್ಯುಟಿ ಚೇರ್ಮನ್ ಹರಿವಂಶ್ ಅವರು, ರಾಜ್ಯಸಭಾ ಚೇರ್ಮನ್ ಆಗಿರುವ ಉಪರಾಷ್ಟ್ರಪತಿಗಳ ಲಿಖಿತ ಸಂದೇಶವನ್ನು ಓದಲಿದ್ದಾರೆ. ಇದೇ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳುಹಿಸಿರುವ ಲಿಖಿತ ಸಂದೇಶವನ್ನೂ ಓದಲಾಗುತ್ತದೆ.

ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಲೋಕಸಭೆ ಪ್ರಧಾನ ಕಾರ್ಯದರ್ಶಿ ಅವರು ವಂದನಾರ್ಪಣೆ ಮಾಡುವುದರೊಂದಿಗೆ ಉದ್ಘಾಟನಾ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ.

ಇದನ್ನೂ ಓದಿ: New Parliament: ಹೊಸ ಸಂಸತ್ ಭವನ ಉದ್ಘಾಟನೆ; ಕಾರ್ಯಕ್ರಮ ಬಹಿಷ್ಕರಿಸಿದ ಮತ್ತು ಭಾಗವಹಿಸುವ ಪಕ್ಷಗಳ ಪಟ್ಟಿ ಇಲ್ಲಿದೆ…

ಈ ಕಾರ್ಯಕ್ರಮಕ್ಕೆ ಹೊಸ ಸಂಸತ್ ಭವನದ ಮುಖ್ಯ ವಿನ್ಯಾಸಕ ಬಿಮಲ್ ಪಟೇಲ್, ಉದ್ಯಮಿ ರತನ್ ಟಾಟಾ ಸೇರಿದಂತೆ ಸಿನಿರಂಗದ ಸ್ಟಾರ್‌ಗಳು, ಕ್ರೀಡಾ ವ್ಯಕ್ತಿಗಳು ಸೇರಿದಂತೆ ಅನೇಕ ಗಣ್ಯರು ಹಾಜರಿರಲಿದ್ದಾರೆ. 20 ರಾಜಕೀಯ ಪಕ್ಷಗಳು ಈ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ ನಡುವೆಯೂ ಒಟ್ಟು 25 ರಾಜಕೀಯ ಪಕ್ಷಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಒಪ್ಪಿಗೆ ನೀಡಿವೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version