ನವದೆಹಲಿ: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ರಾಮ ಮಂದಿರ (Ram Mandir) ಉದ್ಘಾಟನೆಯು 2024ರ ಜನವರಿ 22ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಆಹ್ವಾನ ನೀಡಲಾಗಿದೆ. ಈ ವಿಷಯವನ್ನು ಸ್ವತಃ ಮೋದಿ ಅವರೇ ಬಹಿರಂಗ ಮಾಡಿದ್ದು, ಎಕ್ಸ್ ವೇದಿಕೆಯಲ್ಲಿ ಬುಧವಾರ ಬರೆದುಕೊಂಡಿದ್ದಾರೆ.
ಇಂದು ನಾನು ತುಂಬ ಆಶೀರ್ವದಿತನಾಗಿದ್ದೇನೆ. ನನ್ನ ಜೀವಿತಾವಧಿಯಲ್ಲೇ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಅದೃಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ವೇದಿಕೆಲ್ಲಿ ಬರೆದುಕೊಂಡಿದ್ದಾರೆ.
ಇಂದು ಭಾವನೆಗಳಿಂದ ತುಂಬಿರುವ ದಿನ. ಇತ್ತೀಚೆಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ನನ್ನನ್ನು ಭೇಟಿಯಾಗಲು ನನ್ನ ನಿವಾಸಕ್ಕೆ ಬಂದಿದ್ದರು. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
जय सियाराम!
— Narendra Modi (@narendramodi) October 25, 2023
आज का दिन बहुत भावनाओं से भरा हुआ है। अभी श्रीराम जन्मभूमि तीर्थ क्षेत्र ट्रस्ट के पदाधिकारी मुझसे मेरे निवास स्थान पर मिलने आए थे। उन्होंने मुझे श्रीराम मंदिर में प्राण-प्रतिष्ठा के अवसर पर अयोध्या आने के लिए निमंत्रित किया है।
मैं खुद को बहुत धन्य महसूस कर रहा… pic.twitter.com/rc801AraIn
ಜನವರಿ 22ರಂದು ಗರ್ಭಗೃಹದಲ್ಲಿ ರಾಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂಬ ಸುದ್ದಿಯನ್ನು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಖಚಿತಪಡಿಸಿದ್ದಾರೆ. ಈ ಉದ್ಘಾಟನೆಯ ಸಮಾರಂಭಕ್ಕೆ ಹಾಜರಾಗುವಂತೆ ನೀಡಲಾಗಿರುವ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಯೋಧ್ಯೆಯಲ್ಲೇ ವಿಜಯ ದಶಮಿ ಆಚರಣೆ
ವಿಜಯ ದಶಮಿಯ ದಿನದಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮುಂದಿನ ವರ್ಷದಿಂದ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲೇ ವಿಜಯ ದಶಮಿ ಆಚರಿಸಲಾಗುವುದು ಎಂದು ಪ್ರಕಟಿಸಿದರು. ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾವಣನ ಪ್ರತಿಕೃತಿಯನ್ನು ಅವರು ದಹಿಸಿದರು.
ಇಂದು ರಾವಣ ದಹನ ಮಾಡಲಾಗುತ್ತದೆ. ಇದು ಕೇವಲ ರಾವಣನ ಪ್ರತಿಕೃತಿ ದಹಿಸುವುದಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಭಾರತಮಾತೆಯನ್ನು ಜಾತಿ ಮತ್ತು ಪ್ರಾದೇಶಿಕವಾದ ಹೆಸರಿನಲ್ಲಿ ನಾಶ ಮಾಡುತ್ತಿರುವ ಶಕ್ತಿಗಳ ದಹನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ವಿಜಯದಶಮಿ ಹಬ್ಬವು ರಾಷ್ಟ್ರದ ಪ್ರತಿಯೊಂದು ಅನಿಷ್ಟದ ವಿರುದ್ಧ ದೇಶಭಕ್ತಿಯ ವಿಜಯದ ಹಬ್ಬವಾಗಬೇಕು, ಸಮಾಜದಲ್ಲಿನ ಅನಿಷ್ಟಗಳು ಮತ್ತು ತಾರತಮ್ಯವನ್ನು ತೊಡೆದುಹಾಕಲು ನಾವು ಪ್ರತಿಜ್ಞೆ ಮಾಡಬೇಕು. ನಾವು ಹೊಸ ಶಕ್ತಿ ಮತ್ತು ಹೊಸ ಸಂಕಲ್ಪಗಳೊಂದಿಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತೇವೆ. ನಾವೆಲ್ಲರೂ ಸೇರಿ ಶ್ರೇಷ್ಠ ಭಾರತ ನಿರ್ಮಾಣ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.