Site icon Vistara News

Maharashtra: ಔಷಧ ಕೊರತೆ, ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 12 ಶಿಶುಗಳು ಸೇರಿ 24 ರೋಗಿಗಳ ಸಾವು!

including 12 newborns 24 people died in Maharashtra government hospital within 24 hours

ನವದೆಹಲಿ: ಮಹಾರಾಷ್ಟ್ರದ (Maharashtra) ನಾಂದೇಡ್ ಜಿಲ್ಲೆಯ (Nanded District) ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 12 ಶಿಶು (Newborns) ಸೇರಿ 24 ರೋಗಿಗಳು ಮೃತಪಟ್ಟ ಘಟನೆ ನಡೆದಿದೆ(Patients Died). ಈ ಅವಘಡಕ್ಕೆ ಸರ್ಕಾರಿ ಆಸ್ಪತ್ರೆ ಎದುರಿಸುತ್ತಿರುವ ಸಿಬ್ಬಂದಿ ಹಾಗೂ ಔಷಧಗಳ ಕೊರತೆಯ ಕಾರಣ ಎಂದು ನಾಂದೇಡ್ ಶಂಕರ್ ರಾವ್ ಚವಾಣ್ ಸರ್ಕಾರಿ ಆಸ್ಪತ್ರೆಯ ಡೀನ್ ಹೇಳಿದ್ದಾರೆ(Shankarrao Chavan Government Hospital Dean). ಮೃತಪಟ್ಟ 12 ವಯಸ್ಕರ ಪೈಕಿ ಹೆಚ್ಚಿನವರು ಹಾವು ಕಡಿತಕ್ಕೊಳಗಾದವರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಆರು ಗಂಡು ಮತ್ತು ಆರು ಹೆಣ್ಣು ಶಿಶುಗಳು ಸಾವನ್ನಪ್ಪಿವೆ. ಹನ್ನೆರಡು ವಯಸ್ಕರು ವಿವಿಧ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ, ಈ ಪೈಕಿ ಹೆಚ್ಚಿನವರು ಹಾವು ಕಡಿತದಿಂದ ಬಳಲುತ್ತಿದ್ದರು. ವಿವಿಧ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರಿಂದ ಆಸ್ಪತ್ರೆಯು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಅವರು ಆಸ್ಪತ್ರೆಯ ಡೀನ್ ಹೇಳಿದ್ದಾರೆ.

ಈ ಆಸ್ಪತ್ರೆಯು ತೃತೀಯ ಹಂತದ ಆರೈಕೆ ಕೇಂದ್ರವಾಗಿದೆ. ಅಲ್ಲದೇ, 70ರಿಂದ 80 ಕಿ.ಮೀ ವ್ಯಾಪ್ತಿಯಲ್ಲಿನ ಏಕೈಕ ಸರ್ಕಾರಿ ಆಸ್ಪತ್ರೆಯಾಗಿದೆ. ಹಾಗಾಗಿ, ದೂರದ ಸ್ಥಳಗಳಿಂದ ರೋಗಿಗಳು ಈ ಆಸ್ಪತ್ರೆಗೆ ಆಗಮಿಸುತ್ತಾರೆ. ಹೀಗೆ, ರೋಗಿಗಳು ಸಂಖ್ಯೆ ಹೆಚ್ಚಳವಾದಾಗ ಅವರನ್ನು ಈ ಆಸ್ಪತ್ರೆಯಲ್ಲಿ ನಿರ್ವಹಣೆ ಮಾಡುವುದು ಕಷ್ಟ. ಆಗ ಸಮಸ್ಯೆಗಳು ಶುರುವಾಗುತ್ತವೆ ಎಂದು ಅವರು ತಿಳಿಸಿದ್ದಾರೆ. ಹಾಫ್ಕಿನ್ ಎಂಬ ಸಂಸ್ಥೆಯಿದ್ದು, ಇಲ್ಲಿಂದ ಔಷಧಿಗಳನ್ನು ಖರೀದಿಸಬೇಕು. ಆದರೆ ಈ ಸಂಸ್ಥೆಯಿಂದ ಔಷಧಗಳ ಖರೀದಿ ಸಾಧ್ಯವಾಗಿಲ್ಲ. ಆಗ ನಾವು ಸ್ಥಳೀಯವಾಗಿ ಔಷಧಗಳನ್ನು ಖರೀದಿಸಿ ರೋಗಿಗಳಿಗೆನೀಡಿದ್ದೇವೆ ಎಂದು ಡೀನ್ ಅವರು ತಿಳಿಸಿದ್ದಾರೆ.

ರೋಗಿಗಳ ಸಾವನ್ನು ದುರದೃಷ್ಟಕರ ಎಂದು ಕರೆದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು, ಆಸ್ಪತ್ರೆಯಲ್ಲಿ ಏನಾಗಿದೆ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆದುಕೊಂಡ ಬಳಿಕ, ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಮಧ್ಯೆ, ಮಹಾರಾಷ್ಟ್ರ ಪ್ರತಿಪಕ್ಷಗಳು ಶಿಂಧೆ ಸರ್ಕಾರದ ವಿರುದ್ಧ ಟೀಕೆ ಮಾಡಿವೆ. ಟ್ರಿಪಲ್ ಎಂಜಿನ್ ಸರ್ಕಾರ(ಬಿಜೆಪಿ-ಶಿಂಧೆ ಶಿವಸೇನೆ- ಅಜಿತ್ ಪವಾರ್ ಎನ್‌ಸಿಪಿ) ಈ ರೋಗಿಗಳ ಸಾವಿನ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿವೆ.

ಈ ಸುದ್ದಿಯನ್ನೂ ಓದಿ: Sagara News: ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ 4 ದಿನದ ಮಗು ಸಾವು; ವೈದ್ಯರ ವಿರುದ್ಧ ಪೋಷಕರ ಆಕ್ರೋಶ

ಕಳೆದ 24 ಗಂಟೆಯಲ್ಲಿ ಒಟ್ಟು 24 ಜೀವಗಳು ಬಲಿಯಾಗಿವೆ. ಇನ್ನೂ 70 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳು ಮತ್ತು ಸಿಬ್ಬಂದಿ ಕೊರತೆ ಇದೆ. ಅನೇಕ ಸಿಬ್ಬಂದಿಯನ್ನು ಇಲ್ಲಿಂದ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ ಬೇರೆಯವರನ್ನು ನೇಮಕ ಮಾಡಿಲ್ಲ. ಆಸ್ಪತ್ರೆಯ ಅನೇಕ ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಆಸ್ಪತ್ರೆಯ ಸಾಮರ್ಥ್ಯ 500. ಆದರೆ 1,200 ರೋಗಿಗಳು ದಾಖಲಾಗಿದ್ದಾರೆ. ಸರ್ಕಾರವು ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಚವಾಣ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ನಂತರ ಮಾಧ್ಯಮದವರಿಗೆ ತಿಳಿಸಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version