ಖಾರ್ಗೋನ್, ಮಧ್ಯಪ್ರದೇಶ: ಐಸ್ ಕ್ರೀಮ್ (Ice Cream) ಸೇವಿಸಿ 55ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೀಡಾದ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. ಅನಾರೋಗ್ಯಕ್ಕೀಡಾದವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಸಮಾರಂಭ ನಡೆದಿತ್ತು. ಈ ವೇಳೆ, ಐಸ್‌ಕ್ರೀಮ್ ಸೇವಿಸಿದವರಿಗೆ ಹೊಟ್ಟೆ ಉಮ್ಮಳಿಸಿದಂತಾಗಿದೆ. ಆಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 55 ಮಂದಿಯ ಪೈಕಿ 25 ಜನ ಮಕ್ಕಳಿದ್ದಾರೆ. ಅಲ್ಲದೇ, ಪರೀಕ್ಷೆಗಾಗಿ ಐಸ್‌ಕ್ರೀಮ್‌ವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 14 ಕಿ.ಮೀ ದೂರದಲ್ಲಿರುವ ಛತಾಲ್ ಗ್ರಾಮದ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಬುಧವಾರ ರಾತ್ರಿ ದಿನೇಶ್ ಕುಶ್ವಾಹ ಎಂಬಾತ ತಯಾರಿಸಿ ಮಾರಾಟ ಮಾಡಿದ ಐಸ್‌ಕ್ರೀಂ ಈ ಜನರು ತಿಂದಿದ್ದಾರೆ ಎಂದು ಖರ್ಗೋನ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ದೌಲತ್ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ.
25 ಮಕ್ಕಳು ಸೇರಿದಂತೆ 55 ಜನರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಐಸ್‌ಕ್ರೀಮ್ ಸೇವಿಸಿದವರು ಹೊಟ್ಟೆ ನೋವು, ವಾಂತಿ ಮಾಡಲಾರಂಭಿಸಿದ್ದಾರೆ. ಆಹಾರ ವಿಷವಾಗಿರುವುದು ಇದಕ್ಕೆ ಕಾರಣವಾಗಿದೆ. ಇಬ್ಬರ ಮಕ್ಕಳ ಸ್ಥಿತಿ ತುಂಬಾ ಗಂಭೀರವಾಗಿತ್ತು. ಆದರೆ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಗ ದಾಖಲಾದ 55 ಜನರ ಪೈಕಿ 10 ಜನರು ಹಾಗೂ 20 ಮಕ್ಕಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ರೆಸಿಡೆಂಟ್ ಮೆಡಿಕಲ್ ಆಫೀಸರ್ ಡಾ. ದಿಲಿಪ್ ಸೇಪ್ತಾ ಅವರು ತಿಳಿಸಿದ್ದಾರೆ.
ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳು
ಕಳೆದ ತಿಂಗಳು ಕರ್ನಾಟಕದಲ್ಲೂ ಬಿಸಿಯೂಟ ಸೇವಿಸಿ 35ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದ ಘಟನೆ ನಡೆದಿತ್ತು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರದಲ್ಲಿ ಬಿಸಿಯೂಟ (mid day meal) ಸೇವಿಸಿ 35 ಮಕ್ಕಳು ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು.
ಇದನ್ನೂ ಓದಿ: Honeybee attack : ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, 10 ಮಂದಿ ಅಸ್ವಸ್ಥ
ಬಿಸಿಯೂಟ ಸೇವಿಸಿದ ಮಕ್ಕಳಲ್ಲಿ ವಾಂತಿ ಕಂಡುಬಂದಿದೆ. ತಕ್ಷಣವೇ ಅಡುಗೆಯನ್ನು ಪರಿಶೀಲನೆ ನಡೆಸಿದಾಗ ಬಿಸಿಯೂಟದ ಅನ್ನದಲ್ಲಿ ಹಲ್ಲಿಯಂತಹ ಪ್ರಾಣಿಯೊಂದು ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಡಿಸಾಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ಬಳಿಕ ಧಾರವಾಡ ಡಿಎಚ್ಒ ಡಾ. ಶಶಿ ಪಾಟೀಲ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ. ಇನ್ನು ಯಾವುದೇ ಮಕ್ಕಳಿಗೆ ಅಪಾಯವಿಲ್ಲ ಎಂದು ತಪಾಸಣೆ ನಡೆಸಿದ ವೈದ್ಯರು ತಿಳಿಸಿದ್ದರು.