ನವದೆಹಲಿ: ನಾಲ್ಕು ರಾಜ್ಯಗಳಲ್ಲಿ ಇಂದು ರಾಜ್ಯಸಭೆ ಚುನಾವಣೆಯ ಸಂಭ್ರಮ. ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಚುನಾವಣೆಯ ಕಾವೇರಿದೆ. ಶುಕ್ರವಾರ (ಮೇ 10) ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ಹಾಗೂ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಮಹಾರಾಷ್ಟ್ರದಿಂದ ರಾಜ್ಯಸಭೆ ಚುನಾವಣೆ ಕಣದಲ್ಲಿದ್ದಾರೆ.
ರಾಜ್ಯಸಭೆಯಲ್ಲಿ ಖಾಲಿಯಾಗಿದ್ದ ಸೀಟುಗಳು 57
ರಾಜ್ಯಸಭೆಗೆ 15 ರಾಜ್ಯಗಳಲ್ಲಿ ಒಟ್ಟು 57 ಸ್ಥಾನಗಳು ಖಾಲಿಯಾಗಿತ್ತು. ಇದರಲ್ಲಿ ಬಿಜೆಪಿಯ 23 ಮತ್ತು, ಕಾಂಗ್ರೆಸ್‌ನ 8 ಸೀಟುಗಳು ಖಾಲಿಯಾಗಿವೆ. ಮಿಕ್ಕಿದ್ದು ಇತರ ಪಕ್ಷಗಳಿಗೆ ಸೇರಿವೆ. 57 ಸೀಟುಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ 16 ಸೀಟುಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಒಂದು ವಾರದ ಹಿಂದೆ 11 ರಾಜ್ಯಗಳಲ್ಲಿನ 41 ಅಭ್ಯರ್ಥಿಗಳು ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಚುನಾವಣಾ ರಾಜಕೀಯ ಬಿರುಸಾಗಿದ್ದು, ಮೇಲ್ಮನೆಗೆ ಎರಡು ವಾರಗಳಲ್ಲಿ ಒಟ್ಟು 57 ಸಂಸದರ ಪ್ರವೇಶ ಆಗುತ್ತಿದೆ. ಇದು ರಾಜಕೀಯಕ್ಕೆ ಹೊಸ ರಂಗು ನೀಡಲಿದೆ ಎಂಬ ನಿರೀಕ್ಷೆ ಇದೆ. ನಾಲ್ಕೂ ರಾಜ್ಯಗಳಲ್ಲಿ ಮತಗಳ ಲೆಕ್ಕಾಚಾರ, ಮೈತ್ರಿಗೆ ಆದ್ಯತೆ ನೀಡಲಾಗಿದೆ. ಪ್ರತಿಪಕ್ಷಗಳ ಆಡಳಿತವಿರುವ ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ. ಏಕೆಂದರೆ ಅಲ್ಲಿ ಉಭಯ ಬಣಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ರೆಸಾರ್ಟ್ ರಾಜಕಾರಣ ನಡೆದಿದೆ.
ಚುನಾವಣಾ ಆಯೋಗ ನಾಲ್ಕು ರಾಜ್ಯಗಳಲ್ಲಿ ವೀಕ್ಷಕರನ್ನು ಸಜ್ಜುಗೊಳಿಸಿದೆ. ಇಡೀ ಪ್ರಕ್ರಿಯೆಗಳ ವಿಡಿಯೊ ಚಿತ್ರೀಕರಣ ನಡೆಯಲಿದೆ.
ಮಹಾರಾಷ್ಟ್ರದಲ್ಲಿ ಜಿದ್ದಾಜಿದ್ದಿ
ಮಹಾರಾಷ್ಟ್ರದಲ್ಲಿ 6 ರಾಜ್ಯಸಭೆ ಸೀಟುಗಳಿಗೆ ಚುನಾವಣೆ ನಡೆಯಲಿದೆ. ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಒಂದೆಡೆ ತಂತ್ರಗಾರಿಕೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ಪ್ರತಿಪಕ್ಷ ಬಿಜೆಪಿಯಲ್ಲೂ ಚಟುವಟಿಕೆ ಬಿರುಸಾಗಿದೆ. ಈ 6 ಸೀಟುಗಳಿಗೆ 7 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ 42 ಮತಗಳು ಬೇಕು. 288 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿ 106 ಶಾಸಕರನ್ನು ಹೊಂದಿದೆ. ಅದು ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೂರು ಸೀಟುಗಳನ್ನೂ ಗೆಲ್ಲುವ ಉತ್ಸಾಹದಲ್ಲಿದೆ.
ಬಿಜೆಪಿಯಿಂದ ಪಿಯೂಷ್ ಗೋಯೆಲ್, ಅನಿಲ್ ಬೋಂಡೆ, ಧನಂಜಯ್ ಮಹಾಧಿಕ್, ಎನ್‌ಸಿಪಿಯ ಪ್ರಫುಲ್ ಪಟೇಲ್, ಶಿವಸೇನೆಯ ಸಂಜಯ್ ರಾವತ್, ಕಾಂಗ್ರೆಸ್‌ನ ಇಮ್ರಾನ್ ಪ್ರತಾಪಗರಿ ಕಣದಲ್ಲಿದ್ದಾರೆ.
ಅಸಾದುದ್ದೀನ್ ಓವೈಸಿಯವರ ಎಐಎಂಐಎಂ, ಬಿಜೆಪಿಯನ್ನು ಸೋಲಿಸುವ ಸಲುವಾಗಿ ಆಡಳಿತಾರೂಢ ಮೈತ್ರಿಕೂಟವನ್ನು ಬೆಂಬಲಿಸಲು ನಿರ್ಧರಿಸಿದೆ.
ಜೈಲಿನಲ್ಲಿರುವ ಇಬ್ಬರಿಗೆ ಮತದಾನ ಮಿಸ್
ಭ್ರಷ್ಟಾಚಾರ ಕೇಸ್‌ನಲ್ಲಿ ಬಂಧಿತರಾಗಿರುವ ಇಬ್ಬರು ಎನ್‌ಸಿಪಿ ನಾಯಕರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಜಾಮೀನು ನಿರಾಕರಿಸಲಾಗಿದೆ. ಮಾಜಿ ಸಚಿವ ಅನಿಲ್ ದೇಶ್‌ಮುಖ್ ಮತ್ತು ಹಾಗೂ ಹಾಲಿ ಸಚಿವ ನವಾಬ್ ಮಲಿಕ್ ಅವರಿಗೆ ಮತದಾನಕ್ಕೆ ತೆರಳಲು ಜಾಮೀನು ಸಿಕ್ಕಿಲ್ಲ. ಅನಿಲ್ ದೇಶ್‌ಮುಖ್ ಮಾಜಿ ಗೃಹಸಚಿವರಾಗಿದ್ದರೆ, ನವಾಬ್ ಮಲಿಕ್ ಅಲ್ಪಸಂಖ್ಯಾತ ವ್ಯವಹಾರ ಮತ್ತು ಕೌಶಲಾಭಿವೃದ್ಧಿ ಸಚಿವರಾಗಿದ್ದಾರೆ. ಇಬ್ಬರೂ ಎನ್‌ಸಿಪಿಯ ನೇತಾರರಾಗಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಬಂಧಿತರಾಗಿದ್ದಾರೆ. ಮತ ಚಲಾಯಿಸಲು ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ನಿರಾಕರಿಸಿತ್ತು.
ಹರಿಯಾಣ
ಹರಿಯಾಣದ ಒಟ್ಟು 90 ಸೀಟುಗಳ ಅಸೆಂಬ್ಲಿಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು 57 ಶಾಸಕರನ್ನು ಹೊಂದಿವೆ. ಬಿಜೆಪಿಯಿಂದ ಮಾಜಿ ಸಚಿವ ಕೃಷನ್ ಲಾಲ್ ಪನ್ವಾರ್, ಕಾಂಗ್ರೆಸ್‌ನಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೇನ್ ಕಣದಲ್ಲಿದ್ದಾರೆ. ಬಿಜೆಪಿಯು ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರನ್ನೂ ಬೆಂಬಲಿಸಿದೆ. ಅಭ್ಯರ್ಥಿಗೆ ಗೆಲ್ಲಲು 31 ಮತ ಬೇಕು. ಕಾಂಗ್ರೆಸ್ 31 ಮತಗಳನ್ನು ಹೊಂದಿದೆ. ಕಾಂಗ್ರೆಸ್ ಅನ್ನು ಸೋಲಿಸಲು ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್‌ನ ಕೆಲ ಮತಗಳಿಲ್ಲದೆ ಶರ್ಮಾ ಗೆಲ್ಲುವುದು ಕಷ್ಟ.
ರಾಜಸ್ಥಾನದಲ್ಲಿ ರೆಸಾರ್ಟ್ ರಾಜಕಾರಣ
ರಾಜಸ್ಥಾನದಲ್ಲಿ 4 ಸೀಟುಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಎರಡು ಸೀಟುಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಸದನದಲ್ಲಿ 108 ಶಾಸಕರ ಬಲವನ್ನು ಹೊಂದಿದೆ. 71 ಶಾಸಕರ ಬಲ ಹೊಂದಿರುವ ಬಿಜೆಪಿ 1 ಸೀಟನ್ನು ಸುಲಭವಾಗಿ ಗೆಲ್ಲಬಹುದು. ಕಾಂಗ್ರೆಸ್ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಮತಗಳ ಕೊರತೆ ಎದುರಿಸುತ್ತಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಮುಕುಲ್ ವಾಸ್ನಿಕ್, ರಣ್‌ದೀಪ್ ಸುರ್ಜೇವಾಲಾ ಮತ್ತು ಪ್ರಮೋದ್ ತಿವಾರಿ ಕಣದಲ್ಲಿದ್ದಾರೆ. ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರ ಜತೆಗೆ ಸ್ವತಂತ್ರ ಅಭ್ಯರ್ಥಿ ಸುಭಾಷ್ ಚಂದ್ರ ಅವರನ್ನು ಬೆಂಬಲಿಸಿದೆ. ಬಿಜೆಪಿಗೆ ತನ್ನ 1 ಅಭ್ಯರ್ಥಿಯನ್ನು ಬೆಂಬಲಿಸಿದ ಬಳಿಕ ಹೆಚ್ಚುವರಿ 30 ಮತಗಳು ಉಳಿಯಲಿದೆ. ಅದು ಚಂದ್ರ ಅವರಿಗೆ ಹೋಗುವ ನಿರೀಕ್ಷೆ ಇದೆ. ಬಿಜೆಪಿಯ ಬೆಂಬಲದ ಹೊರತಾಗಿಯೂ ಚಂದ್ರ ಅವರಿಗೆ 8 ಮತಗಳ ಅಗತ್ಯ ಇದೆ. ಕಾಂಗ್ರೆಸ್ ತನ್ನ ಶಾಸಕರಿಗೆ ಉದಯ್‌ಪುರದ ರೆಸಾರ್ಟ್‌ನಲ್ಲಿ ಔತಣಕೂಟ ಏರ್ಪಡಿಸಿತ್ತು.
ಕರ್ನಾಟಕ
ಕರ್ನಾಟಕದಲ್ಲಿ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 4ನೇ ಸ್ಥಾನಕ್ಕೆ ಭಾರಿ ಪೈಪೋಟಿ ಏರ್ಪಟ್ಟಿದೆ. ಏಕೆಂದರೆ ನಾಲ್ಕನೇ ಸೀಟಿಗೆ ಮೂರೂ ಪ್ರಮುಖ ಪಕ್ಷಗಳಲ್ಲಿ ಮತಗಳ ಕೊರತೆ ಇದೆ. ಹೀಗಾಗಿ ಕುತೂಹಲ ಮೂಡಿಸಿದೆ. ಕರ್ನಾಟಕದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಜೈರಾಂ ರಮೇಶ್, ಮನ್ಸೂರ್ ಆಲಿ ಖಾನ್ ಹಾಗೂ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಸುಲಭವಾಗಿ 2 ಸ್ಥಾನಗಳನ್ನು ಗೆಲ್ಲಬಹುದು. 1 ಕಾಂಗ್ರೆಸ್‌ಗೆ ಸಿಗಬಹುದು. ಜೆಡಿಎಸ್‌ಗೆ ಸ್ವಂತ ಬಲದಲ್ಲಿ ಗೆಲ್ಲುವ ಶಕ್ತಿ ಇಲ್ಲ. ಹೀಗಾಗಿ ಮೂರನೇ ಅಭ್ಯರ್ಥಿಯಾಗಿ ಯಾರು ಗೆಲ್ಲಬಹುದು ಎಂಬ ಕುತೂಹಲ ಇದೆ. ಒಟ್ಟು 6 ಮಂದಿ ಕಣದಲ್ಲಿದ್ದಾರೆ.
ಬಿಜೆಪಿಗೆ ಮೇಲ್ಮನೆಯಲ್ಲಿ ಸೀಟುಗಳ ಶತಕ
ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 100 ದಾಟಿದೆ. 1990ರ ಬಳಿಕ ಈ ಸಾಧನೆ ಮಾಡಿರುವ ಪಕ್ಷ ಎಂಬ ಹೆಗ್ಗಳಿಕೆಗೆ ಪಕ್ಷ ಪಾತ್ರವಾಗಿದೆ. ರಾಷ್ಟ್ರಪತಿ ಚುನಾವಣೆಗೆ ಮುನ್ನ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.