ಅಹಮದಾಬಾದ್, ಗುಜರಾತ್: 2002ರ ಗುಜರಾತ್ ಹಿಂಸಾಚಾರ (2002 gujarat riots) ವೇಳೆಯ ಸಂಭವಿಸಿದ ನರೋಡಾ ಗಾಮ್ ಹತ್ಯಾಕಾಂಡದ 68 ಆರೋಪಿಗಳನ್ನು ಅಹಮದಾಬಾದ್‌ನ ವಿಶೇಷ ಕೋರ್ಟ್ ಗುರುವಾರ ಖುಲಾಸೆಗೊಳಿಸಿದೆ. ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿ ಹಾಗೂ ಬಜರಂಗ ದಳದ ನಾಯಕ ಬಾಬು ಬಜರಂಗಿ ಸೇರಿ 60ಕ್ಕೂ ಹೆಚ್ಚು ಆರೋಪಿಗಳು ನಿರ್ದೋಷಿಗಳೆಂದು ಕೋರ್ಟ್ ಹೇಳಿದೆ. 2002ರಲ್ಲಿ ಅಹಮದಾಬಾದ್ ನರೋಡಾ ಗಾಮ್ ಕೋಮು ದಂಗೆಯಲ್ಲಿ 11 ಮುಸ್ಲಿಮರ ಹತ್ಯೆಯಾಗಿತ್ತು. ಅಲ್ಲದೇ ಅವರ ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು(Naroda Gam Massacre).
2017ರಲ್ಲಿ ಕೋರ್ಟ್‌ಗೆ ಹಾಜರಾಗಿದ್ದ ಗೃಹ ಸಚಿವ ಅಮಿತ್ ಶಾ ಅವರು ಮಾಯಾ ಕೊಡ್ನಾನಿ ಪರವಾಗಿ ಸಾಕ್ಷ್ಯ ನುಡಿದಿದ್ದರು. 2002ರಲ್ಲಿ ಗುಜರಾತ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಸ್ತಿತ್ವದಲ್ಲಿತ್ತು. ಮಾಯಾ ಕೊಡ್ನಾನಿ ಅವರು ಮೋದಿ ಸಂಪುಟದಲ್ಲಿ ಸಚಿವೆಯಾಗಿದ್ದರು. ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದ ಎಲ್ಲ ಆರೋಪಿಗಳು ಖುಲಾಸೆಯಾಗಿದ್ದಾರೆ. ತೀರ್ಪಿನ ಪ್ರತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಆರೋಪಿಗಳ ಪರ ವಕೀಲ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ಗಲಭೆ ಕೇಸ್‌ನಲ್ಲಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ಕೊಟ್ಟಿದ್ದ ಸುಪ್ರೀಂ ನ್ಯಾಯಮೂರ್ತಿ ನಿವೃತ್ತಿ
ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಲ್ಲಿ ಖುಲಾಸೆಯಾಗಿರುವ ಮಾಯಾ ಕೊಡ್ನಾನಿ, 97 ಜನರ ಹತ್ಯೆಗೆ ಕಾರಣವಾದ ನರೋಡಾ ಪಟಿಯಾ ದಂಗೆ ಪ್ರಕರಣದಲ್ಲಿ ದೋಷಿಯಾಗಿದ್ದರು ಮತ್ತು 28 ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದರು. ಆದರೆ, ಬಳಿಕ ಗುಜರಾತ್ ಹೈಕೋರ್ಟ್ ಅವರನ್ನು ಬಿಡುಗಡೆ ಮಾಡಿತ್ತು.
2002ರ ಕೋಮು ದಂಗೆ ವೇಳೆ ನಡೆದ 9 ಭೀಕರ ಹತ್ಯಾಕಾಂಡಗಳ ಪೈಕಿ ನರೋಡಾ ಗಾಮ್ ಕೂಡ ಒಂದಾಗಿದೆ. ಈ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡವು ತನಿಖೆ ಮಾಡಿತ್ತು ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಲ್ಲಿ ಒಟ್ಟು 80 ಆರೋಪಿಗಳನ್ನು ಹೆಸರಿಸಲಾಗಿತ್ತು. ಈ ಪೈಕಿ 20 ಆರೋಪಿಗಳು ವಿಚಾರಣೆ ಹಂತದಲ್ಲೇ ಮೃತಪಟ್ಟಿದ್ದಾರೆ.