ನವದೆಹಲಿ: ಧಾರ್ಮಿಕ ಅಲ್ಪಸಂಖ್ಯಾತರನ್ನು ಒಳಗೊಳ್ಳುವ ಕ್ರಮಗಳಿಗೆ ಸಂಬಂಧಿಸಿದಂತೆ 110 ರಾಷ್ಟ್ರಗಳ ಪೈಕಿ ಭಾರತವು ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ. ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್(CPA Report) ಜಾಗತಿಕ ಅಲ್ಪಸಂಖ್ಯಾತರ ಮೇಲಿನ ಮೊದಲ ಮೌಲ್ಯಮಾಪನ ವರದಿಯನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಭಾರತವು ತನ್ನ ಕ್ರಮಗಳಿಂದಾಗಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಆಸ್ಟ್ರೇಲಿಯಾ ಟುಡೇ(Australia Today) ವರದಿ ಮಾಡಿದೆ.
ಒಟ್ಟು 110 ರಾಷ್ಟ್ರಗಳಲ್ಲಿನ ಅಲ್ಲಸಂಖ್ಯಾತರ ಕುರಿತು ಮೌಲ್ಯ ಮಾಪನ ವರದಿಯನ್ನು ತಯಾರಿಸಲಾಗಿದ್ದು, ಈ ಪೈಕಿ ಇಂಡಿಯಾ, ಪನಾಮಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿವೆ. ಇನ್ನು ಕೊನೆಯ ಸ್ಥಾನಗಳಲ್ಲಿ ಮಾಲ್ಡೀವ್ಸ್, ಅಫಘಾನಿಸ್ತಾನ ಮತ್ತು ಸೋಮಾಲಿಯಾಗಳಿವೆ. 54 ಮತ್ತು 61ನೇ ಸ್ಥಾನದಲ್ಲಿ ಕ್ರಮವಾಗಿ ಇಂಗ್ಲೆಂಡ್ ಹಾಗೂ ಯುಎಇಗಳಿವೆ. ಭಾರತದ ಅಲ್ಪಸಂಖ್ಯಾತ ನೀತಿಯು ವೈವಿಧ್ಯತೆಯನ್ನು ಬೆಳೆಸುವ ಕಾರ್ಯತಂತ್ರದ ಮೇಲೆ ರೂಪಿಸಲ್ಪಟ್ಟಿದೆ ಎಂದು ಸಿಪಿಎ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Vistara Explainer: ಇಸ್ಲಾಮಿಕ್ ದೇಶಗಳ ಅಧಿಕ ಪ್ರಸಂಗ!
ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣ ಎರಡರಲ್ಲೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ವಿಶಿಷ್ಟ ಮತ್ತು ವಿಶೇಷ ವಿಧಿಗಳನ್ನು ಹೊಂದಿದೆ. ಉಳಿದ ದೇಶಗಳ ಯಾವುದೇ ಸಂವಿಧಾನವು ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಬೆಂಬಲಕ್ಕೆ ಸ್ಪಷ್ಟವಾದ ಖಾತರಿಗಳನ್ನು ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬೇರೆ ಇತರ ದೇಶಗಳಿಗೆ ಹೋಲಿಸಿದರೆ, ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ ಎಂದು ವರದಿ ಮೆಚ್ಚುಗೆ ವ್ಯಕ್ತಪಡಿಸಿದೆ.