Site icon Vistara News

Independence Day 2023: ಈ ದೇಶ ನಮ್ಮದು! ಹೆಮ್ಮೆಯ ಅಲೆ ತುಳುಕಾಡಿಸುವ ಈ ಚಿತ್ರಗಳನ್ನು ಇಂದೇ ನೋಡಿ!

independence day

ಕಳೆದ 76 ವರ್ಷಗಳಲ್ಲಿ, ಹಿಂದಿಯಲ್ಲೂ ಇತರ ಭಾಷೆಗಳಲ್ಲೂ ದೇಶಭಕ್ತಿಯ (patriotism) ಕತೆ ಹೊಂದಿರುವ, ಅದನ್ನು ಉತ್ತೇಜಿಸುವ ಅನೇಕ ಸಿನಿಮಾಗಳು ಬಂದಿವೆ. ಭಾರತವೆಂಬ ರಾಷ್ಟ್ರದ ಘನತೆ ಹಿರಿಮೆಗಳನ್ನು ಎತ್ತಿ ಹಿಡಿಯುವ, ನಮಗೆ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಸುವ ಸಿನಿಮಾಗಳು ಇವು. ಹಕೀಕತ್ (1995), ಬಾರ್ಡರ್ (1997) ನಂತಹ ಯುದ್ಧ ಚಿತ್ರಗಳಿಂದ ಹಿಡಿದು ಮೆಹಬೂಬ್ ಖಾನ್ ಅವರ ಅದ್ಭುತ ಕೃತಿ ಮದರ್ ಇಂಡಿಯಾ (1957), ಹಾಗೆಯೇ ಭಾಗ್ ಮಿಲ್ಕಾ ಭಾಗ್ (2013) ಮತ್ತು ದಂಗಲ್ (2016) ನಂತಹ ಕ್ರೀಡಾ ಚಲನಚಿತ್ರಗಳವರೆಗೆ ಇಲ್ಲಿ ಕಥಾವಸ್ತುಗಳ ಕೊರತೆಯಿಲ್ಲ. ವೀಕ್ಷಕರಲ್ಲಿ ದೇಶಪ್ರೇಮವನ್ನು ಅರಳಿಸುವ, ಉತ್ತಮ ಕಥಾವಸ್ತುವನ್ನು ಹೊಂದಿರುವ, ನಾವು ಹೆಮ್ಮೆಯಿಂದ ಎದೆಯುಬ್ಬಿಸುವಂತೆ ಮಾಡುವ ಈ ಕೆಲವು ಚಲನಚಿತ್ರಗಳನ್ನು (patriotic films) ನೀವು ಈ ಸ್ವಾತಂತ್ರ್ಯ ದಿನದ (Independence Day 2023) ಹಿನ್ನೆಲೆಯಲ್ಲಿ ನೋಡಬಹುದು.

ರಾಝಿ

ಗುಲ್ಜಾರ್ ಬರೆದ “ಏ ವತನ್ ವತನ್ ಮೇರೆ ಅಬದ್ ರಹೇ ತು” ಹಾಡು ನೆನಪಿದೆಯೇ? ನೀವು ಯಾವ ಗಡಿಯ ಒಳಗಿದ್ದೀರಿ ಎಂಬುದರ ಆಧಾರದಲ್ಲಿ ನಿಮ್ಮ “ವತನ್” ಭಾರತವಾಗಿರಬಹುದು ಅಥವಾ ಪಾಕಿಸ್ತಾನವಾಗಿರಬಹುದು. ಮೇಘನಾ ಗುಲ್ಜಾರ್ ಅವರ ನಿರ್ದೇಶಿಸಿದ ʼರಾಝಿʼಯಲ್ಲಿ ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ನಟಿಸಿದ್ದಾರೆ. ದೇಶವನ್ನು ಪ್ರೀತಿಸುವ ವಿಷಯಕ್ಕೆ ಬಂದಾಗ ಅದು ಏಕಪಕ್ಷೀಯ ದೃಷ್ಟಿಕೋನವಾಗಿರಬಾರದು ಎಂಬುದನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರೀಯತೆ ಮತ್ತು ತೀವ್ರವಾದದ ನಡುವಿನ ಗೆರೆಯನ್ನು ತೋರಿಸುವಲ್ಲಿ ಇದು ಯಶಸ್ವಿಯಾಗಿದೆ.

ಆರ್ಟಿಕಲ್‌ 15

ಭಾರತದ ಸಂವಿಧಾನದ 15ನೇ ವಿಧಿಯು (Article 15) ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಆದರೆ ಅನುಭವ ಸಿನ್ಹಾ ನಿರ್ದೇಶನದ ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಕಂಡುಕೊಳ್ಳುವ ವಾಸ್ತವವು ಭಿನ್ನವಾಗಿದೆ. ಮೂವರು ಕೆಳಜಾತಿಯ ಹುಡುಗಿಯರ ಹತ್ಯೆಯನ್ನು ತನಿಖೆ ಮಾಡಲು ಹೊರಡುವ ಪೊಲೀಸ್ ಅಧಿಕಾರಿಯೊಬ್ಬ, ಸಮಾಜದಲ್ಲಿರುವ ಅಸಮಾನತೆಯ ಜಾಲಕ್ಕೆ ಸಿಕ್ಕಿಹಾಕಿಕೊಳ್ಳುತ್ತಾನೆ. ಸ್ವಾತಂತ್ರ್ಯ ಬಂದು ವರ್ಷಗಳೇ ಕಳೆದರೂ ದೇಶ ಎದುರಿಸುತ್ತಿರುವ ಸಮಸ್ಯೆಯನ್ನು ಎತ್ತಿ ತೋರಿಸಿದ್ದಕ್ಕಾಗಿ ಚಿತ್ರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ವದೇಸ್

ಅಶುತೋಷ್ ಗೋವಾರಿಕರ್ ಅವರ ಈ ಚಿತ್ರ (Swades movie) ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತು. ಚಲನಚಿತ್ರದಲ್ಲಿ ಶಾರುಖ್ ಖಾನ್ ನಾಸಾ ವಿಜ್ಞಾನಿಯಾಗಿ ನಟಿಸಿದ್ದಾರೆ. ಈತ ಊರಿಗೆ ಮರಳುತ್ತಾನೆ. ಪ್ರೇಕ್ಷಕರು ತಮ್ಮ ದೃಷ್ಟಿಯನ್ನು ಒಳಮುಖವಾಗಿ ತಿರುಗಿಸಲು, ತಾವು ಕಾಣುತ್ತಿರುವ ಅನೇಕ ಸಮಸ್ಯೆಗಳ ವಾಸ್ತವತೆಯನ್ನು ಅರ್ಥಮಾಡಿಕೊಳ್ಳಲು ಒತ್ತಾಯಿಸುವ ಅಪರೂಪದ ಚಲನಚಿತ್ರಗಳಲ್ಲಿ ಸ್ವದೇಸ್ ಒಂದು. ತನ್ನ ದೇಶವು ಅತ್ಯುತ್ತಮ ಎಂದು ನಾಯಕ ಇಲ್ಲಿ ಹೇಳದಿದ್ದರೂ, ಇದು ಅತ್ಯುತ್ತಮವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳುತ್ತಾನೆ. ಅದನ್ನೇ ಸಾಧಿಸುತ್ತಾನೆ.

ಮಿಷನ್‌ ಮಂಗಲ್‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳ ತಂಡವು ಮಂಗಳನ ಕಕ್ಷೆಗೆ ಉಪಗ್ರಹವನ್ನು ಕಳುಹಿಸುವ ಕಾರ್ಯವನ್ನು ಕೈಗೆತ್ತಿಕೊಂಡ ನಂತರದ ಘಟನೆಗಳ (mission mangal) ಚಿತ್ರವಿದು. ಇಲ್ಲಿ ಕೇವಲ ತಾಂತ್ರಿಕ ಅಡಚಣೆಗಳಷ್ಟೇ ಇಲ್ಲ. ನೈಜ ಘಟನೆಗಳನ್ನು ಆಧರಿಸಿ ಬರಹಗಾರ-ನಿರ್ದೇಶಕ ಜಗನ್ ಶಕ್ತಿ ನೀಡಿದ ಈ ಚಲನಚಿತ್ರ 2014ರ ಮಾರ್ಸ್ ಆರ್ಬಿಟರ್ ಮಿಷನ್‌ನ ಅನ್ನು ಆಧರಿಸಿದೆ. ಐವರು ಮಹಿಳಾ ವಿಜ್ಞಾನಿಗಳ ತಂಡದ ನೇತೃತ್ವದ ಈ ಕಾರ್ಯಾಚರಣೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಸೆಲೆಬ್ರೇಟ್‌ ಮಾಡಲು ನಿಮ್ಮನ್ನು ಹುರಿದುಂಬಿಸದೇ ಇರದು.

ಲಕ್ಷ್ಯ

2004ರಲ್ಲಿ ಬಿಡುಗಡೆಯಾದಾಗ ಇದರ ಬಾಕ್ಸ್ ಆಫೀಸ್ ಸಾಧನೆ ನೀರಸವಾಗಿತ್ತು. ಆದರೆ ನಂತರ ಈ ಚಿತ್ರ ಕಲ್ಟ್‌ ಸ್ಥಾನಮಾನ ಪಡೆದುಕೊಂಡಿದೆ. ದಿಲ್ ಚಾಹ್ತಾ ಹೈ (2001) ಪ್ರಚಂಡ ಯಶಸ್ಸಿನ ನಂತರ ಫರ್ಹಾನ್ ಅಖ್ತರ್‌ನ ಎರಡನೇ ನಿರ್ದೇಶನದ ಲಕ್ಷ್ಯ, ಹೃತಿಕ್ ರೋಷನ್ ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದು. ಪೋಲಿಬಿದ್ದ ಯುವಕ ಸೈನ್ಯಕ್ಕೆ ಸೇರಿದಾಗ ತನ್ನ ಜೀವನದ ಉದ್ದೇಶವನ್ನು ಕಂಡುಕೊಳ್ಳುವ ಮತ್ತು ನಂತರದ ಕಥೆ ಕೇವಲ ಯುದ್ಧದ ಕಥೆಯಲ್ಲ.

ಗುಂಜನ್‌ ಸಕ್ಸೇನಾ: ದಿ ಕಾರ್ಗಿಲ್‌ ಗರ್ಲ್‌

ಗುಂಜನ್‌ ಸಕ್ಸೇನಾ ದೇಶದ ಮೊದಲ ಮಹಿಳಾ ಯುದ್ಧ ಪೈಲಟ್ ಆದವಳು, ಅದರಲ್ಲೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸುವ ಮೂಲಕ. ಚಲನಚಿತ್ರವು ರಾಷ್ಟ್ರಾಭಿಮಾನ ಹೆಚ್ಚಿಸುವುದರ ಜತೆಗೆ ಸ್ತ್ರೀ ಸಬಲೀಕರಣದ ಸಂಕೇತವಾಗಿಯೂ ಮೂಡಿಬಂದಿದೆ. ನಿರ್ಮಾಪಕ ಶರಣ್ ಶರ್ಮಾ ಅವರ ಈ ಚೊಚ್ಚಲ ಚಿತ್ರದಲ್ಲಿ, ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿರುವ ಗುಂಜನ್ ಸಕ್ಸೇನಾ, ಲಿಂಗ ತಾರತಮ್ಯದಿಂದ ಅಧೀರಗೊಂಡಿರುವ ಆಕೆಗೆ ತಂದೆ ನೀಡುವ ಉತ್ತರ- ಜನರು ತಮ್ಮ ಕರ್ತವ್ಯಗಳನ್ನು ಪೂರೈಸುತ್ತಿರುವವರೆಗೂ ಈ ದೇಶಕ್ಕೆ ದೇಶಭಕ್ತರ ಕೊರತೆಯಿರುವುದಿಲ್ಲ.

ಚಕ್‌ ದೇ! ಇಂಡಿಯಾ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹಾಕಿ ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಗೋಲ್‌ಕೀಪರ್ ಎದುರಾಳಿ ತಂಡದ ಏಟು ತಡೆದು ಭಾರತದ ಗೆಲುವನ್ನು ಸಾಧಿಸುವಾಗ, ರಾಷ್ಟ್ರಧ್ವಜವನ್ನು ಹೆಮ್ಮೆ ಮತ್ತು ಕೃತಜ್ಞತೆಯಿಂದ ನೋಡುತ್ತಿರುವಾಗ ಕೋಚ್ ಕಬೀರ್ ಖಾನ್ (ಶಾರುಖ್ ಖಾನ್) ಕಣ್ಣುಗಳು ಕಣ್ಣೀರಿನಿಂದ ತುಂಬುತ್ತವೆ. ಶಿಮಿತ್ ಅಮೀನ್ ಅವರ ಚಲನಚಿತ್ರ, ನಮ್ಮ ದೇಶದ ಸಾಧನೆಗಳ ಬಗ್ಗೆ ನಮ್ಮಲ್ಲಿ ಅಪಾರ ಹೆಮ್ಮೆಯನ್ನು ತುಂಬುತ್ತದೆ.

ರಂಗ್‌ ದೇ ಬಸಂತಿ

ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ ರಂಗ್‌ ದೇ ಬಸಂತಿ (Rang De Basanti) 16 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದರೂ ಇಂದಿಗೂ ಪ್ರಸ್ತುತವಾಗಿದೆ. ಐವರು ಗೆಳೆಯರ ಕಥೆ ರಾಷ್ಟ್ರದ ಸಮಷ್ಟಿ ಪ್ರಜ್ಞೆಯನ್ನು ಮೆಲುಕು ಹಾಕುತ್ತದಲ್ಲದೆ, ದೇಶದ ಯುವಜನತೆಗೆ ಎಚ್ಚರಿಕೆಯ ಗಂಟೆಯೂ ಆಗಿತ್ತು. ಸಾಮಾಜಿಕ ಸಂದೇಶದ ಜತೆಜತೆಗೆ ಇದು ಮನರಂಜನೆಯತ್ತಲೂ ಸಾಕಷ್ಟು ಗಮನವಿಟ್ಟಿದೆ. ಅಮೀರ್ ಖಾನ್, ಮಾಧವನ್ ಮತ್ತು ಶರ್ಮನ್ ಜೋಶಿಯಂತಹ ತಾರೆಯರು ಇದಕ್ಕೆ ಶಕ್ತಿ ತುಂಬಿದ್ದಾರೆ.

ಲಗಾನ್‌

ಅಶುತೋಷ್ ಗೋವಾರಿಕರ್ ಅವರ ಈ ಚಿತ್ರದಲ್ಲೂ ಯುದ್ಧವಿದೆ; ಆದರೆ ಈ ಯುದ್ಧ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತದೆ. ಸ್ವಾತಂತ್ರ್ಯಪೂರ್ವ ಭಾರತದ ಕತೆ ಹೊಂದಿರುವ ಲಗಾನ್, ಭಾರತದ ಹಳ್ಳಿಯೊಂದರ ಯುವಕರು ವಸಾಹತುಶಾಹಿ ಬ್ರಿಟಿಷರನ್ನು ಅವರದೇ ಕ್ರಿಕೆಟ್‌ ಆಟದಲ್ಲಿ ಮಣಿಸುವುದನ್ನು ಚಿತ್ರ ತೋರಿಸುತ್ತದೆ. ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ವಿಭಾಗದಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತ್ತು.

ಎ ವೆನ್ಸ್‌ಡೇ

ನೀರಜ್ ಪಾಂಡೆ ನಿರ್ದೇಶನದ ಈ ಚಿತ್ರದ ʼಕಾಮನ್‌ ಮ್ಯಾನ್‌ʼ, ದೇಶದ ವ್ಯವಸ್ಥೆ ಮತ್ತು ಅದರ ಭ್ರಷ್ಟಾಚಾರದಿಂದ ಬೇಸತ್ತು ಕಾನೂನನ್ನು ತನ್ನ ಕೈಯಲ್ಲಿ ತೆಗೆದುಕೊಳ್ಳುವವನು. ಇದು ಕಾಲ್ಪನಿಕ ಕೃತಿಯಾಗಿದ್ದರೂ ಸಹ, 11 ಜುಲೈ 2006ರ ಮುಂಬೈ ರೈಲು ಬಾಂಬ್ ದಾಳಿಯಿಂದಲೂ ಇದು ಭಾಗಶಃ ಸ್ಫೂರ್ತಿ ಪಡೆದಿದೆ. ಇಬ್ಬರು ಮಹಾನ್‌ ನಟರ (ಅನುಪಮ್‌ ಖೇರ್‌, ನಸೀರುದ್ದೀನ್‌ ಶಾ) ನಟನೆಯಿಂದ ಚಿತ್ರ ಗೆಲ್ಲುತ್ತದೆ.

ಇದನ್ನೂ ಓದಿ: Independence Day 2023: ಸ್ವಾತಂತ್ರ್ಯೋತ್ಸವ ದಿನ ನೋಡಲೇಬೇಕಾದ ಕನ್ನಡ ಚಿತ್ರಗಳಿವು

Exit mobile version