ನಾವೀಗ 77ನೇ ಸ್ವಾತಂತ್ರ್ಯೋತ್ಸವನ್ನು (Independence Day 2023) ಆಚರಿಸುವ ಸಂದರ್ಭದಲ್ಲಿದ್ದೇವೆ. ಬ್ರಿಟಿಷರ ಗುಲಾಮಗಿರಿಯನ್ನು ಕಿತ್ತೆಸೆದು ನಮ್ಮದೇ ಆದ ಸ್ವರಾಜ್ಯ, ಸುರಾಜ್ಯ ಸ್ಥಾಪನೆಯ ತನಕ ಅನೇಕ ಮಹನೀಯರು ತಮ್ಮ ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ. ಈ ಸ್ವಾತಂತ್ರ್ಯೋತ್ಸವದ ವೇಳೆ ಅವರನ್ನೆಲ್ಲ ನೆನೆಯುವುದು ನಮ್ಮ ಕರ್ತವ್ಯವೂ ಹೌದು. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ (1857 freedom movement) ಹಿಡಿದು ಕ್ವಿಟ್ ಇಂಡಿಯಾ ಚಳವಳಿ (Quit India Moivement) ತನಕ ಭಾರತವು ಅನೇಕ ಹೋರಾಟಗಳನ್ನು ಕಂಡಿದೆ. ಕ್ರಾಂತಿಕಾರಿಗಳ ಬಂದೂಕಿನ ಶಬ್ದದಿಂದ ಹಿಡಿದು ನಾಗರಿಕ ಅಸಹಕಾರ ಚಳವಳಿ ಹಾಗೂ ಪಾದಯಾತ್ರೆಗಳರೆಗೂ ಭಾರತವು ಸಾಕ್ಷಿಯಾಗಿದೆ. ಆದರೆ, ಭಾರತದ ಒಟ್ಟು ಸ್ವಾತಂತ್ರ್ಯ ಚಳವಳಿಗೆ ನಿರ್ದಿಷ್ಟ ದಿಕ್ಕು ಮತ್ತು ಮುಂದಾಳತ್ವವನ್ನು ಮಹಾತ್ಮ ಗಾಂಧಿ ಅವರು ವಹಿಸಿದರು. ಹೋರಾಟದ ನೇತೃತ್ವವನ್ನು ವಹಿಸಿದ್ದ ಕಾಂಗ್ರೆಸ್‌ಗೆ ನಾಯಕತ್ವವನ್ನು ಒದಗಿಸಿದ ಗಾಂಧಿ, ತಾವು ನಂಬಿದ ತತ್ವ- ಸಿದ್ಧಾಂತಗಳಲ್ಲಿ ಹಾದಿಯಲ್ಲಿ ಸಾಗಿ ಅಂತಿಮವಾಗಿ ಜಯವನ್ನು ತಂದಿತ್ತರು. ಅವರನ್ನು ಆಧರಿಸಿ ಅವರ ದಾರಿಯಲ್ಲಿ ಸಾಗಿದವರು ಕೋಟ್ಯಂತರ ಜನರು. ಖಂಡಿತವಾಗಿಯೂ ಈ ಸ್ವಾತಂತ್ರ್ಯ ದಿನದಂದು ಗಾಂಧಿಯಾದಿಯಾಗಿ ಎಲ್ಲ ಹೋರಾಟಗಾರರನ್ನು ಸ್ಮರಿಸುವ ಅಪೂರ್ವ ಅವಕಾಶವಿದು. ಬನ್ನಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ತಿಳಿದುಕೊಳ್ಳೋಣ.
ರಾಷ್ಟ್ರಪಿತ ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ (Mahatma Gandhi) ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು 27 ವರ್ಷಗಳ ಕಾಲ ಮುನ್ನಡೆಸಿದ ಮಹಾನ್ ಚೇತನ. ಮಹಾತ್ಮ ಗಾಂಧಿ ಎಂದು ಖ್ಯಾತರಾದ ಮೋಹನದಾಸ್ ಕರಮಚಂದ್ ಗಾಂಧಿ ಅವರು 1869 ಅಕ್ಟೋಬರ್ 2ರಂದು ಜನಿಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾಕಷ್ಟು ತ್ಯಾಗ ಮಾಡಿರುವ ಗಾಂಧಿ, ಇಡೀ ದೇಶವನ್ನು ಒಗ್ಗೂಡಿಸಿ ಬ್ರಿಟಿಷ್ ವಿರುದ್ಧ ಹೋರಾಡಿದ್ದು ಅವರ ಹೆಗ್ಗಳಿಕೆ. ಸತ್ಯ, ಅಹಿಂಸೆ, ಸತ್ಯಾಗ್ರಹದ ಮೂಲಕ ದೇಶವನ್ನು ಬಂಧಮುಕ್ತ ಮಾಡುವುದರಲ್ಲಿ ಗಾಂಧಿಯವರ ಕೊಡುಗೆ ಅನನ್ಯವಾಗಿದೆ. ಅದೇ ಕಾರಣಕ್ಕೆ ಅವರನ್ನು ಜನರು ಪ್ರೀತಿಯಿಂದ ರಾಷ್ಟ್ರಪಿತ ಎಂದು ಕರೆಯುತ್ತಾರೆ. ಗಾಂಧಿ ಅವರ ಹೋರಾಟವು ಅನೇಕ ರಾಷ್ಟ್ರಗಳ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿದೆ. ದಂಡಿ ಯಾತ್ರೆ, ಕ್ವಿಟ್ ಇಂಡಿಯಾ ಚಳವಳಿಗಳು ಗಾಂಧಿ ಅವರ ಪ್ರಮುಖ ಹೋರಾಟಗಳು. ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧಿ ಅವರನ್ನು 1948 ಜನವರಿ 30ರಂದು ಗುಂಡಿಕ್ಕಿ ಹತ್ಯೆ ಮಾಡಿದನು. ಆದರೆ, ಅವರ ವಿಚಾರಗಳು ಇಂದಿಗೂ ಭಾರತವನ್ನು ಮುನ್ನಡೆಸುತ್ತಿವೆ.
ಪಂಡಿತ ಜವಾಹರ್ ಲಾಲ್ ನೆಹರು
ಪಂಡಿತ ಜವಾಹರ್ ಲಾಲ್ ನೆಹರು (pandit jawaharlal nehru) ಅವರು ಸುಪ್ರಸಿದ್ಧ ವಕೀಲರು ಮತ್ತು ಚಿಂತಕರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಅಗ್ರಗಣ್ಯರು. ನೆಹರು ಅವರು 1889ರ ನವೆಂಬರ್ 14ರಂದು ಜನಿಸಿದರು. ತಂದೆ ಮೋತಿಲಾಲ್ ನೆಹರು ಹಾಗೂ ತಾಯಿ ಸ್ವರೂಪಾ ರಾಣಿ. 1930ರ ಬಳಿಕ ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಬಂದರು. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಬಾರಿ ಜೈಲುವಾಸ ಕಂಡಿದ್ದಾರೆ. ವಿದೇಶದಲ್ಲಿ ಶಿಕ್ಷಣ ಪಡೆದಿದ್ದ ನೆಹರು ಅವರಿಗೆ ಜಗತ್ತಿನ ಸಮಕಾಲಿನ ರಾಜಕಾರಣದಳ ಒಳ ಹೊರಗುಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಇತ್ತು, ದೂರದೃಷ್ಟಿ ಇತ್ತು. ಜತೆಗೆ, ಸ್ವತಂತ್ರ ಭಾರತವನ್ನು ಪ್ರಗತಿಯತ್ತ ಯಾವ ರೀತಿ ಮುನ್ನಡೆಸಬೇಕೆಂಬ ಕಲ್ಪನೆಗಳಿದ್ದವು. ಈ ಗುಣಗಳೇ ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗುವಂತೆ ಮಾಡಿದವು. ನೆಹರು ಪ್ರಧಾನಿಯಾದ ಬಳಿಕ ಆಧುನಿಕ ಭಾರತದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು. ಸುಮಾರು 17 ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದಿದ್ದಾರೆ. ಜವಾಹರ್ ಲಾಲ್ ನೆಹರು ಅವರ ನವೆಂಬರ್ 14 ಅನ್ನು ಮಕ್ಕಳ ದಿನವಾಗಿ ಭಾರತದಲ್ಲಿಆಚರಣೆ ಮಾಡಲಾಗುತ್ತದೆ.
ಸರ್ದಾರ್ ವಲ್ಲಭ್ ಭಾಯ್ ಪಟೇಲ್
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮತ್ತೊಬ್ಬ ನಾಯಕರು ಇವರು(sardar vallabhbhai patel). ಭಾರತದ ಉಕ್ಕಿನ ಮನುಷ್ಯ ಮತ್ತು ಭಾರತದ ಬಿಸ್ಮಾರ್ಕ್ ಎಂದೇ ಕರೆಯುತ್ತಾರೆ. ರಾಜಮನೆತನಗಳಲ್ಲಿ ಹಂಚಿ ಹೋಗಿದ್ದ ಭಾರತವನ್ನು ಗೃಹ ಸಚಿವರಾಗಿ ಒಂದುಗೂಡಿಸಿದರು. ಅಂದಿನ ಅವರ ಪ್ರಯತ್ನಗಳ ಫಲವಾಗಿ ಇಂದು ಭಾರತವು ಒಂದಾಗಿ ಉಳಿಯಲು ಕಾರಣವಾಗಿದೆ. ಸ್ವತಂತ್ರ ಸಿಕ್ಕಾಗ ಹಲವು ರಾಜಮನೆಗಳು ಸ್ವತಂತ್ರ ಭಾರತದ ಒಕ್ಕೂಟದೊಂದಿಗೆ ವಿಲೀನಗೊಳ್ಳಲು ಹಿಂದೇಟು ಹಾಕಿದವು. ಅಂಥ ರಾಜಮನೆತಗಳ ಜತೆಗೆ ಮಾತುಕತೆ ಅಥವಾ ಸೇನಾ ಪ್ರಯೋಗದ ಮೂಲಕ ಒಕ್ಕೂಟದೊಂದಿಗೆ ವಿಲೀನಗೊಳಿಸುವಲ್ಲಿ ಅವರು ಯಶಸ್ವಿಯಾದರು. ಕೇಂದ್ರ ಗೃಹ ಸಚಿವರಾಗಿ, ಉಪ ಪ್ರಧಾನಿಯಾಗಿ ಸರ್ದಾರ್ ಪಟೇಲ್ ಸೇವೆ ಸಲ್ಲಿಸದ್ದಾರೆ. 1875 ಅಕ್ಟೋಬರ್ 31ರಂದು ಜನಿಸಿದ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರು 1950 ಡಿಸೆಂಬರ್ 15ರಂದು ನಿಧನರಾದರು.
ನೇತಾಜಿ ಸುಭಾಶ್ ಚಂದ್ರ ಬೋಸ್
ಮಹಾತ್ಮ ಗಾಂಧಿ ಅವರನ್ನು ರಾಷ್ಟ್ರಪಿತ ಎಂದು ಪ್ರೀತಿಯಿಂದ ಕರೆದ ನೇತಾಜಿ ಸುಭಾಶ್ ಚಂದ್ರ ಬೋಸ್ (netaji subhas chandra bose) ಅವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಪ್ರತ್ಯೇಕ ಕಾಣಿಕೆಯನ್ನು ನೀಡಿದ್ದಾರೆ. ಆ ಮೂಲಕ ಅಂದು ಲಕ್ಷಾಂತರ ಭಾರತೀಯರು ಸಂಗ್ರಾಮದಲ್ಲಿ ಪಾಲ್ಗೊಳ್ಳಲು ಪ್ರೇರಣೆಯಾದರು. ಆಜಾದ್ ಹಿಂದ್ ಫೌಜ್ ಸ್ಥಾಪಿಸಿ ಬ್ರಿಟಿಷರ ವಿರುದ್ಧ ಸಶಸ್ತ್ರ ಬಂಡಾಯವನ್ನು ಹೂಡಿದರು. ಮೊದಲು ಕಾಂಗ್ರೆಸ್ ಮೂಲಕವೇ ಹೋರಾಟದಲ್ಲಿ ಪಾಲ್ಗೊಂಡರಾದರೂ ಗಾಂಧಿ ಮಾರ್ಗ ಅವರಿಗೆ ಹಿಡಿಸಲಿಲ್ಲ. ಸ್ವಾತಂತ್ರ್ಯವನ್ನು ಅಹಿಂಸಾ ಮಾರ್ಗದ ಬದಲಿಗೆ ಸಶಸ್ತ್ರದ ಹೋರಾಟದ ಮೂಲಕವೇ ಗಳಿಸಬೇಕೆಂದು ಪ್ರಬಲವಾಗಿ ಪ್ರತಿಪಾದಿಸಿದರು ಮತ್ತು ಅದೇ ನಿಟ್ಟಿನಲ್ಲಿ ನಡೆದರು. ಅದರ ಫಲವಾಗಿ ಅವರು ಆಜಾದ್ ಹಿಂದ್ ಸೇನೆಯನ್ನು ಕಟ್ಟಿದರು. ಹಾಗಾಗಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುಭಾಶ್ ಚಂದ್ರ ಭೋಸರದ್ದು ಮಹತ್ವದ ಪಾತ್ರವಿದೆ. ಆ ಕಾರಣಕ್ಕಾಗಿಯೇ ಜನರು ಅವರನ್ನು ಪ್ರೀತಿಯಿಂದ ನೇತಾಜಿ ಎಂದು ಕರೆಯುತ್ತಿದ್ದರು.
ಕ್ರಾಂತಿಯ ಕಿಡಿ ಭಗತ್ ಸಿಂಗ್
ಭಗತ್ ಸಿಂಗ್ (bhagat singh)ಅವರು ದೇಶಕಂಡ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಅಗ್ರಗಣ್ಯರು. ಅವಿಭಜಿತ ಪಂಜಾಬ್ ರಾಜ್ಯದ ಸಿಖ್ ಕುಟುಂಬದಲ್ಲಿ 1907 ಸೆಪ್ಟೆಂಬರ್ 28ರಂದು ಜನಿಸಿದರು. 1928ರಲ್ಲಿ ಲಾಲಾ ಲಜಪತ್ ರಾಯ್ ಅವರ ಸಾವಿಗೆ ಪ್ರತೀಕಾರವಾಗಿ ಬ್ರಿಟಿಷ್ ಪೊಲೀಸ್ ಸೂಪರಿಂಟೆಂಡೆಂಟ್ ಜೇಮ್ಸ್ ಸ್ಕಾಟ್ ಅವರನ್ನು ಕೊಲ್ಲುವ ಯೋಜನೆಯಲ್ಲಿ ಭಗತ್ ಸಿಂಗ್ ಅವರು ಭಾಗಿಯಾಗಿದ್ದರು. ಆದರೆ, ಆಕಸ್ಮಿಕವಾಗಿ ಇನ್ನೊಬ್ಬ ಯುವ ಪೋಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದರು. ಬ್ರಿಟಿಷ್‌ರಿಂದ ತಪ್ಪಿಸಿಕೊಳ್ಳಲು ಲಾಹೋರ್‌ಗೆ ಪರಾರಿಯಾದರು. ತಮ್ಮ ಕ್ರಾಂತಿಕಾರಿ ವಿಚಾರಗಳ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ತುಂಬಿದರು. ಬಾಲಕರಿದ್ದಾಗಲೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಅವರ ಮೇಲೆ ಪ್ರಭಾವ ಬೀರಿತ್ತು. ಅದೇ ಕಾರಣಕ್ಕೆ ಅವರು ಬ್ರಿಟಿಷರ ವಿರುದ್ಧ ಕಾಂತ್ರಿಯ ಮಾರ್ಗ ಹಿಡಿದರು. ಅಂತಿಮವಾಗಿ ಬ್ರಿಟಿಷರು ಅವರನ್ನು ಸೆರೆ ಹಿಡಿದು ಗಲ್ಲಿಗೇರಿಸಿದರು. ನೇಣಿಗೆ ಕೊರಳೊಡ್ಡಿದಾಗ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತಷ್ಟೇ. ಈ ತರುಣ ಕ್ರಾಂತಿಕಾರಿ ಭಗತ್ ಸಿಂಗ್ ಈಗಲೂ ಭಾರತೀಯರಿಗೆ ಪ್ರೇರಣೆಯಾಗಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ
ಭಾರತ ಕಂಡ ಅತ್ಯಂತ ಧೀಮಂತ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ(Lal bahadur shastri). 1904 ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮೊಘಲ್‌ಸರಾಯಿಯಲ್ಲಿ ಜನಿಸಿದರು. ಅವರು ಕಾಶಿ ವಿದ್ಯಾಪೀಠದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದಾಗ ಅವರಿಗೆ “ಶಾಸ್ತ್ರಿ” ವಿದ್ವಾಂಸ ಎಂಬ ಬಿರುದು ನೀಡಲಾಯಿತು. ಗಾಂಧಿ ಅವರಿಂದ ಪ್ರೇರಣೆಗೊಂಡ ಶಾಸ್ತ್ರಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಅನೇಕ ಬಾರಿ ಅವರು ಸೆರೆಮನೆವಾಸ ಕೂಡ ಅನುಭವಿಸಬೇಕಾಯಿತು. ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಜೈ ಜವಾನ್ ಮತ್ತು ಜೈ ಕಿಸಾನ್ ಎಂಬ ಮಂತ್ರದ ಮೂಲಕ ದೇಶವನ್ನು ಪ್ರಗತಿಯಲ್ಲಿ ಕೊಂಡೊಯ್ದರು. 1966ರ ಜನವರಿ 11ರಂದು ಶಾಸ್ತ್ರಿ ಅವರು ತಾಷ್ಕೆಂಟ್‌ನಲ್ಲಿ ನಿಧನರಾದರು.
ರಾಮ ಪ್ರಸಾದ್ ಬಿಸ್ಮಿಲ್
ಭಾರತ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳ ಪೈಕಿ ರಾಮ್ ಪ್ರಸಾದ್ ಬಿಸ್ಮಿಲ್ (ram prasad bismil) ಪ್ರಮುಖರು. ಸ್ವಾತಂತ್ರ್ಯದೆಡೆಗಿನ ಉತ್ಕಟ ಬಯಕೆ ಹಾಗೂ ಕಾಂತ್ರಿಕಾರಿ ಮನೋಭಾವ ಅವರನ್ನು ಇತರ ನಾಯಕರಿಗಿಂತಲೂ ಭಿನ್ನವಾಗಿಸಿತ್ತು. ಹಾಗಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ರಾಮ್ ಪ್ರಸಾದ್ ಅವರಿಗೆ ವಿಶೇಷವಾದ ಸ್ಥಾನವಿದೆ. ಕ್ರಾಂತಿಕಾರಿಗಳಿಗೆ ಪ್ರೇರಣೆ ನೀಡುತ್ತಿದ್ದ ಸರ್ಪರೋಷಿ ಕಿ ತಮ್ಮನ್ನ ಗೀತೆಯನ್ನು ಬರೆದಿದ್ದು ಇವರೇ. ರಾಮ್ ಪ್ರಸಾದ್ ಅವರು ಹೋರಾಟಗಾರರು ಮಾತ್ರವಲ್ಲದೇ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಉತ್ತಮ ಕವಿಯೂ ಆಗಿದ್ದರು. ರಾಮ್, ಅಜ್ಞಾತ್ ಮತ್ತು ಬಿಸ್ಮಿಲ್ ಎಂಕ ಅಂಕಿತನಾಮದಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸುವ ಕವಿತೆಗಳನ್ನು ಬರೆಯುತ್ತಿದ್ದರು. ಹಿಂದುಸ್ತಾನ್ ರಿಪಬ್ಲಿಕನ್ ಅಸೋಷಿಯೇಶನ್ ಎಂಬ ಕ್ರಾಂತಿಕಾರಿ ಸಂಸ್ಥೆಯನ್ನು ಸ್ಥಾಪಿಸಿದ್ದರು. ಬ್ರಿಟಿಷರ್ ರಾಮಪ್ರಸಾದ್ ಬಿಸ್ಮಿಲ್ ಅವರನ್ನು 1927 ಡಿಸೆಂಬರ್ 27ರಂದು ಗೋರಖಪುರ ಜೈಲಿನಲ್ಲಿ ನೇಣಿಗೇರಿಸಿದರು.
ರಾಣಿ ಲಕ್ಷ್ಮೀಬಾಯಿ
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳಾ ಹೋರಾಟಗಾರರ ಪಾತ್ರವೂ ಹಿರಿದಾಗಿದೆ. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ದಾಖಲಾಗಿರುವ 1857ರ ಹೋರಾಟದ ನೇತೃತ್ವವನ್ನು ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ (rani lakshmi bai) ಅವರು ಹೊತ್ತುಕೊಂಡಿದ್ದರು. ಭಾರತದ ಹೋರಾಟದಲ್ಲಿ ಲಕ್ಷ್ಮೀ ಬಾಯಿ ಅವರ ಕಾಣಿಕೆ ಅತ್ಯಮೂಲ್ಯವಾಗಿದೆ. 1828ರಲ್ಲಿ ಜನಿಸಿದ ಝಾನ್ಸಿ ರಾಣಿ ಸ್ವಾತಂತ್ರ್ಯ ಹೋರಾಟದ ಕಿಚ್ಚಿಗೆ ಕಾರಣರಾದರು. ಅಂದು ಅವರು ಬ್ರಿಟಿಷ್‌ರ ವಿರುದ್ಧ ತೋರಿದ ಕೆಚ್ಚೆದೆಯ ಹೋರಾಟವು ಮುಂದೆ ಹೋರಾಟದಲ್ಲಿ ಅನೇಕರಿಗೆ ದಾರೀದೀಪವಾಯಿತು.
ಮಂಗಲ್ ಪಾಂಡೆ
1827ರಲ್ಲಿ ಜನಿಸಿದ ಮಂಗಲ್ ಪಾಂಡೆ (mangal pandey) ಸ್ವಾತಂತ್ರ್ಯ ಚಳುವಳಿಯ ಪ್ರವರ್ತಕರಾಗಿದ್ದರು. 1857ರ ಸ್ವಾತಂತ್ರ್ಯ ಹೋರಾಟ ಆರಂಭವಾಗಲು ಕಾರಣರಾದರು. ಬ್ರಿಟಿಷ್ ಸೇನೆಯಲ್ಲಿ ಭಾರತೀಯ ಯೋಧರು ಬ್ರಿಟಿಷರ ವಿರುದ್ಧ ತಿರುಗಿ ಬೀಳಲು ಕಾರಣಿಭೂತರಾದರು. ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಭಾರತದಲ್ಲಿ ಅಧಿಕಾರ ನಡೆಸುತ್ತಿದ್ದ ಬ್ರಿಟಿಷ್‌ರಿಗೆ ಮೊದಲ ಬಾರಿಗೆ ಚುರುಕು ಮುಟ್ಟಿಸಿದರು. 1857ರ ದಂಗೆಯ ಬಳಿಕ ಈಸ್ಟ್ ಇಂಡಿಯಾ ಕಂಪನಿ ಕೈಯಲ್ಲಿದ್ದ ಅಧಿಕಾರವನ್ನು ಬ್ರಿಟಿಷ್ ಆಡಳಿತವು ತನ್ನ ಕೈಗೆ ತೆಗೆದುಕೊಂಡಿತು. ಅಷ್ಟರ ಮಟ್ಟಿಗೆ ಮಂಗಲ್ ಪಾಂಡೆ ಅವರು ಬ್ರಿಟಿಷ್‌ರಿಗೆ ದುಸ್ವಪ್ನವಾಗಿದ್ದರು. ಭಾರತ ಸ್ವಾತಂತ್ರ್ಯ ಹೋರಾಟದ ಮೊದಲ ಕ್ರಾಂತಿಯ ಕಿಡಿ ಮಂಗಲ್ ಪಾಂಡೆ ಅವರು.
ಈ ಸುದ್ದಿಯನ್ನೂ ಓದಿ: Independence Day 2023 : ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾದ ಸ್ಥಳಗಳಿವು
ನಾನಾ ಸಾಹೀಬ್
1857ರ ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರ ಕ್ರಾಂತಿಕಾರಿಗಳ ಗುಂಪನ್ನು ಮುನ್ನಡೆಸಿದವರು ನಾನಾ ಸಾಹಿಬ್ (Nana Sahib) ಅವರು. ಈಸ್ಟ್ ಇಂಡಿಯಾ ಕಂಪನಿಯ ಸೈನಿಕರನ್ನು ಕಾನ್ಪುರದಲ್ಲಿ ಸದೆಬಡಿದರು. ಅಳಿದುಳಿದ ಬ್ರಿಟಿಷ್ ಸೈನಿಕರಿಗೆ ಯಮಲೋಕದ ದಾರಿ ತೋರಿಸಿದರು. ಬ್ರಿಟಿಷ್ ಶಿಬಿರವನ್ನು ಧ್ವಂಸ ಮಾಡಿದರು. ನಾನಾ ಸಾಹಿಬ್ ಕೇವಲ ಧೈರ್ಯಶಾಲಿ ಮಾತ್ರವಲ್ಲ ನಿರ್ಭಿತ ಕೂಡ ಆಗಿದ್ದರು. ಜತೆಗೆ, ನೂರಾರು ಭಾರತೀಯ ಪಡೆಗಳನ್ನು ನಿರ್ವಹಿಸಿದ ಮತ್ತು ಸಂಘಟಿಸಿದ ಪ್ರತಿಭಾನ್ವಿತ ಆಡಳಿತಗಾರರಾಗಿದ್ದರು. ಅವರು ಭಾರತದ ಅತ್ಯುತ್ತಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.