ನವದೆಹಲಿ: ದೇಶಾದ್ಯಂತ 77ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2023 Live Updates) ಸಂಭ್ರಮ ಮನೆಮಾಡಿದೆ. ಎಲ್ಲೆಡೆ ತಿರಂಗಾ ಹಾರಿಸುವ ಮೂಲಕ, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಗಳ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು. ಕೆಂಪು ಕೋಟೆಯಲ್ಲಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ, ದೇಶದ ಜನರನ್ನುದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ: Independence Day 2023 : ಟೆಲಿಫೋನ್, ಮೊಬೈಲ್ ಇಲ್ಲದ ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂವಹನ ಹೀಗಿತ್ತು!
ಗ್ಯಾರಂಟಿ ಯೋಜನೆ ಪ್ರಸ್ತಾಪಿಸಿದ ಸಿದ್ದರಾಮಯ್ಯ
ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಬಳಿಕ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿದರು. ನಾಡಿನ ಬಡವರ ಏಳಿಗೆಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಯೋಜನೆಗಳನ್ನೂ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಮಾಣೆಕ್ ಷಾ ಮೈದಾನದಲ್ಲಿ ಸ್ವಾತಂತ್ರ್ಯ ಸಂಭ್ರಮ
ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ ಅದ್ಧೂರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ಬಳಿಕ ಗೌರವ ವಂದನೆ ಸ್ವೀಕರಿಸಿದರು.
ದೇಶಕ್ಕಾಗಿ ದುಡಿಯೋಣ ಎಂದು ಭಾಷಣ ಮುಗಿಸಿದ ಮೋದಿ
ನನ್ನ ಮೇಲೆ ನೀವು ಭರವಸೆ ಇಟ್ಟು 2014ರಲ್ಲಿ ಪ್ರಧಾನಿ ಮಾಡಿದಿರಿ. ನಾನು ಪ್ರಧಾನಿಯಾದ ಬಳಿಕ ಪ್ರತಿಪಕ್ಷಣವೂ ನಿಮ್ಮ ಏಳಿಗೆಗಾಗಿ ಶ್ರಮಿಸಿದ್ದೇನೆ. ನನ್ನ ಕನಸಿನಲ್ಲೂ ದೇಶದ ಜನ, ಅಭಿವೃದ್ಧಿಯೇ ನೆನಪಾಗುತ್ತದೆ. ಮುಂದಿನ ದಿನಗಳಲ್ಲೂ ನಾನು ಇದನ್ನೇ ಮಾಡುತ್ತೇನೆ. ಇನ್ನು 140 ಕೋಟಿ ಜನರು ದೇಶದ ಏಳಿಗೆಗೆ ಶ್ರಮಿಸೋಣ. ದೇಶಕ್ಕಾಗಿ ಮಡಿದರು ಎಂದು ನಾವು ಇತಿಹಾಸದಿಂದ ತಿಳಿದಿದ್ದೇವೆ. ಆದರೆ, 2047ರ ವೇಳೆಗೆ ದೇಶವನ್ನು ಉಚ್ಛ್ರಾಯ ಸ್ಥಿತಿಗೆ ತಲುಪಿಸಲು ದೇಶಕ್ಕಾಗಿ ಬದುಕೋಣ, ದೇಶಕ್ಕಾಗಿ ದುಡಿಯೋಣ. ಜೈಹಿಂದ್ ಎಂದು ಮೋದಿ ಸ್ವಾತಂತ್ರ್ಯೋತ್ಸವದ ಭಾಷಣ ಮುಗಿಸಿದರು.
ಪರಿವಾರವಾದದ ವಿರುದ್ಧ ಮೋದಿ ಗುಡುಗು
ನರೇಂದ್ರ ಮೋದಿ ಅವರು ಪರಿವಾರವಾದದ ವಿರುದ್ಧ ವಾಗ್ದಾಳಿ ನಡೆಸಿದರು. ಪರಿವಾರವಾದ ಪಕ್ಷವು ಕುಟುಂಬ, ಕುಟುಂಬಕ್ಕಾಗಿ ಹಾಗೂ ಕುಟುಂಬದಿಂದ ಇರುವ ಪಕ್ಷವಾಗಿದೆ. ಪರಿವಾರವಾದವು ಪ್ರತಿಭೆ, ಪರಿಶ್ರಮದ ವಿರುದ್ಧ ಇದೆ. ಹಾಗಾಗಿ, ದೇಶದ ಪ್ರಜಾಪ್ರಭುತ್ವದ ಏಳಿಗೆಗಾಗಿ ಪರಿವಾರವಾದವನ್ನು ನಿರ್ಮೂಲನೆ ಮಾಡಬೇಕಾಗಿದೆ. ತುಷ್ಟೀಕರಣವು ಸಾಮಾಜಿಕ ನ್ಯಾಯಕ್ಕೆ ತುಂಬ ನಷ್ಟ ಮಾಡಿದೆ. ತುಷ್ಟೀಕರಣದ ರಾಜಕೀಯ, ತುಷ್ಟೀಕರಣದ ಮನಸ್ಥಿತಿಯನ್ನು ನಾವು ನಿರ್ಮೂಲನೆ ಮಾಡಬೇಕಿದೆ. ದೇಶ ಏಳಿಗೆ ಹೊಂದಬೇಕಾದರೆ, ದೇಶವು 2024ರ ವೇಳೆಗೆ ವಿಕಸಿತ ಭಾರತ ಆಗಬೇಕಾದರೆ, ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಬೇಕು ಎಂದು ನರೇಂದ್ರ ಮೋದಿ ಹೇಳಿದರು.
ವಿಶ್ವಕರ್ಮ ಯೋಜನೆ ಘೋಷಿಸಿದ ಮೋದಿ, ಏನಿದು?
ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ವಿಶ್ವಕರ್ಮ ಯೋಜನೆ ಘೋಷಿಸಿದರು. ಮುಂದಿನ ತಿಂಗಳು (ಸೆಪ್ಟೆಂಬರ್) ಆಚರಿಸುವ ವಿಶ್ವಕರ್ಮ ಜಯಂತಿ ವೇಳೆ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಮೋದಿ ತಿಳಿಸಿದರು. ಕ್ಷೌರಿಕರು, ಕುಶಲಕರ್ಮಿಗಳು, ಶಿಲ್ಪಿಗಳು ಸೇರಿ ಬಡವರಿಗಾಗಿ 13 ರಿಂದ 15 ಸಾವಿರ ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ನರೇಂದ್ರ ಮೋದಿ ತಿಳಿಸಿದರು. ಅಲ್ಲದೆ, ಯುವಕರಿಗೆ ಡ್ರೋನ್ ಬಳಕೆ, ಡ್ರೋನ್ ರಿಪೇರಿ ಸೇರಿ ಹಲವು ಕೌಶಲ ಅಭಿವೃದ್ಧಿಗೊಳಸಲಾಗುವುದು. ಇದರಿಂದ ಕೃಷಿಯಲ್ಲೂ ಡ್ರೋನ್‌ಗಳ ಬಳಕೆಗೆ ಉತ್ತೇಜನ ನೀಡಲಾಗುವುದು ಎಂದು ನರೇಂದ್ರ ಮೋದಿ ಹೇಳಿದರು.