ನವದೆಹಲಿ: ದೇಶದ 77ನೇ ಸ್ವಾತಂತ್ರ್ಯೋತ್ಸವದ (Independence Day 2023) ಹಿನ್ನೆಲೆಯಲ್ಲಿ ಕೆಂಪು ಕೋಟೆಯಲ್ಲಿ ನಿಂತು ಭಾಷಣ ಮಾಡುವ ವೇಳೆ ನರೇಂದ್ರ ಮೋದಿ ಅವರು ದೇಶದ ಏಳಿಗೆಯನ್ನು ಬಣ್ಣಿಸಿದರು. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಜತೆಗೆ ದೇಶದ ಏಳಿಗೆಗೆ ಕಾರಣರಾದ, ಕಾರಣರಾಗುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ಏಳಿಗೆಗಾಗಿ ನೂತನ ವಿಶ್ವಕರ್ಮ ಯೋಜನೆ ಘೋಷಿಸಿದರು.
“ಪರಂಪರೆಯಿಂದ ವೃತ್ತಿಯಲ್ಲಿ ತೊಡಗಿರುವವರು, ಒಬಿಸಿ ಸಮುದಾಯದವರಿಗೆ ಅನುಕೂಲವಾಗಲಿ ಎಂದು ವಿಶ್ವಕರ್ಮ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಬಟ್ಟೆ ತೊಳೆಯುವವರು (ಧೋಬಿ), ಕ್ಷೌರಿಕರು ಸೇರಿ ಎಲ್ಲ ಪೂರ್ವಜರ ವೃತ್ತಿಯಲ್ಲಿ ತೊಡಗಿರುವವರ ಏಳಿಗೆಗಾಗಿ ಮುಂದಿನ ತಿಂಗಳು ನಡೆಯುವ ವಿಶ್ವಕರ್ಮ ಜಯಂತಿಯ ದಿನದಂದು 13ರಿಂದ ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆ ಜಾರಿಗೊಳಿಸಲಾಗುತ್ತಿದೆ” ಎಂದು ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ತಿಳಿಸಿದರು.
ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆ
ದೇಶಾದ್ಯಂತ 15 ಸಾವಿರ ಮಹಿಳಾ ಸ್ವಹಾಯ ಸಂಘಗಳನ್ನು ಸ್ಥಾಪಿಸುವುದಾಗಿಯೂ ನರೇಂದ್ರ ಮೋದಿ ಘೋಷಿಸಿದರು. ದೇಶದ ಎರಡು ಕೋಟಿ ಮಹಿಳೆಯರನ್ನು ಕೋಟ್ಯಧಿಪತಿಯನ್ನಾಗಿ ಮಾಡುವುದು ನನ್ನ ಕನಸಾಗಿದೆ. ಅದರಂತೆ, ದೇಶಾದ್ಯಂತ 15 ಸಾವಿರ ಮಹಿಳಾ ಸ್ವಹಾಯ ಸಂಘಗಳನ್ನು ಸ್ಥಾಪಿಸಲಾಗುತ್ತದೆ. ಮಹಿಳಾ ಸ್ವಹಾಯ ಸಂಘಗಳಲ್ಲಿ ಡ್ರೋನ್ ಹಾರಿಸುವುದು, ಡ್ರೋನ್ ರಿಪೇರಿ, ಡ್ರೋನ್ ಬಳಕೆ ಸೇರಿ ಹಲವು ತರಬೇತಿ ನೀಡಲಾಗುವುದು. ಕೃಷಿಯಲ್ಲಿ ಕೂಡ ಡ್ರೋನ್‌ಗಳನ್ನು ಬಳಸಲು ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Independence Day 2023: ಮಣಿಪುರ ಶಾಂತಿಯಿಂದ ಡಿಜಿಟಲ್ ಕ್ರಾಂತಿವರೆಗೆ; ಮೋದಿ ಕೆಂಪು ಕೋಟಿ ಭಾಷಣದ ಮೋಡಿ
ದೇಶಕ್ಕಾಗಿ ಜೀವಿಸೋಣ ಎಂದು ಭಾಷಣ ಮುಗಿಸಿದ ಮೋದಿ
ನನ್ನ ಮೇಲೆ ನೀವು ಭರವಸೆ ಇಟ್ಟು 2014ರಲ್ಲಿ ಪ್ರಧಾನಿ ಮಾಡಿದಿರಿ. ನಾನು ಪ್ರಧಾನಿಯಾದ ಬಳಿಕ ಪ್ರತಿಪಕ್ಷಣವೂ ನಿಮ್ಮ ಏಳಿಗೆಗಾಗಿ ಶ್ರಮಿಸಿದ್ದೇನೆ. ನನ್ನ ಕನಸಿನಲ್ಲೂ ದೇಶದ ಜನ, ಅಭಿವೃದ್ಧಿಯೇ ನೆನಪಾಗುತ್ತದೆ. ಮುಂದಿನ ದಿನಗಳಲ್ಲೂ ನಾನು ಇದನ್ನೇ ಮಾಡುತ್ತೇನೆ. ಇನ್ನು 140 ಕೋಟಿ ಜನರು ದೇಶದ ಏಳಿಗೆಗೆ ಶ್ರಮಿಸೋಣ. ದೇಶಕ್ಕಾಗಿ ಮಡಿದರು ಎಂದು ನಾವು ಇತಿಹಾಸದಿಂದ ತಿಳಿದಿದ್ದೇವೆ. ಆದರೆ, 2047ರ ವೇಳೆಗೆ ದೇಶವನ್ನು ಉಚ್ಛ್ರಾಯ ಸ್ಥಿತಿಗೆ ತಲುಪಿಸಲು ದೇಶಕ್ಕಾಗಿ ಬದುಕೋಣ, ದೇಶಕ್ಕಾಗಿ ದುಡಿಯೋಣ. ಜೈಹಿಂದ್ ಎಂದು ಮೋದಿ ಸ್ವಾತಂತ್ರ್ಯೋತ್ಸವದ ಭಾಷಣ ಮುಗಿಸಿದರು.