Site icon Vistara News

Independence Day 2023: ಮಣಿಪುರ ಶಾಂತಿಯಿಂದ ಡಿಜಿಟಲ್‌ ಕ್ರಾಂತಿವರೆಗೆ; ಮೋದಿ ಕೆಂಪು ಕೋಟಿ ಭಾಷಣದ ಮೋಡಿ

Narendra Modi At Red Fort

Independence Day 2023: Narendra Modi Assures Peace In Manipur, here are speeches important points

ನವದೆಹಲಿ: ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ (Independence Day 2023) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಬಳಿಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಭಾಷಣ ಆರಂಭಿಸುತ್ತಲೇ ಮಣಿಪುರ ಹಿಂಸಾಚಾರದ ಕುರಿತು ಮಾತನಾಡಿದ ಅವರು, “ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ, ಮಾತೆಯರ ಮೇಲೆ ನಡೆದ ದೌರ್ಜನ್ಯದ ಕುರಿತು ನಮಗೆ ಬೇಸರವಿದೆ. ಆದರೆ, ಕೆಲ ದಿನಗಳಿಂದ ಮಣಿಪುರದಲ್ಲಿ ಶಾಂತಿ ನೆಲೆಸುತ್ತಿದೆ. ಮಣಿಪುರದ ಜತೆ ದೇಶವೇ ನಿಂತಿದೆ. ಮಣಿಪುರದಲ್ಲಿ ಶಾಂತಿ ನೆಲೆಸುವುದು ನಿಶ್ಚಿತ” ಎಂದು ಹೇಳಿದರು.

ಮಹನೀಯರ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ

ದೇಶದ ಸ್ವಾತಂತ್ರ್ಯಕ್ಕೆ ಸಾವಿರಾರು ಮಹನೀಯರು ಹೋರಾಟ ನಡೆಸಿದರು. ಸಾವಿರ ವರ್ಷದ ಗುಲಾಮಗಿರಿಯಿಂದ 1947ರಲ್ಲಿ ದೇಶ ಸ್ವಾತಂತ್ರ್ಯ ಹೊಂದಿತು. ದೇಶಕ್ಕಾಗಿ ಮಡಿದ ವೀರರನ್ನು, ಗಣ್ಯರನ್ನು, ಹುತಾತ್ಮರನ್ನು ನೆನೆಯೋಣ. ಸಾವಿರ ವರ್ಷದ ಇತಿಹಾಸವನ್ನು ಅರಿಯುತ್ತ ನಾವು ಹೊಸದೊಂದು ಶಪಥ ಮಾಡೋಣ. ಮುಂದಿನ ಸಾವಿರ ವರ್ಷದವರೆಗೆ ನಾವು ದೇಶವನ್ನು ಸುವರ್ಣ ಯುಗದತ್ತ ಕೊಂಡೊಯ್ಯೋಣ. ದೇಶದ ಏಳಿಗೆಗೆ ನಾವೆಲ್ಲರೂ ಶ್ರಮಿಸೋಣ.

ಮೋದಿ ಭಾಷಣ ಲೈವ್‌ ನೋಡಿ

ಭಾರತ ಸಮೃದ್ಧಿ, ಸಕಲ ಕ್ಷೇತ್ರವೂ ಅಭಿವೃದ್ಧಿ

ಭಾರತವು ಆಧುನಿಕತೆಗೆ ತೆರೆದುಕೊಳ್ಳುವ ಜತೆಗೆ ದೇಶದ ಬಡವರ ಏಳಿಗೆಯೂ ಆಗುತ್ತಿದೆ. ಬಡವರಿಗೆ ಶುದ್ಧ ನೀರು ಪೂರೈಸಲು ಜಲಶಕ್ತಿ ಸ್ಥಾಪಿಸಿದೆವು. ಸಹಕಾರಿ ಕ್ಷೇತ್ರದ ಏಳಿಗೆಗೆ ಶ್ರಮಿಸಿದೆವು. ಯುವಕರ ಕೌಶಲ ಅಭಿವೃದ್ಧಿಗೊಳಿಸಿದೆವು. ಇದರಿಂದಾಗಿ ಭಾರತವು ಇಂದು ವಿಶ್ವದ ಐದನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿದೆ. ಇದರಿಂದ ದೇಶದ ಸಾಮರ್ಥ್ಯ ಹೆಚ್ಚಾಗುತ್ತಿದೆ. 10 ವರ್ಷದಲ್ಲಿ ದೇಶವು ಬದಲಾವಣೆ ಕಂಡಿದೆ. 10 ವರ್ಷದಲ್ಲಿ ಕೇಂದ್ರದಿಂದ ರಾಜ್ಯಗಳಿಗೆ 100 ಲಕ್ಷ ಕೋಟಿ ರೂಪಾಯಿಯನ್ನು ನೀಡಲಾಗಿದೆ. ಮೊದಲು ಬಡವರಿಗೆ ಮನೆ ನಿರ್ಮಿಸಲು 90 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿತ್ತು. ಆದರೆ, ಈಗ ಅದು 4 ಲಕ್ಷ ಕೋಟಿ ರೂ.ಗಿಂತ ಜಾಸ್ತಿಯಾಗಿದೆ. ರೈತರಿಗೆ ಯೂರಿಯಾ ಗೊಬ್ಬರಕ್ಕೆ ಸಬ್ಸಿಡಿ, ಮುದ್ರಾ ಯೋಜನೆಯಿಂದ 8 ಕೋಟಿ ಜನರಿಗೆ ಅನುಕೂಲವಾಗಿದೆ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಶ್ರೇಣಿ (MSME) ಉದ್ಯಮಗಳಿಗೆ ನೆರವು ನೀಡಲಾಗಿದೆ. ಹೀಗೆ, ಎಲ್ಲ ಕ್ಷೇತ್ರಗಳ ಏಳಿಗೆಗೆ ಕೇಂದ್ರ ಸರ್ಕಾರ ಶ್ರಮಿಸಿದೆ ಎಂದು ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: Independence Day 2023: ಭಾರತದ ಧ್ವಜ ಹಾರಿಸಿದ ಮೊದಲ ಮಹಿಳೆ ಭಿಕಾಜಿ ಕಾಮಾ

ಭಾರತ ಫಸ್ಟ್, ನಾವೇ ಬೆಸ್ಟ್‌

30 ವರ್ಷದ ಬಳಿಕ ದೇಶದಲ್ಲಿ ಸ್ಥಿರ ಸರ್ಕಾರ ಬೇಕು ಎಂದು ನಮ್ಮನ್ನು 2014ರಲ್ಲಿ ಆಯ್ಕೆ ಮಾಡಿದರು. ಜನರ ವಿಶ್ವಾಸದಂತೆ ನಾವು ಕೂಡ ಕಳೆದ 9 ವರ್ಷದಿಂದ ಆಡಳಿತ ನಡೆಸುತ್ತಿದ್ದೇವೆ. ದೇಶದ ಜನರಿಗಾಗಿ ನಾವು ಇನ್ನಿಲ್ಲದಂತೆ ಶ್ರಮಿಸುತ್ತಿದೆ. ದೇಶದ ಪ್ರತಿಯೊಂದು ಮೂಲೆಯಲ್ಲೂ ಅಭಿವೃದ್ಧಿಯಾಗುತ್ತಿದೆ. ದೇಶದ ಆಡಳಿತಶಾಹಿಯಲ್ಲಿ ಪಾರದರ್ಶಕತೆ ತಂದ ಕಾರಣ ಉತ್ತಮ ಆಡಳಿತವಿದೆ. ರಿಫಾರ್ಮ್‌, ಪರ್‌ಫಾರ್ಮ್‌, ಟ್ರಾನ್ಸ್‌ಫಾರ್ಮ್‌ ಎಂಬ ತತ್ವದಿಂದ ದೇಶ ಮುನ್ನುಗ್ಗುತ್ತಿದೆ.

ಏಳಿಗೆಗೆ ಶ್ರಮಿಸುವ ದೇಶದ ಪ್ರತಿಯೊಬ್ಬರಿಗೂ ನಮನ

ಭಾರತದ ಮಕ್ಕಳು ಉಪಗ್ರಹಗಳನ್ನು ತಯಾರಿಸುತ್ತಿದ್ದಾರೆ. ಭಾರತದ ಯುವಕ-ಯುವತಿಯರು ವಿಜ್ಞಾನದತ್ತ ಹೊರಳುತ್ತಿದ್ದಾರೆ. ದೇಶಕ್ಕೆ ದೇಶವೇ ಡಿಜಿಟಲ್‌ ಆಗುತ್ತಿದೆ. ದೇಶದ ಮಾತೆಯರು, ಮಹಿಳೆಯರು, ಯುವತಿಯರು ಕೂಡ ದೇಶದ ಏಳಿಗೆಗೆ ಕೈಜೋಡಿಸುತ್ತಿದ್ದಾರೆ. ರೈತ ಬಂಧುಗಳಿಗೆ ಕೂಡ ನಾನು ಅಭಿನಂದಿಸುತ್ತೇನೆ. ಕೃಷಿಕರು, ಶ್ರಮಿಕರು, ಕಾರ್ಮಿಕರು ಸೇರಿ ಎಲ್ಲ ಕೋಟಿ ಕೋಟಿ ಜನಮನಗಳಿಗೆ ನನ್ನ ನಮನಗಳು. ವೈದ್ಯರು, ಎಂಜಿನಿಯರ್‌ಗಳು, ನರ್ಸ್‌ಗಳು, ಶಿಕ್ಷಕರು, ವಿಜ್ಞಾನಿಗಳು ಸೇರಿ ದೇಶದ ಸಮಸ್ತ 140 ಕೋಟಿ ಜನರು ಕೂಡ ದೇಶದ ಏಳಿಗೆಯ ಭಾಗವಾಗಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು ಎಂದು ನರೇಂದ್ರ ಮೋದಿ ಹೇಳಿದರು.

Exit mobile version