Site icon Vistara News

Independence Day 2023: ತಿರಂಗಾವನ್ನು ಜಾಲತಾಣಗಳ ಡಿಪಿ ಇಟ್ಟು ದೇಶಪ್ರೇಮ ಮೆರೆಯಲು ಮೋದಿ ಕರೆ

Narendra Modi

Independence Day 2023: Narendra Modi urges people to put tricolour as social media profile picture

ನವದೆಹಲಿ: ದೇಶಕ್ಕೆ ದೇಶವೇ 76ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2023) ಸಂಭ್ರಮಕ್ಕೆ ಕಾಲಿಡುತ್ತಿದೆ. ಆಗಸ್ಟ್‌ 15ರಂದು ದೇಶಾದ್ಯಂತ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ. ಅದರಲ್ಲೂ, ಕೆಂಪು ಕೋಟೆಯಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮಕ್ಕೆ ದೆಹಲಿ ಸಿದ್ಧವಾಗುತ್ತಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬರೂ ತಿರಂಗಾವನ್ನು ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಫೋಟೊವನ್ನಾಗಿಸಿ ಎಂದು ಕರೆ ನೀಡಿದ್ದಾರೆ.

“ಹರ್‌ ಘರ್‌ ತಿರಂಗಾ (ಪ್ರತಿಯೊಂದು ಮನೆಯಲ್ಲೂ ತಿರಂಗಾ) ಅಭಿಯಾನದ ಭಾಗವಾಗಿ ಎಲ್ಲರೂ ತಿರಂಗಾವನ್ನು ಸಾಮಾಜಿಕ ಜಾಲತಾಣಗಳ ಡಿಪಿಯಾಗಿ (Social Media Display Picture) ಇಡೋಣ. ಆ ಮೂಲಕ ನಮ್ಮ ಹಾಗೂ ದೇಶದ ನಡುವಿನ ಭಾವುಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸೋಣ” ಎಂದು ನರೇಂದ್ರ ಮೋದಿ ಅವರು ಟ್ವೀಟ್‌ (ಈಗ X) ಮಾಡಿದ್ದಾರೆ. ಹಾಗೆಯೇ, ಅವರು ತಮ್ಮ ಡಿಪಿಯನ್ನು ತಿರಂಗಾ ಆಗಿ ಬದಲಿಸಿದ್ದಾರೆ.

ಫೋಟೊ ಅಪ್‌ಲೋಡ್‌ ಮಾಡಲೂ ಕರೆ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್‌ 13ರಿಂದ 15ರವರೆಗೆ ಹರ್‌ ಘರ್‌ ತಿರಂಗಾ ಅಭಿಯಾನ ಕೈಗೊಳ್ಳಲಾಗುತ್ತಿದೆ. ಹಾಗಾಗಿ, “ರಾಷ್ಟ್ರಧ್ವಜವು ದೇಶದ ಸ್ವಾತಂತ್ರ್ಯ ಹಾಗೂ ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರೂ ತಿರಂಗಾ ಜತೆ ಭಾವನಾತ್ಮಕ ಸಂಬಂದ ಹೊಂದಿದ್ದು, ಇದು ಹೆಚ್ಚು ಪರಿಶ್ರಮ ವಹಿಸಿ ದೇಶವನ್ನು ಏಳಿಗೆಯತ್ತ ಕೊಂಡೊಯ್ಯಲು ಸ್ಫೂರ್ತಿ ನೀಡುತ್ತದೆ. ಹಾಗಾಗಿ, ಆಗಸ್ಟ್‌ 13ರಿಂದ 15ರವರೆಗೆ ಕೈಗೊಳ್ಳುವ ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಹಾಗೆಯೇ, ತಿರಂಗಾ ಜತೆಗಿನ ನಿಮ್ಮ ಫೋಟೊ ಅಪ್‌ಲೋಡ್‌ ಮಾಡಿ” ಎಂದು ಈಗಾಗಲೇ ಕರೆ ನೀಡಿದ್ದಾರೆ.

ಇದನ್ನೂ ಓದಿ: Koppala News: ಕುಮ್ಮಟದುರ್ಗದ ಕೋಟೆಯಲ್ಲಿ 400 ಅಡಿ ಎತ್ತರದಲ್ಲಿ ಗಾಳಿಪಟದಂತೆ ಹಾರಾಡಿದ ತಿರಂಗ

ನೀವೂ ತಿರಂಗಾ ಜತೆಗಿನ ಫೋಟೊ ಅಪ್‌ಲೋಡ್‌ ಮಾಡಿ

ಮನೆಯ ಮೇಲೆ ಅಥವಾ ಮನೆಯ ಅಂಗಳದಲ್ಲಿ ತಿರಂಗಾ ಹಾರಿಸುವುದು, ನೀವು ತಿರಂಗಾ ಜತೆಗೆ ನಿಂತಿರುವ ಫೋಟೊಗಳನ್ನು ಹರ್‌ ಘರ್‌ ತಿರಂಗಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ದೇಶದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ. ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಹರ್‌ ಘರ್‌ ತಿರಂಗಾ ಅಭಿಯಾನ ಕೈಗೊಳ್ಳಲಾಗಿತ್ತು. ಈ ಬಾರಿಯೂ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ನೀವು ಕೂಡ https://harghartiranga.com ಗೆ ಭೇಟಿ ನೀಡಿ ಸುಲಭವಾಗಿ ಫೋಟೊ ಅಪ್‌ಲೋಡ್‌ ಮಾಡಬಹುದಾಗಿದೆ.

ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 15ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ದೇಶಾದ್ಯಂತ ಸುಮಾರು 1,800 ವಿಶೇಷ ಅತಿಥಿಗಳು ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗುತ್ತಿದೆ.

Exit mobile version